ಸರಕಾರದ ವಿವಿಧ ಸಾಲ ಹಾಗೂ ವಿಮಾ ಯೋಜನೆಗಳ ಮಾಹಿತಿ

ದಕ್ಷಿಣ ಕನ್ನಡ ಜಿಲ್ಲೆ – ಅರಿವು ಸಾಲ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
ಮ0ಗಳೂರು: ಅರಿವು ಸಿ.ಇ.ಟಿ ಯೋಜನೆಯಡಿ 2016-17ನೇ ಸಾಲಿನಲ್ಲಿ ಸಿ.ಇ.ಟಿ. ಮೂಲಕ ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪಡೆಯುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಸಿಇಟಿ ಕೌನ್ಸಿಲಿಂಗ್ ನಡೆಯುವ ಕೊನೆಯ ದಿನದವರೆಗೆ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಪ್ರಕಟಣೆ ತಿಳಿಸಿದೆ.

ಸ್ವಂತ ಉದ್ಯೋಗ ಕೈಗೊಳ್ಳಲು ಮಹಿಳೆಯರಿಂದ ಅರ್ಜಿ ಆಹ್ವಾನ
ಮ0ಗಳೂರು : ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಉದ್ಯೋಗಿನಿ ಯೋಜನೆಯಡಿ ಬ್ಯಾಂಕಿನಿಂದ ಸಾಲ ಪಡೆದು ಸ್ವಂತ ಉದ್ಯೋಗ ಕೈಗೊಳ್ಳಲು ಆರ್ಥಿಕವಾಗಿ ಹಿಂದುಳಿದ 18 ರಿಂದ 45 ವರ್ಷ ವಯೋಮಿತಿಯ ಹಾಗೂ ಕುಟುಂಬದ ವಾರ್ಷಿಕ ಆದಾಯ ರೂ.40,000/-ಕ್ಕೆ ಮೀರದ ಮಹಿಳೆಯರಿಂದ 2016-17ನೇ ಸಾಲಿಗೆ ಅರ್ಜಿ ಆಹ್ವಾನಿಸಲಾಗಿದೆ.
ಉದ್ಯಮವನ್ನು ಪ್ರಾರಂಭಿಸಲು ಆಸಕ್ತಿ ಇರುವ ಮಹಿಳೆಯರು ಅರ್ಜಿಯನ್ನು ಸಂಬಂಧಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಂದ ಪಡೆದು ಜುಲೈ 15ರೊಳಗಾಗಿ ದ್ವಿ-ಪ್ರತಿಯಲ್ಲಿ ಸಲ್ಲಿಸಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಉಪನಿರ್ದೇಶಕರ ಕಛೇರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಪಂಚಾಯತ್ ಕಟ್ಟಡ ಕೊಟ್ಟಾರ ಮಂಗಳೂರು ಇವರನ್ನು ಕಛೇರಿಯ ಸಮಯದಲ್ಲಿ ಅಥವಾ ದೂರವಾಣಿ ಸಂಖ್ಯೆ:0824-2458173ನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

ಭತ್ತದ ಬೆಳೆಗೆ ಪ್ರಧಾನಮಂತ್ರಿ ಫಸಲ್ ವಿಮಾಯೋಜನೆ
ಮ0ಗಳೂರು : ರಾಷ್ಟ್ರೀಯ ಬೆಳೆ ವಿಮಾ ಕಾರ್ಯಕ್ರಮವನ್ನು 2016-17ನೇ ಸಾಲಿನ ಮುಂಗಾರು ಹಂಗಾಮಿಗೆ ಮುಂದುವರಿಸಿ ಸರ್ಕಾರ ಆದೇಶ ಹೊರಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದರಿ ಯೋಜನೆಯಡಿ ಮುಂಗಾರು ಹಂಗಾಮಿಗೆ ಮಂಗಳೂರು ತಾಲೂಕಿನ ಮಂಗಳೂರು-ಎ ಹೋಬಳಿಯನ್ನು ಹೊರತು ಪಡಿಸಿ ಉಳಿದ ಎಲ್ಲಾ ಹೋಬಳಿಯ 193 ಗ್ರಾಮ ಪಂಚಾಯಿತಿಗಳಲ್ಲಿ ಅನುಷ್ಠಾನಗೊಳಿಸಲು ಅವಕಾಶವಿರುತ್ತದೆ.

