ಹಂಗಾರಕಟ್ಟೆ ವಾಟರ್ ವೇಸ್ ಶಿಪ್ ಯಾರ್ಡ್ ಅಕ್ರಮ ಮರಳು ಗಣಿಗಾರಿಕೆ

Spread the love

ಹಂಗಾರಕಟ್ಟೆ ವಾಟರ್ ವೇಸ್ ಶಿಪ್ ಯಾರ್ಡ್ ಅಕ್ರಮ ಮರಳು ಗಣಿಗಾರಿಕೆ

ಕೋಟ: ಐರೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಂಗಾರಕಟ್ಟೆಯಲ್ಲಿರುವ ವಾಟರ್ ವೇಸ್ ಶಿಪ್ ಯಾರ್ಡ್‍ಗೆ ಮಂಗಳವಾರದಂದು ಬ್ರಹ್ಮಾವರ ವಿಶೇಷ ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್ ಭೇಟಿ ನೀಡಿ ಪರಿಶೀಲನೆ ನಡೆಸಿ ತೆರಳಿದ ಬೆನ್ನಲ್ಲೆ ಬುಧವಾರದಂದು ಸ್ಥಳೀಯ ಜಿಲ್ಲಾ ಪಂಚಾಯಿತಿ ಸದಸ್ಯ ರಾಘವೇಂದ್ರ ಕಾಂಚನ್ ಬಾರಿಕೆರೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ವಿಶೇಷ ತಹಶೀಲ್ದಾರ್ ಸಹಿತ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಶೀಘ್ರದಲ್ಲಿ ಮರಳುಗಾರಿಕೆ ಸಂಬಂಧಿತ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತಕ್ರಮ ಜರುಗಿಸುವಂತೆ ಆಗ್ರಹಪಡಿಸಿದರು.

illigal-sand-mining

ಶಿಪ್ ನಿರ್ಮಾಣ ಸಂಸ್ಥೆಯಾದ ವಾಟರ್ ವೇಸ್ ಆವರಣದಲ್ಲಿ ಮರಳುಗಾರಿಕೆ ನಡೆಯುತ್ತಿದೆ ಮತ್ತು ಅನಧಿಕೃತವಾಗಿ ಹೂಳೆತ್ತುವ ಕೆಲಸವಾಗುತ್ತಿದೆ ಎನ್ನುವ ಸಾರ್ವಜನಿಕರ ದೂರು ಬರುತ್ತಿದೆ. ಮಂಗಳವಾರದಂದು ತಹಶೀಲ್ದಾರ್ ಅವರು ಭೇಟಿ ನೀಡಿ ಸುಮಾರು 900 ಯುನಿಟ್ ಮರಳು ಇದೆ ಎಂದು ಅಂದಾಜಿಸಿ, ಮರಳನ್ನು ಪಿಡಬ್ಯ್ಲೂಡಿ ಇಲಾಖೆಗೆ ಹಸ್ತಾಂತರಿಸಿದ್ದರು ಮತ್ತು ಅಕ್ರಮ ಮರಳುಗಾರಿಕೆ ನಡೆದಿರುವುದು ಖಚಿತವಾಗಿದ್ದರು ಕೂಡ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಬಗ್ಗೆ ಸಾರ್ವಜನಿಕರನ್ನು ಜಿಲ್ಲಾ ಪಂಚಾಯಿತಿ ಸದಸ್ಯ ರಾಘವೇಂದ್ರ ಕಾಂಚನ್ ಬಾರಿಕೆರೆ ಅವರಲ್ಲಿ ದೂರು ನೀಡಿದ್ದರು.

ಬುಧವಾರದಂದು ವಾಟರ್ ವೇಸ್ ಶಿಪ್ ಯಾರ್ಡ್‍ಗೆ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಸದಸ್ಯರು, ಮರಳಿನ ದಿಬ್ಬ ಪರಿಶೀಲಿಸಿದ್ದಾರೆ. ಸಾಮಾನ್ಯವಾಗಿ ಕಟ್ಟಡ ನಿರ್ಮಾಣಕ್ಕೆ ಬಳಸುವ ಮರಳಿಗಿಂತ ವಿಶಿಷ್ಟವಾಗಿರುವ ಈ ಸಿಲಿಕಾ ಮರಳು ಇದಾಗಿದೆ, ಉತ್ತಮ ಮಾರುಕಟ್ಟೆ ಇದೆ ಎನ್ನುವ ಮಾಹಿತಿ ಹಿಡಿದು, ಉಡುಪಿ ಜಿಲ್ಲಾಧಿಕಾರಿಯವರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ವಿಶೇಷ ತಹಶೀಲ್ದಾರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಪಿಡಬ್ಯ್ಲೂಡಿ ಇಲಾಖೆ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಮನವಿ ಮಾಡಿದ್ದರು. ಅಲ್ಲದೇ ಸ್ಥಳೀಯರ ನೆರವಿನಿಂದ ಶಿಪ್‍ಯಾರ್ಡ್‍ನ ಆವರಣ ಗೋಡೆಯ ಪಕ್ಕದಲ್ಲಿ ಅಡಗಿಸಿ ಇಟ್ಟಿದ್ದ ಹೂಳೆತ್ತಲು ಬಳಸುವ ಯಂತ್ರಗಳನ್ನು ಪತ್ತೆ ಹಚ್ಚಿ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಅಲ್ಲದೇ ಶಿಪ್ ಯಾರ್ಡ್‍ನವರು ಅಕ್ರಮ ಮರಳುಗಾರಿಕೆ ನಡೆಸುತ್ತಿರುವುದು ಖಚಿತವಾಗಿದ್ದರು ಮತ್ತು ಶಿಪ್ ನಿರ್ಮಾಣದ ಸಂಬಂಧ ಯಾವುದೇ ಎರಡು ದಿನಗಳ ಹಿಂದೆ ಮರಳು ತೆಗೆಯಲು ಅನುಮತಿ ಅರ್ಜಿ ಸಲ್ಲಿಸಿರುವುದನ್ನು ನೋಡಿ ಕೂಡ ಯಾವದೇ ಕ್ರಮ ಕೈಗೊಳ್ಳದೆ ಉಳಿದ ವಿಚಾರವಾಗಿ ಅಧಿಕಾರಿಗಳನ್ನು ಪ್ರಶ್ನಿಸಿದರು.

