ಸುರತ್ಕಲ್ ಟೋಲ್ ಸಂಗ್ರಹಕ್ಕೆ DYFI ವಿರೋಧ

Spread the love

ಸುರತ್ಕಲ್: ಸಾರ್ವಜನಿಕರ ವಿರೋಧದ ಮಧ್ಯೆಯೂ ಸುರತ್ಕಲ್ ಎನ್‍ಐಟಿಕೆಯ ಬಳಿ ತರಾತುರಿಯಲ್ಲಿ ಟೋಲ್ ಸಂಗ್ರಹಕ್ಕೆ ಮುಂದಾಗಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ತೀರ್ಮಾನಕ್ಕೆ ಡಿವೈಎಫ್‍ಐ ಸುರತ್ಕಲ್ ವಲಯ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ನಿಯಮಗಳನ್ನು ಪಾಲಿಸದೇ ಟೋಲ್ ಸಂಗ್ರಹಿಸುವ ನಿರ್ಧಾರದಿಂದ ಹಿಂದಕ್ಕೆ ಸರಿಯಬೇಕೆಂದು ಆಗ್ರಹಿಸಿದೆ. ಮತ್ತು ಸೆಪ್ಟೆಂಬರ್ 30ರಂದು ಎನ್‍ಐಟಿಕೆ ಟೋಲ್ ಕೇಂದ್ರದ ಮುಂಭಾಗ ನಾಗರಿಕ ಸಮಿತಿ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಡಿವೈಎಫ್‍ಐ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಡಿವೈಎಫ್‍ಐ ಜಿಲ್ಲಾ ಉಪಾಧ್ಯಕ್ಷರಾದ ಬಿ.ಕೆ. ಇಮ್ತಿಯಾಜ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಎನ್‍ಐಟಿಕೆಯ ಬಳಿ ಟೋಲ್ ನಿರ್ಮಾಣಕ್ಕೆ ಸಾರ್ವಜನಿಕರಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿತ್ತು. ಆದರೆ ನಿಯಮ, ಕಾನೂನುಗಳನ್ನು ಮುಂದಿಟ್ಟು ಬಲವಂತದ ಟೋಲ್ ಸಂಗ್ರಹಕ್ಕೆ ಹೆದ್ದಾರಿ ಇಲಾಖೆ ಮುಂದಾಗಿದೆ. ಆದರೆ ನಿಯಮದ ಪ್ರಕಾರವೇ ಟೋಲ್ ಸಂಗ್ರಹದ ಮುಂಚಿತವಾಗಿ ಸರ್ವಿಸ್ ರಸ್ತೆ, ಟೋಲ್ ಕೇಂದ್ರದ ಬಳಿ ಎಂಟು ಪಥಗಳ ರಸ್ತೆ, ಶೌಚಾಲಯ, ವಿಶ್ರಾಂತಿ ಕೇಂದ್ರಗಳ ಸಹಿತ ಮೂಲಭೂತ ಸೌಲಭ್ಯಗಳನ್ನು ಹೊಂದಬೇಕಿದೆ. ಆದರೆ ಸುರತ್ಕಲ್ ಟೋಲ್ ಸಂಗ್ರಹ ಕೇಂದ್ರದಲ್ಲಿ ಈ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿ ಕಾನೂನುಬಾಹಿರ ಟೋಲ್ ಸಂಗ್ರಹಕ್ಕೆ ತಯಾರಿ ನಡೆಸಲಾಗಿದೆ.

ಅದಲ್ಲದೆ ವಾಹನಗಳಿಗೆ ದುಬಾರಿ ಟೋಲ್ ದರ ನಿಗದಿಪಡಿಸಿರುವುದು ಜನತೆಯ ಹಗಲು ದರೋಡೆ ನಡೆಯುವುದನ್ನು ಖಾತರಿಪಡಿಸಿದೆ. ಸುರತ್ಕಲ್ ಸೇರಿದಂತೆ ಜಿಲ್ಲೆಯ ಜನ ಸರಕಾರದ ಈ ಜನವಿರೋಧಿ ನಿಲುವನ್ನು ಪ್ರಬಲವಾಗಿ ವಿರೋಧಿಸಬೇಕು. ಮತ್ತು ಪ್ರತಿಭಟನೆಯಲ್ಲಿ ಭಾಗವಹಿಸಬೇಕೆಂದು ಬಿ.ಕೆ. ಇಮ್ತಿಯಾಜ್ ಮನವಿ ಮಾಡಿದ್ದಾರೆ.


Spread the love