ಮಳೆಯಾಶ್ರಿತ ಭತ್ತ ಬೆಳೆಯುವ ಎಲ್ಲಾ ರೈತರು ಹೆಕ್ಟೇರಿಗೆ ನಿಗದಿಪಡಿಸಿರುವ ಪ್ರಾರಂಭಿಕ ಇಳುವರಿ ಮೊತ್ತ ರೂ.51000/-ಕ್ಕೆ ಶೇ.2.0ರ ರೈತರ ಭಾಗದ ವಿಮಾಕಂತು ರೂ.1020/- ಗಳನ್ನು ಸಮೀಪದ ಬ್ಯಾಂಕ್‍ನಲ್ಲಿ ತುಂಬಿ ನೊಂದಾಯಿಸಿಕೊಳ್ಳಬಹುದು. 2016ರ ಮುಂಗಾರು ಹಂಗಾಮಿನಲ್ಲಿ ಬೆಳೆಸಾಲ ಪಡೆಯುವ ಮತ್ತು ಪಡೆಯದ ರೈತರು ಬ್ಯಾಂಕುಗಳಿಗೆ ಘೋಷಣೆಗಳನ್ನು ಜುಲೈ 31ರೊಳಗೆ ಸಲ್ಲಿಸಬೇಕು. ಈ ಯೋಜನೆಯು ಬೆಳೆಸಾಲ ಪಡೆದ ರೈತರಿಗೆ ಕಡ್ಡಾಯವಾಗಿದ್ದು, ಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ಪಹಣಿ/ಖಾತೆ/ಪಾಸ್‍ಪುಸ್ತಕ/ಕಂದಾಯ ರಶೀದಿ ಯಾವುದಾದರೂ ಒಂದನ್ನು ನೀಡಿ ನೊಂದಣಿ ಮಾಡಿಸಬಹುದು ಹಾಗೂ ಬೆಳೆ ಬಿತ್ತಿದ/ನಾಟಿ ಮಾಡಿದ 30 ದಿನಗಳೊಳಗೆ ಅಥವಾ ನಿಗದಿಪಡಿಸಿರುವ ದಿನಾಂಕದೊಳಗೆ ಯಾವುದು ಮುಂಚೆಯೋ ಆ ಅವಧಿಯೊಳಗೆ ಬ್ಯಾಂಕಿಗೆ ತಮ್ಮ ಘೋಷಣೆಗಳನ್ನು ಸಲ್ಲಿಸಬಹುದಾಗಿದೆ.

ಸಾಮಾನ್ಯ ಬೆಳೆ ಅಂದಾಜು ಸಮೀಕ್ಷೆಯಡಿ ರಾಜ್ಯ ಸರ್ಕಾರವು ನಡೆಸುವ ಬೆಳೆ ಕಟಾವು ಪ್ರಯೋಗಗಳ ಆಧಾರದ ಮೇಲೆ ಕಂಡು ಹಿಡಿಯಲಾದ ಇಳುವರಿ ಮಾಹಿತಿಯನ್ನು ಮಾತ್ರ ಪರಿಗಣಿಸಿ ಬೆಳೆ ವಿಮಾ ನಷ್ಟ ದ ಪರಿಹಾರವನ್ನು ಲೆಕ್ಕ ಹಾಕಿ ಇತ್ಯರ್ಥಪಡಿಸಲಾಗುವುದು. ಮುಂಗಾರು ಹಂಗಾಮಿನಲ್ಲಿ ಅಧಿಸೂಚಿಸಲಾದ ಭತ್ತದ ಬೆಳೆಗೆ ಆಲಿಕಲ್ಲು ಮಳೆ ಮತ್ತು ಭೂ ಕುಸಿತದಿಂದ ಉಂಟಾಗುವ ನಷ್ಟದ ನಿರ್ಧರಣೆಯನ್ನು ವೈಯಕ್ತಿಕವಾಗಿ ನಿರ್ಧರಿಸಿ ಬೆಳೆ ವಿಮಾ ನಷ್ಟ ಪರಿಹಾರವನ್ನು ವಿಮಾ ಸಂಸ್ಥೆಯು ಇತ್ಯರ್ಥ ಪಡಿಸುತ್ತದೆ. ಇಂತಹ ಸ್ಥಳೀಯ ಗಂಡಾಂತರಗಳ ಕಾರಣದಿಂದ ಬೆಳೆ ನಷ್ಟ ಸಂಭವಿಸಿದರೆ, ವಿಮೆ ಮಾಡಿಸಿರುವ ರೈತರು ಈ ಬಗ್ಗೆ ಸಂಬಂಧಪಟ್ಟ ಹಣಕಾಸು ಸಂಸ್ಥೆ ಅಥವಾ ವಿಮಾ ಸಂಸ್ಥೆಯ ಕಛೇರಿಗೆ ತಕ್ಷಣ ಸೂಚನೆ ನೀಡಬೇಕು ಮತ್ತು ಯಾವುದೇ ಸಂದರ್ಭದಲ್ಲಿ ವಿಮೆ ಮಾಡಿಸಿದ ಬೆಳೆಯ ವಿವರಗಳನ್ನು ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣಗಳನ್ನು 48 ಗಂಟೆಗಳೊಳಗಾಗಿ ತಿಳಿಸಬೇಕು. 2016ರ ಮುಂಗಾರು ಹಂಗಾಮಿನಲ್ಲಿ ಅಧಿಸೂಚಿತ ಘಟಕದಲ್ಲಿ ಶೇಕಡಾ 75ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡಲ್ಲಿ ಗರಿಷ್ಟ ಶೇಕಡಾ 25ರಷ್ಟು ಬೆಳೆ ವಿಮಾ ನಷ್ಟ ಪರಿಹಾರವನ್ನು ವಿಮಾ ಸಂಸ್ಧೆಯು ವಿಮೆ ಮಾಡಿಸಿದ ರೈತರಿಗೆ ಇತ್ಯರ್ಥಪಡಿಸಿ ಮುಂದಿನ ಅವಧಿಗೆ ವಿಮೆಯನ್ನು ರದ್ದುಪಡಿಸಬೇಕು.

