ಸರಕಾರಿ ವೈದ್ಯರನ್ನು ಸಭೆ, ತರಬೇತಿಗಳಿಗೆ ನಿಯೋಜಿಸದಂತೆ ಡಿಸಿ ಸೂಚನೆ

Spread the love

ಸರಕಾರಿ ವೈದ್ಯರನ್ನು ಸಭೆ, ತರಬೇತಿಗಳಿಗೆ ನಿಯೋಜಿಸದಂತೆ ಡಿಸಿ ಸೂಚನೆ

ಮಂಗಳೂರು: ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಇಲ್ಲದಿದ್ದರೆ ಸಾರ್ವಜನಿಕರಿಗೆ, ರೋಗಿಗಳಿಗೆ ತೀವ್ರ ಸಮಸ್ಯೆಗಳಾಗುವುದರಿಂದ ಇನ್ನು ಮುಂದೆ ಸರಕಾರಿ ಆಸ್ಪತ್ರೆಗಳ ವೈದ್ಯರನ್ನು ವಿವಿಧ ಸಭೆಗಳಿಗೆ ಕರೆಯುವುದನ್ನು ನಿಯಂತ್ರಿಸುವಂತೆ  ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ ಅವರು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಆರೋಗ್ಯ ಮಿಷನ್ ಸಭೆಯಲ್ಲಿ ಮಾತನಾಡುತ್ತಿದ್ದರು. ಸರಕಾರಿ ಆಸ್ಪತ್ರೆಗಳ ವೈದ್ಯರನ್ನು ವಿವಿಧ ಸರಕಾರಿ ಸಭೆಗಳಿಗೆ ಭಾಗವಹಿಸಿದರೆ, ಆಸ್ಪತ್ರೆಗಳಲ್ಲಿ ರೋಗಿಗಳು ಕಾಯಬೇಕಾದ ಪರಿಸ್ಥಿತಿ ಇದೆ. ಈ ನಿಟ್ಟಿನಲ್ಲಿ ತೀರಾ ಅಗತ್ಯವಿರುವ ತರಬೇತಿಗಳಿಗೆ ಮಾತ್ರ ಅವರನ್ನು ನಿಯೋಜಿಸಲು ಅವರು ಸೂಚಿಸಿದರು. ಸರಕಾರಿ ಆಸ್ಪತ್ರೆಗಳಲ್ಲಿ ಎಲ್ಲಾ  ರೀತಿಯ ಔಷಧಿಗಳನ್ನು ಸಂಗ್ರಹಿಸಿಡಬೇಕು. ಸಾರ್ವಜನಿಕರು ಹೊರಗಡೆ ದುಡ್ಡು ಕೊಟ್ಟು ಔಷಧಿ ಖರೀದಿಸುವುದಕ್ಕೆ ಅವಕಾಶ ಮಾಡಬಾರದು ಎಂದು ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

dr-jagadeesha-new-dc1-20160801

ಸರಕಾರಿ ಆಸ್ಪತ್ರೆಗಳ ಕಟ್ಟಡ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಕಾಮಗಾರಿಯಲ್ಲಿ ವಿಳಂಭವನ್ನು ಸಹಿಸಲಾಗದು. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ಎಲ್ಲಾ ಸರಕಾರಿ ಆಸ್ಪತ್ರೆಗಳ ಕಟ್ಟಡಗಳನ್ನು ತ್ವರಿತಗತಿಯಲ್ಲಿ ಮುಗಿಸಲು ಜಿಲ್ಲಾಧಿಕಾರಿಗಳು ತಿಳಿಸಿದರು.