ಬಳಿಕ ಅಧಿಕಾರಿಗಳ ಸಮ್ಮುಖ ಶಿಪ್ ಯಾರ್ಡ್‍ನ ಮಾಲೀಕರ ಜೊತೆ ಮಾತನಾಡಿದಾಗ, ಭಾರತೀಯ ನೌಕಾದಳಕ್ಕೆ ಸೇರಿದ ಸಬ್ ಮೆರಿನ್ ಬಿಡಿ ಭಾಗ ತಯಾರಿಸುವ ಹಂತದಲ್ಲಿದ್ದಾಗ, ಸುಲಭ ಸಂಚಾರಕ್ಕಾಗಿ ಹೂಳೆತ್ತಿ ಮರಳು ತೆಗೆಯಲಾಗಿದೆ. ಯಾವುದೇ ಮರಳುಗಾರಿಕೆ ಸಂಸ್ಥೆ ನಡೆಸುತ್ತಿಲ್ಲ. ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡದೆ ಹೊಳೆಯ ಹೂಳು ತೆಗೆದು ಮರಳು ಶೇಖರಿಸಿದ್ದೇವೆ, ಆದರೆ ಯಾವುದೇ ಮಾರಾಟ ನಡೆಸಿಲ್ಲ ಎಂದು ತಿಳಿಸಿದ್ದಾರೆ. ಇದಕ್ಕೆ ವಿರುದ್ಧವಾಗಿ ಸ್ಥಳೀಯರು ತಿಳಿಸುವಂತೆ ಸಂಗ್ರಹಿಸಿದ ಮರಳನ್ನು ರಾತ್ರಿ ವೇಳೆಯಲ್ಲಿ ಕಂಟೈನರ್‍ಗಳ ಮೂಲಕ ಸಾಗಿಸಲಾಗುತ್ತಿದೆ ಎಂದಿದ್ದಾರೆ.

ಪಿಡಬ್ಯ್ಲೂಡಿ ಇಲಾಖೆ ಅಧಿಕಾರಿಗಳು ಸಂಜೆಯವರೆಗೆ ಶಿಪ್ ಯಾರ್ಡ್‍ನಲ್ಲಿದ್ದು ಸಂಪೂರ್ಣ ಮರಳಿನ ಪ್ರಮಾಣದ ಮಾಹಿತಿ ಕಲೆ ಹಾಕಿದ್ದಾರೆ. ಒಟ್ಟು 3 ಸಾವಿರ 7ನೂರ 70 ಕುಬಿಕ್ ಟನ್ ಮರಳನ್ನು ಮೇಲೆತ್ತಲಾಗಿದ್ದು, ಸರಕಾರಿ ದರದಂತೆ 90 ಲಕ್ಷ ರೂಪಾಯಿಯಾಗಿದ್ದು, ಅತ್ತುತ್ತಮ ಗುಣಮಟ್ಟ ಸಿಲಿಕಾ ಮರಳು ಇದಾಗಿರುವ ಹಿನ್ನಲೆ ಖಾಸಗಿ ಮಾರುಕಟ್ಟೆಯಲ್ಲಿ ಅಧಿಕ ಬೆಲೆ ಇರಬಹುದು ತಿಳಿಸಿದ್ದಾರೆ. ಒಟ್ಟಾರೆಯಾಗಿ ಶಿಪ್ ನಿರ್ಮಿಸಬೇಕಾಗಿರುವ ಸಂಸ್ಥೆ ತಮಗೆ ನೀಡಿರುವ ಸಿಆರ್‍ಝಡ್ ವ್ಯಾಪ್ತಿಯನ್ನು ದುರಪಯೋಗಪಡಿಸಿಕೊಂಡು ಅನಧೀಕೃತ ಮರಳು ಗಾರಿಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಇಲಾಖೆಯವರು ಪಡೆದ ಸಂಪೂರ್ಣ ಮಾಹಿತಿ ಪ್ರಕಾರ ಮರಳುಗಾರಿಕೆ ನಡೆಸುವ ಬಗ್ಗೆ ಮತ್ತು ಹೂಳೆತ್ತುವ ಬಗ್ಗೆ ಶಿಪ್ ಯಾರ್ಡ್ ಮಾಲಕರ ಬಳಿ ಯಾವುದೇ ಅಧಿಕೃತ ದಾಖಲೆಗಳಿಲ್ಲದ ಹಿನ್ನಲೆಯಲ್ಲಿ, ಶಿಪ್ ಯಾಡ್ ಮಾಲಕರ ಮೇಲೆ ಕೇಸು ದಾಖಲಾಗುವ ಸಂಭಾವ್ಯತೆ ಹೆಚ್ಚಿದೆ.

ಈ ಸಂದರ್ಭ ವಿಶೇಷ ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹೇಶ್, ಗ್ರಾಮ ಲೆಕ್ಕಿಗ ಚೆಲುವರಾಜ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಭಾಶ್ ಖಾರ್ವಿ, ಸ್ಥಳೀಯರಾದ ಡೆನಿಸ್ ಮತ್ತು ಥಾಮಸ್ ಉಪಸ್ಥಿತರಿದ್ದರು.


Spread the love