2016ರ ಮುಂಗಾರು ಹಂಗಾಮಿನಲ್ಲಿ ಅಧಿಸೂಚಿತ ಘಟಕದಲ್ಲಿ ಬಿತ್ತನೆಯಾದ ನಂತರ ಕಟಾವಿಗೆ ಮೊದಲು ಸಾಮಾನ್ಯ ಇಳುವರಿಗಿಂತ ಶೇಕಡಾ 50ಕ್ಕಿಂತ ಹೆಚ್ಚಿನ ಬೆಳೆ ನಷ್ಟ ಸಂಭವಿಸಿದಲ್ಲಿ ವಿಮೆ ಮಾಡಿಸಿದ ರೈತರಿಗೆ ಅಂದಾಜು ಮಾಡಲಾದ ಬೆಳೆ ವಿಮಾ ನಷ್ಟ ಪರಿಹಾರದಲ್ಲಿ ಶೇಕಡಾ 25ರಷ್ಟು ಹಣವನ್ನು ಮುಂಚಿತವಾಗಿ ವಿಮಾ ಸಂಸ್ಧೆಯು ನೀಡತಕ್ಕದ್ದು. ಬೆಳೆ ಕಟಾವು ಪ್ರಯೋಗಗಳ ಆಧಾರದ ಮೇಲೆ ಬೆಳೆ ಇಳುವರಿ ಮಾಹಿತಿ ಬಂದನಂತರ ಅಂತಿಮ ಬೆಳೆ ವಿಮಾ ನಷ್ಟ ಪರಿಹಾರದಲ್ಲಿ ಈ ಹಣವನ್ನು ಹೊಂದಾಣಿಕೆ ಮಾಡಬೇಕು.

ಈ ಯೋಜನೆಯಡಿ ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲೆ ಒಣಗಲು ಬಿಟ್ಟಂತಹ ಸಂದರ್ಭದಲ್ಲಿ ಎರಡು ವಾರಗಳೊಳಗೆ (ಹದಿನಾಲ್ಕು ದಿನಗಳು) ಚಂಡಮಾರುತ, ಚಂಡಮಾರುತ ಸಹಿತ ಮಳೆ ಮತ್ತು ಅಕಾಲಿಕ ಮಳೆಯಿಂದಾಗಿ ಬೆಳೆ ನಾಶವಾದರೆ ವೈಯಕ್ತಿಕವಾಗಿ ವಿಮಾ ಸಂಸ್ಧೆಯು ನಷ್ಟ ನಿರ್ಧಾರ ಮಾಡಿ ಬೆಳೆ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲು ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಒಳಪಡಿಸಲಾಗಿದೆ.

ಮೇಲೆ ವಿವರಿಸಿರುವಂತೆ ಬೆಳೆ ನಷ್ಟವನ್ನು ಜಿಲ್ಲಾ ಮಟ್ಟದಲ್ಲಿ ಕೃಷಿ, ಕಂದಾಯ, ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳು, ಸಂಬಂಧಿಸಿದ ವಿಮಾ ಸಂಸ್ಥೆಯ ಅಧಿಕಾರಿಗಳು, ಲೀಡ್ ಬ್ಯಾಂಕ್ ಅಧಿಕಾರಿಗಳನ್ನೊಳಗೊಂಡ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿನ ಸಮಿತಿಯು ಅಂದಾಜಿಸಿ ತೀರ್ಮಾನಿಸಿದಂತೆ ವಿಮೆ ಮಾಡಿಸಿದ ರೈತರಿಂದ ಅರ್ಜಿ ಬಂದ ನಂತರ ಬೆಳೆ ವಿಮಾ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಬೇಕು.

