ಸ್ಯಾನಿಟರಿ ನ್ಯಾಪ್ಕಿನ್ ಮೇಲಿನ ಜಿ.ಎಸ್.ಟಿ ತೆಗೆಯುವಂತೆ ಮಹಿಳಾ ಕಾಂಗ್ರೆಸ್ ಒತ್ತಾಯ

Spread the love

ಸ್ಯಾನಿಟರಿ ನ್ಯಾಪ್ಕಿನ್ ಮೇಲಿನ ಜಿ.ಎಸ್.ಟಿ ತೆಗೆಯುವಂತೆ ಮಹಿಳಾ ಕಾಂಗ್ರೆಸ್ ಒತ್ತಾಯ

ಉಡುಪಿ:  ಮಹಿಳೆಯರಿಗೆ ಮೂಲಭೂತವಾಗಿ ಅವಶ್ಯಕವಾಗಿರುವ ಸ್ಯಾನಿಟರಿ ನ್ಯಾಪ್ ಕಿನ್ ಗಳ ಮೇಲೆ ಜಿ.ಎಸ್.ಟಿ ತೆರಿಗೆ ವಿಧಿಸಿರುವ ಕೇಂದ್ರ ಸರಕಾರದ ಅಧ್ಯಾದೇಶವನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಪ್ರಧಾನ ಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿಯನ್ನು ಸಲ್ಲಿಸಲಾಯಿತು.

ಮಹಿಳೆಯರು ತಮ್ಮ ಋತುಸ್ರಾವದ ಸಮಯದಲ್ಲಿ ಉಪಯೋಗಿಸುವ ಸ್ಯಾನಿಟರಿ ಪ್ಯಾಡ್ ಗಳ ಮೇಲೆ ನೂತನವಾಗಿ ಜಾರಿಗೆ ತಂದ ತೆರಿಗೆ ಪದ್ದತಿ ಜಿ.ಎಸ್.ಟಿ ಯೋಜನೆಯಡಿ 12% ತೆರಿಗೆ ವಿಧಿಸಿರುವುದು ಖಂಡನೀಯ ಹಾಗೂ ಆಕ್ಷೇಪಾರ್ಹ. ಇದನ್ನು ಕೇವಲ ಒಂದು ಪ್ರಾಡಕ್ಟ್ ಆಗಿ ಗಮನಕ್ಕೆ ತೆಗೆದುಕೊಳ್ಳುವುದಕ್ಕಿಂತ ಹೆಣ್ಮಕ್ಕಳ ಅನಿರ್ವಾಯತೆ ಎಂದು ಅರಿಯಬೇಕಾಗಿತ್ತು.

ಜಿ.ಎಸ್.ಟಿ ಜಾರಿಯಾಗುವ ಮುನ್ನವೇ ಹಲವು ಮಹಿಳಾ ಪರ ಸಂಘಟನೆಗಳು ಪ್ರಧಾನಿ ಹಾಗೂ ಅರ್ಥ ಸಚಿವರಿಗೆ ಮನವಿ ನೀಡಲಾಗಿತ್ತು. ಋತುಸ್ರಾವ ಸಮಯದಲ್ಲಿ ಯೌವನಾವಸ್ಥೆಯ ವಿದ್ಯಾರ್ಥಿನಿಯರ, ಯುವತಿಯರ, ಮನೋಭಾವನೆಯನ್ನು ಕೇಂದ್ರ ಅರ್ಥ ಮಾಡಿಕೊಳ್ಳಬೇಕು. ಪ್ರಾಕೃತಿಕ ಕ್ರಿಯೆಗೆ ವಿಧಿಸಿರುವ ತೆರಿಗೆ ಮಹಿಳಾ ವಿರೋಧಿ ನೀತಿಯಾಗಿದೆ.

ಕೇಂದ್ರದ ಕಾರ್ಯಕ್ರಮಗಳಾದ ಹೆಣ್ಣುಮಕ್ಕಳಿಗೆ ಭೇಟಿ ಬಚಾವೊ-ಭೇಟಿ ಪಡಾವೋ ಆಂದೋಲನ ಹಾಗೂ ಸ್ವಚ್ಛ್ ಭಾರತ್ ಕಲ್ಪನೆಯ ಸ್ಯಾನಿಟರಿ ನ್ಯಾಪ್ ಕಿನ್ ಗಳನ್ನು ಐಷಾರಾಮಿ ಅಲಂಕಾರಿಕ ವಸ್ತುವಿನಿಂದ ಹೊರತುಪಡಿಸಿ ಅತೀ ಅವಶ್ಯಕ ವಸ್ತುವೆಂದು ಪರಿಗಣಿಸಿದಾಗ ಮಾತ್ರ ಇನ್ನಷ್ಟು ಅರ್ಥಪೂರ್ಣವಾಗುತ್ತದೆ.

ಬಳೆಗಳು, ಬಿಂದಿ, ಗರ್ಭನಿರೋಧಕ ಮಾತ್ರೆಗಳು, ಕಾಂಡಮ್ ಗಳು ಇವೆಲ್ಲದರ ಮೇಲೆ 0% ಜಿ.ಎಸ್.ಟಿ ವಿಧಿಸಿದ್ದು, ಸ್ಯಾನಿಟರಿ ನ್ಯಾಪ್ ಕಿನ್ ಗಳನ್ನು ಅತೀ ಅವಶ್ಯಕ ವಸ್ತುವಿನಡಿಯಲ್ಲಿ ಯಾಕೆ ಸೇರಿಸಿಲ್ಲ ಎಂಬುದೇ ಪ್ರಶ್ನಾತೀತವಾಗಿದೆ. ಈಗಲಾದರೂ ಇದರ ಗಂಭೀರತೆಯನ್ನು ಅತೀ ಅವಶ್ಯಕತೆಯನ್ನು ಅರಿತು ಇದರ ತೆರಿಗೆ ಮುಕ್ತಗೊಳಿಸಿ ದೇಶದ 50% ಜನಸಂಖ್ಯೆಯಾದ ಮಹಿಳೆಯರ ಭಾವನೆಗಳಿಗೆ ಸ್ಪಂದನೆ ನೀಡಬೇಕಾಗಿ ಪತ್ರದಲ್ಲಿ ವಿನಂತಿಸಲಾಗಿದೆ.

ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವೆರೋನಿಕಾ ಕರ್ನೆಲಿಯೊ, ರಾಜ್ಯ ಕಾಂಗ್ರೆಸ್ ನಾಯಕಿ ಸರಳಾ ಕಾಂಚನ್, ಜಿಲ್ಲಾ ಮಹಿಳಾ ಕಾಂಗ್ರೆಸ್ ನಾಯಕಿಯರಾದ ಡಾ. ಸುನಿತಾ ಶೆಟ್ಟಿ, ಚಂದ್ರಿಕಾ ಶೆಟ್ಟಿ, ಜ್ಯೋತಿ ಹೆಬ್ಬಾರ್, ಪ್ರಮೀಲಾ ಜತ್ತನ್ನ, ಮೇರಿ ಡಿ’ಸೋಜಾ ಹಾಗೂ ಇತರರು ಉಪಸ್ಥಿತರಿದ್ದರು.


Spread the love