ಸತ್ತವರ ಪಟ್ಟಿಯಲ್ಲಿ ಬದುಕಿರುವ ವ್ಯಕ್ತಿಯ ಹೆಸರು ಉಲ್ಲೇಖಿಸಿದ ಶೋಭಾ ಕರಂದ್ಲಾಜೆ: ವ್ಯಾಪಕ ಟೀಕೆ

Spread the love

ಸತ್ತವರ ಪಟ್ಟಿಯಲ್ಲಿ ಬದುಕಿರುವ ವ್ಯಕ್ತಿಯ ಹೆಸರು ಉಲ್ಲೇಖಿಸಿದ ಶೋಭಾ ಕರಂದ್ಲಾಜೆ: ವ್ಯಾಪಕ ಟೀಕೆ

ಮಂಗಳೂರು: ಕಳೆದ ನಾಲ್ಕು ವರ್ಷಗಳಲ್ಲಿ ಹತ್ಯೆಯಾದ ಹಿಂದು, ಆರ್‌ಎಸ್‌ಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಪಟ್ಟಿಯೊಂದನ್ನು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಕಳುಹಿಸಿರುವ ಉಡುಪಿ–ಚಿಕ್ಕಮಗಳೂರು ಸಂಸದೆ ಶೋಭಾ ಕರದ್ಲಾಜೆ, ಪಟ್ಟಿಯಲ್ಲಿ ಜೀವಂತ ಇರುವವರ ಹೆಸರನ್ನೂ ಉಲ್ಲೇಖಿಸಿ ಟೀಕೆಗೆ ಗುರಿಯಾಗಿದ್ದಾರೆ.

23 ಹೆಸರುಗಳನ್ನೊಳಗೊಂಡ, ರಾಜಕೀಯ ಹತ್ಯೆಗೆ ಸಂಬಂಧಿಸಿದ ಪಟ್ಟಿಯಲ್ಲಿ ವೈಯಕ್ತಿಕ ಕೊಲೆ, ಆತ್ಮಹತ್ಯೆ ಪ್ರಕರಣಗಳನ್ನೂ ಸೇರಿಸಲಾಗಿದೆ. ಈ ಪೈಕಿ, ಜೀವಂತ ಇರುವ ಅಶೋಕ್ ಪೂಜಾರಿ ಎಂಬುವವರ ಹೆಸರು ಉಲ್ಲೇಖಿಸಿದ್ದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಟೀಕೆ ವ್ಯಕ್ತವಾಗಿದೆ.

ಹಲ್ಲೆಗೊಳಗಾಗಿದ್ದ ಅಶೋಕ್ ಪೂಜಾರಿ: ಮೂಲತಃ ಕಾರ್ಕಳ ತಾಲ್ಲೂಕಿನವರಾಗಿರುವ ಅಶೋಕ್ ಪೂಜಾರಿ ಮಂಗಳೂರಿನಲ್ಲಿ ವಾದ್ಯದ ತಂಡದಲ್ಲಿ ಕೆಲಸ ಮಾಡುತ್ತಿರುವವರು. 2015ರಲ್ಲಿ ಮಂಗಳೂರಿನ ಕುಲಶೇಖರದಿಂದ ಗಣೇಶೋತ್ಸವ ಸಮಾರಂಭ ಮುಗಿಸಿ ವಾಪಸಾಗುತ್ತಿದ್ದಾಗ ಅವರ ಮೇಲೆ ಹಲ್ಲೆ ನಡೆದಿತ್ತು. ಗಂಭೀರ ಗಾಯಗೊಂಡಿದ್ದ ಅವರು 45 ದಿನಗಳ ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದರು. ಆದರೆ, ಮೃತರ ಪಟ್ಟಿಯಲ್ಲಿ ಇವರ ಹೆಸರನ್ನೂ ಶೋಭಾ ಉಲ್ಲೇಖಿಸಿದ್ದಾರೆ.

ಸಚಿವ ಖಾದರ್‌ ಟೀಕೆ
ಬೆಂಗಳೂರು: ‘ಸಂಸದೆ ಶೋಭಾ ಕರಂದ್ಲಾಜೆ ತಮ್ಮ ರಾಜಕೀಯ ಲಾಭಕ್ಕಾಗಿ ಬದುಕಿರುವವರನ್ನೂ ಸತ್ತವರ ಪಟ್ಟಿಗೆ ಸೇರಿಸಿದ್ದಾರೆ’ ಎಂದು ಆಹಾರ ಸಚಿವ ಯು.ಟಿ. ಖಾದರ್ ಟೀಕಿಸಿದ್ದಾರೆ.

‘ಅಶೋಕ್ ಪೂಜಾರಿ ಬದುಕಿದ್ದಾರೆ. ಆದರೆ, ಶೋಭಾ ಅವರು ಕೇಂದ್ರ ಗೃಹ ಸಚಿವರಿಗೆ ಬರೆದಿರುವ ಪತ್ರದಲ್ಲಿ ಅವರ ಹತ್ಯೆಯಾಗಿದೆ ಎಂದು ತಿಳಿಸಿದ್ದಾರೆ. ಹತ್ಯೆಯಾಗಿರುವ ವಿನಾಯಕ ಬಾಳಿಗಾ, ಹರೀಶ್‌ ಪೂಜಾರಿ, ಪ್ರವೀಣ್ ಪೂಜಾರಿ ಅವರ ಹೆಸರಿಲ್ಲ. ಈ ಮೂವರು ದಕ್ಷಿಣ ಕನ್ನಡ ಜಿಲ್ಲೆಯವರಲ್ಲವೇ’ ಎಂದು ಖಾದರ್ ಪ್ರಶ್ನಿಸಿದ್ದಾರೆ.

‘ಇದರಿಂದ ಅವರ ಮನಸ್ಥಿತಿ ಎಂಥದ್ದು ಎಂಬುದು ಗೊತ್ತಾಗಿದೆ. ಈತನಕ ರಾಜ್ಯಮಟ್ಟದಲ್ಲಿ ಮಾನ ಹೋಗಿತ್ತು. ಈಗ ರಾಷ್ಟ್ರಮಟ್ಟದಲ್ಲಿ ಮರ್ಯಾದೆ ತೆಗೆದಿದ್ದಾರೆ’ ಎಂದು ಬುಧವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಸಚಿವರು ಉತ್ತರಿಸಿದ್ದಾರೆ.

ಶೋಭಾ ವಿಷಾದ
ಹತ್ಯೆಗೀಡಾದವರ ಪಟ್ಟಿಯಲ್ಲಿ ಅಶೋಕ್ ಪೂಜಾರಿ ಅವರ ಹೆಸರು ಕಣ್ತಪ್ಪಿನಿಂದ ಸೇರ್ಪಡೆಯಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಸ್ಪಷ್ಟಪಡಿಸಿದ್ದಾರೆ.

ಹಲ್ಲೆಗೊಳಗಾದವರ ಪಟ್ಟಿಯಲ್ಲಿ ಸೇರಬೇಕಿದ್ದ ಅಶೋಕ್ ಪೂಜಾರಿ ಹೆಸರು, ಕೊಲೆಯಾದವರ ಪಟ್ಟಿಗೆ ಸೇರಿದೆ. ಈ ಲೋಪ ಎಸಗಿದ್ದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಶೋಭಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.


Spread the love

1 Comment

  1. Aggressive and furious Shoba made a mistake to garner the votes as much as she can !! but landed with a grave mistake !

Comments are closed.