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯು ರೈತ ಸಮುದಾಯಕ್ಕೆ ಉಪಯುಕ್ತವಾದ ಯೋಜನೆಯಾಗಿಸುವುದರಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸದರಿ ಯೋಜನೆಯ ಲಾಭವನ್ನು ಪಡೆಯಲು ಕೋರಿದೆ.

ಹೆಚ್ಚಿನ ವಿವರಗಳಿಗೆ ಸ್ಥಳೀಯ ಬ್ಯಾಂಕ್, ವಾಣಿಜ್ಯ/ಗ್ರಾಮೀಣ ಸಹಕಾರಿ ಬ್ಯಾಂಕ್ (ಸಾಲ ಸಂಸ್ಥೆ)ಗಳನ್ನು ಹೋಬಳಿ ರೈತ ಸಂಪರ್ಕ ಕೇಂದ್ರ/ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರು/ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಲು ಕೃಷಿ ಇಲಾಖೆ ಪ್ರಕಟಣೆ ತಿಳಿಸಿದೆ.

ಉಡುಪಿ ಜಿಲ್ಲೆ – ಉದ್ಯೋಗ ಸೃಜನಾ ಯೋಜನೆ- ಅರ್ಜಿ ಆಹ್ವಾನ

ಉಡುಪಿ: ಮುಖ್ಯ ಮಂತ್ರಿಗಳ ಉದ್ಯೋಗ ಸೃಜನ ಯೋಜನೆ (ಸಿ.ಎಂ.ಇ.ಜಿ.ಪಿ) ಯಡಿ ಸ್ವ ಉದ್ಯೋಗ ಸ್ಥಾಪಿಸಲು ಆಸಕ್ತಿ ಇರುವ ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕ /ಯುವತಿಯರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಯೋಜನೆಯು ಕರ್ನಾಟಕ ಸರ್ಕಾರವು ಗ್ರಾಮೀಣ ಪ್ರದೇಶದಲ್ಲಿ ಸ್ವಂತ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, (ಕೆ.ವಿ.ಐ.ಬಿ) ಗಳ ಮುಖಾಂತರ ಜಾರಿಗೊಳಿಸಲಾಗುತ್ತಿದೆ.
ಈ ಯೋಜನೆಯಡಿಯಲ್ಲಿ ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕ ಯುವತಿಯರಿಗೆ ಗರಿಷ್ಠ ಯೋಜನಾ ವೆಚ್ಚ ರೂ.10 ಲಕ್ಷ ಬ್ಯಾಂಕ್ ಸಾಲದೊಂದಿಗೆ ಹೊಸ ಕೈಗಾರಿಕೆ ಉತ್ಪಾದನೆ ಚಟುವಟಿಕೆ ಹಾಗೂ ಆಯ್ದ ಕೆಲವು ಸೇವಾ ಘಟಕ ಸ್ಥಾಪಿಸುವವರಿಗೆ ಯೋಜನಾ ವೆಚ್ಚದ ಶೇ.25% ರಿಂದ 35%ರ ವರೆಗೆ ಸಹಾಯಧನವನ್ನು ನೀಡಲಾಗುವುದು.