ಲೇಡಿಘೋಷನ್‍ನಲ್ಲಿ ಐಸಿಯು ಘಟಕ: ಲೇಡಿಘೋಷನ್ ಆಸ್ಪತ್ರೆಯಲ್ಲಿ ಐ.ಸಿ.ಯು. ಕೇಂದ್ರ ತೆರೆಯಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಧಿಕಾರಿಗಳು ಲೇಡಿಘೋಷನ್ ಅಧೀಕ್ಷಕರಿಗೆ ಸೂಚಿಸಿದರು. ಸಾಕಷ್ಟು ಸಂಖ್ಯೆಯಲ್ಲಿ ಹೆರಿಗೆಗಳಾಗುತ್ತಿರುವ ಲೇಡಿಘೋಷನ್ ಆಸ್ಪತ್ರೆಯಲ್ಲಿ ಐ.ಸಿ.ಯು. ಘಟಕ ತೀರಾ ಅಗತ್ಯವಾಗಿದೆ. ಇದರಿಂದ  ತುರ್ತು ಸಂದರ್ಭದಲ್ಲಿ ಸಕಾಲದಲ್ಲಿ ರೋಗಿಗೆ ವೈದ್ಯಕೀಯ ಚಿಕಿತ್ಸೆ ನೀಡಬಹುದು ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ ಪ್ರಸವ ಮರಣ ಪ್ರಕರಣಗಳ ಪರಿಶೀಲನೆ ನಡೆಸಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯು ವೈದ್ಯಕೀಯ ಕ್ಷೇತ್ರದಲ್ಲಿ ದೇಶದಲ್ಲಿಯೇ ಸಾಕಷ್ಟು ಮುಂದುವರಿದಿದ್ದು, ಹಲವಾರು ಆಸ್ಪತ್ರೆಗಳು ಇಲ್ಲಿವೆ. ಹೀಗಿದ್ದರೂ, ಜಿಲ್ಲೆಯಲ್ಲಿ ಹೆರಿಗೆ ವೇಳೆ ತಾಯಿ ಸಾವಿನ ಪ್ರಕರಣಗಳು ನಡೆಯುತ್ತಿರುವುದು ಕಳವಳಕಾರಿಯಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಜಿಲ್ಲೆಯಲ್ಲಿ ಎಲ್ಲಾ ರೀತಿಯ ವೈದ್ಯಕೀಯ ಸೌಲಭ್ಯಗಳಿದ್ದರೂ ಹೆರಿಗೆ ವೇಳೆ ಅಥವಾ ನಂತರದ ಮರಣಗಳು ಸಂಭವಿಸುವುದು ದುರದೃಷ್ಟಕರ. ಈ ನಿಟ್ಟಿನಲ್ಲಿ ಗರ್ಭಾವಸ್ಥೆಯ ಎಲ್ಲಾ ಹಂತದಲ್ಲೂ  ಮಹಿಳೆಯ ಆರೋಗ್ಯದ ಮೇಲೆ ನಿಗಾ ಇಡಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಎಂಡೋಸಲ್ಫಾನ್: ಇದೇ ಸಂದರ್ಭದಲ್ಲಿ ಎಂಡೋಸಲ್ಫಾನ್ ಸಂತ್ರಸ್ತರ ಪರಿಹಾರ ಹಾಗೂ ವೈದ್ಯಕೀಯ ಕಾರ್ಯಕ್ರಮಗಳ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು, ಎಂಡೋಸಲ್ಫಾನ್ ಸಂತ್ರಸ್ತರಿಗೆ ಶಾಶ್ವತ ಪುನರ್ವಸತಿ ಕೇಂದ್ರ ಸ್ಥಾಪಿಸಲು ಈಗಾಗಲೇ ಪುತ್ತೂರು ತಾಲೂಕಿನ ಅಲಂಕಾರಿನಲ್ಲಿ 5 ಎಕರೆ ಜಾಗ ಕಾದಿರಿಸಲಾಗಿದೆ. ಸುಮಾರು 6.5 ಕೋಟಿ ವೆಚ್ಚದಲ್ಲಿ ಪುನರ್ವಸತಿ ಕೇಂದ್ರ, ಆಸ್ಪತ್ರೆ ಸ್ಥಾಪಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಈ ಯೋಜನಾ ವೆಚ್ಚ ಪರಿಷ್ಕರಿಸಿ, ಪ್ರಸ್ತಾವನೆ ಸಲ್ಲಿಸಲು ಅವರು ತಿಳಿಸಿದರು.

ಎಂಡೋಸಲ್ಫಾನ್ ಸಂತ್ರಸ್ತ ಪ್ರದೇಶಗಳಿಗೆ 4 ಸಂಚಾರಿ ಆರೋಗ್ಯ ಘಟಕಗಳನ್ನು ಒದಗಿಸಲಾಗುವುದು. ಬೆಳ್ತಂಗಡಿ, ಪುತ್ತೂರು, ಸುಳ್ಯ ತಾ. ಆಸ್ಪತ್ರೆ ಹಾಗೂ ಮೂಡಬಿದ್ರೆ, ವಿಟ್ಲ ಸಮುದಾಯ ಕೇಂದ್ರಗಳಲ್ಲಿ ಫಿಸಿಯೋಥೆರಫಿ ಘಟಕ ಸ್ಥಾಪಿಸಲಾಗುವುದು. ಸಂತ್ರಸ್ತರಿಗೆ ಈಗ ನೀಡುತ್ತಿರುವ ಮಾಸಾಶನವನ್ನು ಹೆಚ್ಚಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಡಾ.ಕೆ.ಜಿ. ಜಗದೀಶ ತಿಳಿಸಿದರು.

ಡೆಂಗ್ಯೂ, ಮಲೇರಿಯಾ: ಕಟ್ಟಡ ಕಾರ್ಮಿಕರಲ್ಲಿ ಡೆಂಗ್ಯು, ಮಲೇರಿಯಾ ಹೆಚ್ಚಾಗಿ ಕಂಡುಬರುತ್ತಿರುವುದರಿಂದ ಕಟ್ಟಡ ನಿರ್ಮಾಣಕ್ಕೆ ಲೈಸನ್ಸ್ ನೀಡುವಾಗಲೇ ಗುತ್ತಿಗೆದಾರರು/ಕಟ್ಟಡ ಮಾಲೀಕರಿಗೆ ಈ ಬಗ್ಗೆ ಶರತ್ತು ವಿಧಿಸಿ ಲೈಸನ್ಸ್ ನೀಡಲು ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ ಅವರು ಮಹಾನಗರಪಾಲಿಕೆ ಆಯುಕ್ತರಿಗೆ ಸೂಚಿಸಿದರು. ಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು  ತೀವ್ರಗೊಳಿಸಬೇಕು. ಸರಕಾರಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸೊಳ್ಳೆ ಪರದೆಗಳನ್ನು ವಿತರಿಸಬೇಕು. ಇದಲ್ಲದೆ, ಶಾಲಾ ಕಾಲೇಜುಗಳಲ್ಲಿ ಸಾಂಕ್ರಾಮಿಕ ರೋಗಗಳ ಕುರಿತು ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ಜಾರ್ಗರತಿ ಕಾರ್ಯಕ್ರಮ ನಡೆಸಲು ಅವರು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾ, ಪುತ್ತೂರು ಉಪವಿಭಾಗಾಧಿಕಾರಿ ಡಾ.ರಾಜೇಂದ್ರ, ಅಪರ ಜಿಲ್ಲಾಧಿಕಾರಿ ಕುಮಾರ್, ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮಕೃಷ್ಣ ರಾವ್, ಮಹಾನಗರಪಾಲಿಕೆ ಆಯುಕ್ತ ಮುಹಮ್ಮದ್ ನಝೀರ್ ಮತ್ತಿತರರು ಇದ್ದರು.


Spread the love