ಸಾಂಕ್ರಾಮಿಕ ರೋಗ ನಿಯಂತಣಕ್ಕೆ ಆರೋಗ್ಯ ಇಲಾಖೆ ಸಿದ್ಧ: ಯು.ಟಿ.ಖಾದರ್

Spread the love

ಬೆಂಗಳೂರು: ಮಳೆಗಾಲದಲ್ಲಿ ಬರುವ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಲು ಆರೋಗ್ಯ ಇಲಾಖೆ ಸರ್ವ ಸನ್ನದ್ಧವಾಗಿದೆ ಎಂದು ಆರೋಗ್ಯ ಸಚಿವ ಯು.ಟಿ ಖಾದರ್ ತಿಳಿಸಿದರು. ವಿಕಾಸ ಸೌಧದಲ್ಲಿ ಸಚಿವರು ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಅಧಿಕಾರಿ ಗಳೊಂದಿಗೆ ಸಭೆ ನಡೆಸಿ, ಮಾರ್ಗ ದರ್ಶನ ಮಾಡಿದರು. ಇದೇ ವೇಳೆ, ಸಾಂಕ್ರಾಮಿಕ ರೋಗಗಳ ನಿಯಂತ್ರಣ ಮತ್ತು ಚಿಕಿತ್ಸೆ ಸಂಬಂಧ ಸಿದ್ಧತೆ ಉಸ್ತುವಾರಿ ಗಾಗಿ ಪ್ರತಿ ಜಿಲ್ಲೆಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಯಿತು.

image002khader-minister-20160522-002

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಯು.ಟಿ ಖಾದರ್, ನೋಡಲ್ ಅಧಿಕಾರಿಗಳು ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲಿನ ಸೌಲಭ್ಯಗಳ ಬಗ್ಗೆ ಪರಿಶೀಲಿಸಿ ವರದಿ ನೀಡುವರು. ಈ ವರದಿ ಆಧರಿಸಿ ಅಗತ್ಯ ಸೌಲಭ್ಯ ಒದಗಿಸಲು ಕ್ರಮಕೈಗೊಳ್ಳಲಾಗುತ್ತದೆ ಎಂದರು.
48 ಗಂಟೆಗಳಲ್ಲಿ ವರದಿ : ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಡೆಂಗಿ ಜ್ವರಕ್ಕೆ ಸಂಬಂಧಿಸಿದಂತೆ ಪರೀಕ್ಷೆ ಮಾಡಲಾಗುತ್ತದೆ. ಒಂದು ವೇಳೆ ಅಲ್ಲಿ ಸೌಲಭ್ಯವಿಲ್ಲದಿದ್ದರೆ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಟ್ಟು 48 ಗಂಟೆಗಳಲ್ಲಿ ವರದಿ ನೀಡಲಾಗುತ್ತದೆ. ಈ ಕುರಿತಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಇದೇ ವೇಳೆ ತಿಳಿಸಿದರು.ಸೋಂಕು ಪತ್ತೆ ಪರೀಕ್ಷೆಗೆ ನಿಗದಿಗಿಂತ ಹೆಚ್ಚು ದರ ನಿಗದಿಪಡಿಸುತ್ತಿರುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಜಿಲ್ಲಾ ಆರೋಗ್ಯಾ ಧಿಕಾರಿಗಳಿಗೆ ದೂರು ನೀಡಲು ಅವಕಾಶ ವಿದೆ. ಈ ಬೆಳವಣಿಗೆ ಬಗ್ಗೆ ಕರ್ನಾಟಕ ವೈದ್ಯಕೀಯ ಮಂಡಳಿ ಜತೆ ಸಮಾಲೋಚನೆನಡೆಸಲಾಗಿದೆ.
ಮಂಡಳಿ ಅಂಥ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದರು.ಸಾಂಕ್ರಾಮಿಕ ರೋಗ ಹರಡಲು ಸ್ವಚ್ಛತೆ ಕೊರತೆಯೇ ಪ್ರಮುಖ ಕಾರಣವಾಗಿರುವು ದರಿಂದ ಮಳೆಗಾಲದಲ್ಲಿ ತಮ್ಮ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವಂತೆ ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳಿಗೂ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಪ್ರತಿ ಜಿಲ್ಲೆಗೆ ಮೊಬೈಲ್ ಯೂನಿಟ್
ಸಾಂಕ್ರಾಮಿಕ ರೋಗಗಳ ಬಗ್ಗೆ ವಿಶೇಷ ನಿಗಾ ವಹಿಸಲು ಪ್ರತಿ ಜಿಲ್ಲೆಗೆ ಮೊಬೈಲ್ ಯೂನಿಟ್ ನೀಡಲಾಗಿದೆ. ಕನಿಷ್ಠ ಮೂರರಂತೆ ತ್ವರಿತ ಪರೀಕ್ಷಾ ತಂಡ, ಸೊಳ್ಳೆನಾಶಕ ಸ್ಪ್ರೇಯರ್, ಫಾಗಿಂಗ್ ಸೌಲಭ್ಯಗಳನ್ನೊಳಗೊಂಡ ಮೊಬೈಲ್ ಯೂನಿಟ್‌ಗಳ ನಿಯೋಜಿಸಲಾಗಿದೆ.
ಸರಕಾರಿ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಾಂಕ್ರಾಮಿಕ ರೋಗಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಒಂದು ವೇಳೆ ಅಲ್ಲಿ ವೈದ್ಯರು ಅಥವಾ ಸೂಕ್ತ ಸೌಲಭ್ಯ ಇಲ್ಲ ಎಂದಾದಲ್ಲಿ ರೋಗಿಗಳನ್ನು ಆರೋಗ್ಯ ಕವಚ 108 ಆಂಬ್ಯುಲೆನ್ಸ್‌ನಲ್ಲಿ ಸೌಲಭ್ಯವಿರುವ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ವಾಪಸು ಕರೆತಂದು ಬಿಡಲು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು..


Spread the love