ಅಭ್ಯರ್ಥಿಗಳು ಕನಿಷ್ಠ 8ನೇ ತರಗತಿ ಉತ್ತೀರ್ಣರಾಗಿರಬೇಕು. ಸಾಮಾನ್ಯ ವರ್ಗದವರ ವಯೋಮಿತಿ ಕನಿಷ್ಟ 21 ವರ್ಷ ಮೇಲ್ಪಟ್ಟು, ಗರಿಷ್ಠ 35ವರ್ಷಗಳಾಗಿರಬೇಕು ಹಾಗೂ ವಿಶೇಷ ವರ್ಗದ ಉದ್ದಿಮೆದಾರರಿಗೆ ಗರಿಷ್ಠ 45 ವರ್ಷ (ವಿಶೇಷ ವರ್ಗ/ಮಹಿಳೆ/ಪರಿಶಿಷ್ಠ ಜಾತಿ/ ಪರಿಶಿಷ್ಠ ಪಂಗಡ/ ಹಿಂದುಳಿದ ವರ್ಗ/ ಅಲ್ಪ ಸಂಖ್ಯಾತರು / ಮಾಜಿ ಯೋಧರು/ಅಂಗವಿಕಲರು.) ನಿರುದ್ಯೋಗಿ ಯುವಕ /ಯುವತಿಯರು ಆನ್‍ಲೈನ್ ವೆಬ್‍ಸೈಟ್ http://cmegp.kar.nic.in ನ ಮೂಲಕ ಜುಲೈ 05 ರೊಳಗೆ ಅರ್ಜಿಗಳನ್ನು ನೊಂದಾಯಿಸಿ, ಇಂಟರ್‍ನೆಟ್‍ನಲ್ಲಿ ತೆಗೆದ ಅರ್ಜಿಯನ್ನು “ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ,36-ಸಿ, ಶಿವಳ್ಳಿ, ಕೈಗಾರಿಕಾ ಪ್ರದೇಶ, ಮಣಿಪಾಲ ಉಡುಪಿ – 576104 ದೂ.ಸಂ: 0820-2575650” ಅಥವಾ “ಜಿಲ್ಲಾ ಅಧಿಕಾರಿಗಳು, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ರಜತ್ರಾದಿ, ಬಿ ಬ್ಲಾಕ್, 2ನೇ ಮಹಡಿ, ಮಣಿಪಾಲ, ಉಡುಪಿ ದೂ.ಸಂ: 0820-2574855” ಈ ವಿಳಾಸಕ್ಕೆ ಜುಲೈ 15 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಯಾವುದೇ ಯೋಜನೆಯಲ್ಲಿ ಸಹಾಯಧನ ಪಡೆದವರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ಈ ಯೋಜನೆಯಲ್ಲಿ ಸಹಾಯಧನ ಪಡೆಯಲು ಅವಕಾಶವಿರುವುದಿಲ್ಲ. ಈ ಯೋಜನೆಯಲ್ಲಿ ಯಾವುದೇ ಆದಾಯ ಮಿತಿ ಇರುವುದಿಲ್ಲ. ಸರ್ಕಾರದ ನಿಯಾಮನುಸಾರ ವಿಶೇಷ ವರ್ಗದ ಅರ್ಜಿದಾರರಿಗೆ ಆದ್ಯತೆಯನ್ನು ನೀಡಲಾಗುವುದು. ಅಭ್ಯರ್ಥಿಗಳಿಗೆ ಒಂದು ವಾರದ ಉದ್ಯಮಶೀಲತಾ ತರಬೇತಿ ಪಡೆಯುವುದು ಕಡ್ಡಾಯವಾಗಿರುತ್ತದೆ.
ಹೆಚ್ಚಿನ ವಿವರಗಳನ್ನು ಜಿಲ್ಲಾ ಕೈಗಾರಿಕಾ ಕೇಂದ್ರ, 36-ಸಿ, ಶಿವಳ್ಳಿ, ಕೈಗಾರಿಕಾ ಪ್ರದೇಶ, ಮಣಿಪಾಲ ಹಾಗೂ ತಾಲೂಕಿನ ಕೈಗಾರಿಕಾ ವಿಸ್ತರಣಾಧಿಕಾರಿಯವರ ಕಚೇರಿಗಳಲ್ಲಿ ಪಡೆಯಬಹುದಾಗಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ವಿಶ್ವಕರ್ಮ ಸಮುದಾಯಗಳ ಅಭಿವೃದ್ದಿ ನಿಗಮದಿಂದ ವಿವಿಧ ಯೋಜನೆಗಳು

ಉಡುಪಿ: ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ದಿ ನಿಗಮದಿಂದ ವಿಶ್ವಕರ್ಮ ಸಮುದಾಯಗಳ ಜನರ ಆರ್ಥಿಕ ಅಭಿವೃದ್ಧಿಗಾಗಿ 2016-17ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳಲ್ಲಿ ಸೌಲಭ್ಯ ಪಡೆಯಲು ಇಚ್ಚಿಸುವವರು ನಿಗದಿತ ಅರ್ಜಿ ನಮೂನೆಗಳನ್ನು ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಛೇರಿಯಲ್ಲಿ ಅಥವಾ ಆಯಾ ತಾಲ್ಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ವಿಸ್ತರಣಾಧಿಕಾರಿಗಳ ಕಛೇರಿಯಲ್ಲಿ ಪಡೆಯಲು ಜೂನ್ 30 ಕೊನೆಯ ದಿನಾಂಕ.
ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ಜಿಲ್ಲಾ ಕಛೇರಿಗೆ ಸಲ್ಲಿಸಲು ಜುಲೈ 18 ಕೊನೆಯ ದಿನಾಂಕವಾಗಿರುತ್ತದೆ. ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಹೊಂದಿರಬೇಕಾದ ಸಾಮಾನ್ಯ ಅರ್ಹತೆಗಳು ಈ ಮುಂದಿನಂತಿವೆ.
ನಿಗಮದ ಯೋಜನೆಗಳಲ್ಲಿ ಸೌಲಭ್ಯಗಳನ್ನು ಪಡೆಯಲು ಇಚ್ಚಿಸುವವರು ಸರ್ಕಾರದ ಆದೇಶ ಸಂಖ್ಯೆ:ಸಕಇ/225/ಬಿಸಿಎ/2000 ದಿನಾಂಕ:30/03/2002ರನ್ವಯ ವಿಶ್ವಕರ್ಮ ಸಮುದಾಯ ಹಾಗೂ ಅದರ ಉಪ ಜಾತಿಗಳಿಗೆ ಸೇರಿರಬೇಕು.
ಅವರ ಕುಟುಂಬದ ವಾರ್ಷಿಕ ವರಮಾನವು ಗ್ರಾಮಾಂತರ ಪ್ರದೇಶದವರಿಗೆ ರೂ.40,000/-ಗಳು ಹಾಗೂ ಪಟ್ಟಣ ಪ್ರದೇಶದವರಿಗೆ ರೂ.55,000/-ಗಳ ಮಿತಿಯೊಳಗಿರಬೇಕು.
ಸ್ವಯಂ ಉದ್ಯೋಗ/ಪಂಚವೃತ್ತಿ ಅಭಿವೃದ್ದಿಗೆ ಸಾಲ ಪಡೆಯಲು ಬಯಸುವವರು ವೃತ್ತಿಯನ್ನು ಅಥವಾ ಯಾವುದಾದರೂ ಆರ್ಥಿಕ ಚಟುವಟಿಕೆ ನಿರ್ವಹಿಸಬೇಕು.
ಗಂಗಾ ಕಲ್ಯಾಣ ಯೋಜನೆಯಲ್ಲಿ ನೀರಾವರಿ ಸೌಲಭ್ಯ ಪಡೆಯಲು ಅರ್ಜಿದಾರರು ಸಣ್ಣ ಮತ್ತು ಅತಿಸಣ್ಣ ರೈತರಾಗಿರಬೇಕು ಹಾಗೂ ಒಂದೇ ಕಡೆ ಹೊಂದಿಕೊಂಡಂತಿರುವ 1 ಎಕರೆ ಜಮೀನು ಹೊಂದಿರಬೇಕು. ಯೋಜನೆಗಳು ಈ ಮುಂದಿನಂತಿವೆ:
ಪಂಚವೃತ್ತಿ ಅಭಿವೃದ್ಧಿಗಾಗಿ ಆರ್ಥಿಕ ನೆರವು:- ವಿಶ್ವಕರ್ಮ ಸಮುದಾಯಗಳ ಸಾಂಪ್ರದಾಯಿಕ ವೃತ್ತಿದಾರರು ಅಥವಾ ವೃತ್ತಿ ಕಸುಬುದಾರರು ತಮ್ಮ ವೃತ್ತಿಯ ಅಭಿವೃದ್ದಿಗಾಗಿ, ಆಧುನಿಕ ಉಪಕರಣಗಳನ್ನು ಖರೀದಿಸಲು, ತಾಂತ್ರಿಕತೆಯನ್ನು ಮೇಲ್ದರ್ಜೆಗೇರಿಸಲು, ವಾರ್ಷಿಕ ಶೇ.4 ಬಡ್ಡಿದರದಲ್ಲಿ ಗರಿಷ್ಠ ರೂ.40,000/-ಗಳವರೆಗೆ ಸಾಲ ಹಾಗೂ ಗರಿಷ್ಠ ರೂ.10,000/-ಗಳ ಸಹಾಯಧನ ಮಂಜೂರು ಮಾಡಲಾಗುವುದು. (ಪಂಚವೃತ್ತಿಗಳೆಂದರೆ, 1) ಚಿನ್ನ ಬೆಳ್ಳಿ ಕೆಲಸ 2) ಶಿಲ್ಪಕಲೆ 3) ಲೋಹದ ಕೆಲಸ 4) ಮರಗೆಲಸ ಮತ್ತು 5) ಎರಕ ಕೆಲಸ ಎಂದು ಪರಿಭಾವಿಸಲಾಗಿದೆ).
