ಉಡುಪಿ: ವಿಧಾನ ಪರಿಷತ್ ಚುನಾವಣೆ- ಜಿಲ್ಲೆಯಲ್ಲಿ ಶಾಂತಿಯುತ ಮತದಾನ

Spread the love

ಉಡುಪಿ:- ಉಡುಪಿಯಲ್ಲಿ ಇಂದು ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಯಾವುದೇ ಗೊಂದಲ, ಅಹಿತಕರ ಘಟನೆಗಳು ಇಲ್ಲದೇ, ಶಾಂತಿಯುತ ಮತದಾನ ನಡೆದಿದೆ.
ಬೆಳಗ್ಗೆ 8 ಗಂಟೆಗೆ ಆರಂಭಗೊಂಡ ಮತದಾನದಲ್ಲಿ ಉಡುಪಿ ನಗರಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ, ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಶಾಸಕ ಪ್ರಮೋದ್ ಮಧ್ವರಾಜ್ ಮತ್ತು ನಗರಸಭೆ ಅಧ್ಯಕ್ಷ ಪಿ.ಯುವರಾಜ್ ಮತದಾನ ಮಾಡಿದರು. ಸಾಲಿಗ್ರಾಮ ಪಟ್ಟಣ ಪಂಚಾಯಿತಿಯಲ್ಲಿ ಕೋಟಾ ಶ್ರೀನಿವಾಸ ಪೂಜಾರಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು.
ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ , ಬೈಂದೂರು ಶಾಸಕ ಗೋಪಾಲ ಪೂಜಾರಿ, ಪ್ರತಾಪ ಚಂದ್ರ ಶೆಟ್ಟಿ ಅವರು ಕುಂದಾಪುರ ತಾಲೂಕು ಪಂಚಾಯತ್ ನಲ್ಲಿ ಹಾಗೂ ಕಾರ್ಕಳ ಶಾಸಕ ಸುನೀಲ್ ಕುಮಾರ್ ಕಾರ್ಕಳ ತಾಲೂಕು ಪಂಚಾಯತ್ ನಲ್ಲಿ ಮತದಾನ ಮಾಡಿದರು.
ಬೆಳಗ್ಗೆ 10 ಗಂಟೆಯ ವೇಳೆಗೆ ಜಿಲ್ಲೆಯಲ್ಲಿ ಶೇ.41 ಮತದಾನ ನಡೆದಿದ್ದು, 12 ಗಂಟೆಯ ವೇಳೆಗೆ ಹಲವು ಮತಗಟ್ಟೆಗಳಲ್ಲಿ ಸಂಪೂರ್ಣ ಮತದಾನ ನಡೆದಿದ್ದು, ಮಧ್ಯಾಹ್ನ 12 ಗಂಟೆಯ ವೇಳೆಗೆ ಜಿಲ್ಲೆಯಲ್ಲಿ ಶೇ.92.26 ಮತದಾನ ನಡೆದಿತ್ತು.
ಕೋಡಿಬೆಟ್ಟು ಗ್ರಾಮ ಪಂಚಾಯತ್ ಮತಗಟ್ಟೆಯಲ್ಲಿ 19 ಮಂದಿ ಮತದಾರರಿದ್ದು, ಬೆಳಗ್ಗೆ 9 ಗಂಟೆಗೆ ಪ್ರಥಮ ಬಾರಿಗೆ ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದ ಕುಮಾರಿ ದಿವ್ಯ ಅವರು ಮೊದಲು ಮತದಾನ ಮಾಡಿದರು. ನಂತರ ಒಟ್ಟಾಗಿ ಬಂದ ವಿವಿಧ ಪಕ್ಷಗಳ ಸದಸ್ಯರು ಮತದಾನ ಮಾಡಿದರು. ಶಿವಪುರದಲ್ಲಿ 13 ಮತದಾರರಿದ್ದು, 11 ಗಂಟೆಯ ವೇಳೆಗೆ 12 ಮಂದಿ ಮತದಾನ ಮಾಡಿದ್ದರು.
ನಕ್ಸಲ್ ಭಾದಿತ ಪ್ರದೇಶಗಳಾದ ಹೆಬ್ರಿ ಪಂಚಾಯತ್‍ನಲ್ಲಿ 16 ಮತದಾರರಿದ್ದು 11 ಗಂಟೆಯ ವೇಳೆಗೆ 14 ಮಂದಿ ಮತದಾನ ಮಾಡಿದ್ದರೆ, ನಾಡ್ಪಾಲು ಮತಗಟ್ಟೆಯಲ್ಲಿ 7 ಮಂದಿ ಮತದಾರರಿದ್ದು ಬೆಳಗ್ಗೆ 9.30 ಗಂಟೆಗೆ ಸಂಪೂರ್ಣ ಮತದಾನವಾಗಿತ್ತು.
ಕುಚ್ಚೂರು, ಹಾರ್ದಳ್ಳಿ- ಮಂಡಳ್ಳಿ, ಹಾಲಾಡಿ, ಹೊಂಬಾಡಿ-ಮುಂಡಾಡಿ, ಕೋಟೇಶ್ವರ, ಕೋಟತಟ್ಟು, ಕೋಟ, ಸಾಲಿಗ್ರಾಮ ಪಟ್ಟಣ ಪಂಚಾಯತ್‍ನಲ್ಲಿ ಸಹ ಮಧ್ಯಾಹ್ನ 12.30 ರ ವೇಳೆಗೆ ಸಂಪೂರ್ಣ ಮತದಾನವಾಗಿತ್ತು.