ಸ್ವಯಂ ಉದ್ಯೋಗ ನೇರಸಾಲ ಯೋಜನೆ:- ವಿಶ್ವಕರ್ಮ ಮತ್ತು ಅದರ ಉಪ ಜಾತಿಗೆ ಸೇರಿದ ಜನರು ಸ್ವಯಂ ಉದ್ಯೋಗಕ್ಕೆ ಆರ್ಥಿಕ ಚಟುವಟಿಕೆ ಕೈಗೊಳ್ಳಲು ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ರೂ.40,000/- ಸಾಲ ಮತ್ತು ಶೇ.30ರಷ್ಟು ಅಥವಾ ಗರಿಷ್ಠ ರೂ.10,000/-ಗಳ ಸಹಾಯಧನ ಒದಗಿಸಲಾಗುವುದು.
ಬ್ಯಾಂಕ್‍ಗಳ ಸಹಯೋಗದೊಂದಿಗೆ ಸ್ವಯಂ ಉದ್ಯೋಗ ಸಾಲ:- ಬ್ಯಾಂಕುಗಳ ಸಹಯೋಗದೊಂದಿಗೆ ಕೃಷಿ, ವ್ಯಾಪಾರ, ಕೈಗಾರಿಕೆ, ಸೇವಾ ವಲಯದಲ್ಲಿ ಬರುವ ಆರ್ಥಿಕ ಚಟುವಟಿಕೆಗಳಿಗೆ ಗರಿಷ್ಠ ರೂ.5.00 ಲಕ್ಷಗಳವರೆಗೆ ಸಾಲ ಒದಗಿಸಲಾಗುವುದು. 5.00 ಲಕ್ಷ ರೂ.ಗಳ ಘಟಕವೆಚ್ಚಕ್ಕೆ ನಿಗಮದಿಂದ ಶೇ.20ರಷ್ಟು ಗರಿಷ್ಟ ರೂ.1.00 ಲಕ್ಷಗಳ ಮಾರ್ಜಿನ್ ಹಣವನ್ನು ಶೇ.4ರ ಬಡ್ಡಿದರದಲ್ಲಿ ಒದಗಿಸಲಾಗುವುದು. ರೂ.1.00 ಲಕ್ಷಕ್ಕಿಂತ ಕಡಿಮೆ ಘಟಕವೆಚ್ಚ ಇರುವ ಸಾಲಕ್ಕೆ ಶೇ.30ರಷ್ಟು ಅಥವಾ ಗರಿಷ್ಟ ರೂ.10,000/-ಗಳ ಸಹಾಯಧನ ಹಾಗೂ ಶೇ.20ರಷ್ಟು ಮಾರ್ಜಿನ್ ಹಣವನ್ನು ನಿಗಮದಿಂದ ಒದಗಿಸಲಾಗುವುದು. ಉಳಿದ ಮೊತ್ತವನ್ನು ಬ್ಯಾಂಕ್‍ಗಳು ಭರಿಸುತ್ತವೆ.
ಅರಿವು-ಶೈಕ್ಷಣಿಕ ನೇರಸಾಲ ಯೋಜನೆ:-ವಿಶ್ವಕರ್ಮ ಸಮುದಾಯಗಳ ಜನಾಂಗದವರಾಗಿದ್ದು ಕುಟುಂಬದ ವಾರ್ಷಿಕ ಆದಾಯ ರೂ.3.50 ಲಕ್ಷಗಳ ಮಿತಿಯಲ್ಲಿದ್ದು, ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ (ಸಿ.ಇ.ಟಿ) ಪ್ರವೇಶ ಪಡೆದು, (1) ಬಿ.ಇ.(ಸಿ.ಇ.ಟಿ), (2) ಎಂ.ಬಿ.ಬಿ.ಎಸ್., (3) ಬಿ.ಯೂ.ಎಂ.ಎಸ್., (4) ಬಿ.ಡಿ.ಎಸ್. (5) ಬಿ.ಎ.ಎಂ.ಎಸ್. (6) ಬಿ.ಎಚ್.ಎಂ.ಎಸ್. (7) ಎಂ.ಬಿ.ಎ. (8) ಎಂ.ಟೆಕ್. (9) ಎಂ.ಇ., (10) ಎಂ.ಡಿ., (11) ಪಿ.ಹೆಚ್‍ಡಿ. (12) ಬಿ.ಸಿ.ಎ./ಎಂ.ಸಿ.ಎ (13) ಎಂ.ಎಸ್.ಆಗ್ರ್ರಿಕಲ್ಚರ್ (14)ಬಿ.ಎಸ್.ಸಿ. ನರ್ಸಿಂಗ್, (15)ಬಿ.ಫಾರಂ/ಎಂ.ಫಾರಂ (16) ಬಿ.ಎಸ್.ಸಿ. ಪ್ಯಾರಾ ಮೆಡಿಕಲ್ (17) ಬಿ.ಎಸ್.ಸಿ. ಬಯೋ ಟೆಕ್ನಾಲಜಿ (18) ಬಿ.ಟೆಕ್ (19) ಬಿ.ಪಿ.ಟಿ. (20) ಬಿ.ವಿ.ಎಸ್.ಸಿ/ಎಂ.ವಿ.ಎಸ್.ಸಿ. (21)ಬಿ.ಎನ್.ಎಂ. (22)ಬಿ.ಹೆಚ್.ಎಮ್. (23)ಎಂ.ಡಿ.ಎಸ್. (24) ಎಂ.ಎಸ್.ಡಬ್ಲ್ಯೂ (25) ಎಲ್.ಎಲ್.ಎಂ.