ಜಿಲ್ಲೆಯಲ್ಲಿ ಒಟ್ಟು 2712 ಮತದಾರರಿದ್ದು, ಮಧ್ಯಾಹ್ನ 4 ಗಂಟೆಗೆ ಜಿಲ್ಲೆಯ 166 ಮತಗಟ್ಟೆಗಳಲ್ಲಿ ಒಟ್ಟು ಶೇ.98 ಮತದಾನ ನಡೆದಿತ್ತು, ಸುರಕ್ಷತೆಯ ದೃಷ್ಠಿಯಿಂದ ಮತದಾನ ಕೇಂದ್ರಗಳಿಗೆ ಸೂಕ್ತ ಭದ್ರತೆಯನ್ನು ಒದಗಿಸಲಾಗಿದ್ದು, ನಾಲ್ಕು ಗಂಟೆಗೆ ಶಾಂತಿಯುತವಾಗಿ ಮತದಾನ ಸಂಪೂರ್ಣಗೊಂಡಿದೆ.
ಜಿಲ್ಲೆಯ ಆರು ಕಡೆಗಳಲ್ಲಿ ಲೈವ್ ವೆಬ್ ಕಾಸ್ಟಿಂಗ್ ನಡೆಯಿತು. ಉಡುಪಿ ನಗರಸಭೆ, ಕುಂದಾಪುರ ತಾಲೂಕು ಪಂಚಾಯತ್, ಹೆಜಮಾಡಿ ಗ್ರಾಮಪಂಚಾಯತ್, ಹೊಂಬಾಡಿ- ಮಂಡಾಡಿ ಗ್ರಾಮಪಂಚಾಯತ್, ಕಾರ್ಕಳ ಪುರಸಭೆ, ಹಿರ್ಗಾನ ಗ್ರಾಮ ಪಂಚಾಯತ್‍ಗಳಲ್ಲಿ ವೆಬ್ ಕಾಸ್ಟಿಂಗ್ ನಡೆಯಿತು.
ಉಡುಪಿ ನಗರಸಭೆಯಲ್ಲಿ ಶೇ. ನೂರು ಮತದಾನವಾಗಿದೆ. ಉಡುಪಿಯಲ್ಲಿ ಒಟ್ಟು 1154 ಮತದಾರರರಿದ್ದು, 559 ಪುರುಷರು, 583 ಮಹಿಳೆಯರು ಸೇರಿದಂತೆ ಒಟ್ಟು 1142 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದರು.
ಕುಂದಾಪುರದಲ್ಲಿ ಒಟ್ಟು 1019 ಮತದಾರರಿದ್ದು, 1016 ಮತದಾರರು ತಮ್ಮ ಮತ ಚಲಾಯಿಸಿದ್ದಾರೆ. 489 ಪುರುಷರು, 527 ಮಹಿಳೆಯರು ಮತದಾನ ಮಾಡಿದ್ದಾರೆ. ಕಾರ್ಕಳದಲ್ಲಿ ಒಟ್ಟು 539 ಮತದಾರರು; 537 ಮತಚಲಾಯಿಸಿದವರು. ಇವರಲ್ಲಿ 260 ಪುರುಷರು. 277 ಮಹಿಳೆಯರು.
ಒಟ್ಟು 2712 ಮತದಾರರಲ್ಲಿ 2698 ಮತಗಳು ಚಲಾವಣೆಯಾಗಿದ್ದು, 14 ಮತದಾರರು ಮತದಾನ ಮಾಡಿಲ್ಲ. 1311 ಪುರುಷರು, 1387 ಮಹಿಳೆಯರು ಮತ ಚಲಾಯಿಸಿದ್ದಾರೆ.
ಕುಂದಾಪುರದಲ್ಲಿ 99.71, ಉಡುಪಿಯಲ್ಲಿ 98.96, ಕಾರ್ಕಳದಲ್ಲಿ 99.63 ಶೇಕಡವಾರು ಮತದಾನವಾಗಿದೆ. ಒಟ್ಟು ಶೇಕಡ 99.48 ಮತದಾನವಾಗಿದೆ.
ಉಡುಪಿಯ ತೋನ್ಸೆಯಲ್ಲಿ 2 ಪುರುಷರು, ಕಲ್ಯಾಣಪುರ 1 ಮಹಿಳೆ, ವಾರಂಬಳ್ಳಿ 1 ಮಹಿಳೆ, ಇನ್ನಂಜೆ 1 ಪುರುಷ, ಶಿರ್ವ 1 ಮಹಿಳೆ, ಬಡಾ 1 ಪುರುಷ, ತೆಂಕ 1 ಮಹಿಳೆ, ಉಡುಪಿ ತಾಲೂಕು ಪಂಚಾಯತ್ 1 ಪುರುಷ ಮತದಾನ ಮಾಡಿಲ್ಲ.
ಕುಂದಾಪುರ ಪಡುವರಿ 1 ಪುರುಷ, ತ್ರಾಸಿ 1 ಮಹಿಳೆ, ಕುಂಭಾಷಿ 1 ಪುರುಷ. ಕಾರ್ಕಳ 1 ಪುರುಷ, ಕಾರ್ಕಳ ಪುರಸಭೆ 1 ಪುರುಷ ಮತದಾನ ಮಾಡಿಲ್ಲ.
ಮತ ಎಣಿಕೆಯು ಡಿಸೆಂಬರ್ 30 ರಂದು ಬೆಳಗ್ಗೆ 8 ಗಂಟೆಗೆ ಮಂಗಳೂರಿನ ವಿಕ್ಟೋರಿಯ ಬಾಲಕಿಯರ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದೆ.


Spread the love