(26)ಎಂ.ಎಫ್.ಎ. (27) ಎಂ.ಎಸ್.ಸಿ. ಬಯೋ ಟೆಕ್ನಾಲಜಿ ಮತ್ತು (28)ಎಂ.ಎಸ್.ಸಿ.(ಎ.ಜಿ.)ಕೋರ್ಸ್‍ಗಳಲ್ಲಿ ಉಚಿತ ಸೀಟ್ ಪಡೆದು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕೋರ್ಸ್‍ನ ಅವಧಿಗೆ ಶೇಕಡ 2ರ ಬಡ್ಡಿ ದರದಲ್ಲಿ ಗರಿಷ್ಟ ವಾರ್ಷಿಕ ರೂ.1.00 ಲಕ್ಷಗಳ ವರೆಗೆ ಸಾಲ ಒದಗಿಸಲಾಗುವುದು.
ಗಂಗಾಕಲ್ಯಾಣ ನೀರಾವರಿ ಯೋಜನೆ (ವೈಯಕ್ತಿಕ ಕೊಳವೆ ಬಾವಿ ಯೋಜನೆ):-ವಿಶ್ವಕರ್ಮ ಸಮುದಾಯಗಳಿಗೆ ಸೇರಿದ ಸಣ್ಣ ಮತ್ತು ಅತಿ ಸಣ್ಣ ರೈತರ ಜಮೀನಿಗೆ ಘಟಕ ವೆಚ್ಚ ರೂ.2.00 ಲಕ್ಷಗಳಲ್ಲಿ ಒಂದು ಕೊಳವೆ ಬಾವಿ ಕೊರೆಯಿಸಿ, ಪಂಪ್‍ಸೆಟ್ಟು ಮತ್ತು ಉಪಕರಣಗಳನ್ನು ಸರಬರಾಜು ಮಾಡಿ ನೀರಾವರಿ ಸೌಲಭ್ಯ ಒದಗಿಸಲಾಗುವುದು. ರೂ.2.00 ಲಕ್ಷಗಳಲ್ಲಿ ರೂ.1.50 ಲಕ್ಷಗಳ ಸಹಾಯಧನ (ಸಬ್ಸಿಡಿ) ಹಾಗೂ ಶೇ.4ರ ಬಡ್ಡಿದರದಲ್ಲಿ ರೂ.50,000/-ಗಳ ಸಾಲ ಒದಗಿಸಲಾಗುವುದು.
ಮೇಲ್ಕಂಡ ಸೌಲಭ್ಯಗಳನ್ನು ಪಡೆಯಲು ಇಚ್ಚಿಸುವ ವಿಶ್ವಕರ್ಮ ಸಮುದಾಯ ಹಾಗೂ ಅದರ ಉಪ ಜಾತಿಗಳ ಅರ್ಜಿದಾರರು/ಫಲಾಪೇಕ್ಷಿಗಳು, ಅವರು ವಾಸಿಸುತ್ತಿರುವ ಜಿಲ್ಲೆಯ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಛೇರಿ ಅಥವಾ ಆಯಾ ತಾಲ್ಲೂಕಿನ ವಿಸ್ತರಣಾಧಿಕಾರಿಗಳ ಕಛೇರಿ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಇಲಾಖೆಯಲ್ಲಿ ನಿಗದಿಪಡಿಸಿದ ಉಚಿತ ಅರ್ಜಿಗಳನ್ನು ದಿನಾಂಕ:30/06/2016ರೊಳಗೆ ಪಡೆಯುವುದು. ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ದಿನಾಂಕ: 18/07/2016 ರೊಳಗೆ ಸಲ್ಲಿಸುವುದು. ದಿನಾಂಕ: 18/07/2016ರ ನಂತರ ಬರುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.

Leave a Reply