ಉಡುಪಿ: ಪರ್ಯಾಯ ಕಾರ್ಯಕ್ರಮ ಯಶಸ್ವಿಗೊಳಿಸಿ- ಸಚಿವ ವಿನಯ ಕುಮಾರ್ ಸೊರಕೆ

ಉಡುಪಿ :- ಜನವರಿ 17 ಮತ್ತು 18 ರಂದು ನಡೆಯುವ ಪೇಜಾವರ ಶ್ರೀ ಗಳ ಐದನೇ ಪರ್ಯಾಯ ಕಾರ್ಯಕ್ರಮದ ಯಶಸ್ಸಿಗೆ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಸೂಚಿಸಿದ್ದಾರೆ.

paryaya mtng_sorake 01-01-2016 15-31-022 paryaya mtng_sorake 01-01-2016 15-31-20 paryaya mtng_sorake 01-01-2016 15-31-021

ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಪರ್ಯಾಯೋತ್ಸವ ಪ್ರಯುಕ್ತದ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ನಡೆದ ಕಾರ್ಕಳದ ಮಹಾ ಮಸ್ತಕಾಭಿಷೇಕ ಮತ್ತು ಅತ್ತೂರು ಜಾತ್ರೆಯಂತಹ ಬೃಹತ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿದ ಹೆಗ್ಗಳಿಕೆ ಜಿಲ್ಲೆಗಿದ್ದು, ಅದೇ ರೀತಿ ಪರ್ಯಾಯೋತ್ಸವದಲ್ಲಿ ಸಹ ಕಾರ್ಯ ನಿರ್ವಹಿಸುವಂತೆ ಅವರು ಹೇಳಿದರು.

ಜನವರಿ 4 ರಂದು ಸ್ವಾಮೀಜಿಗಳು ಪುರ ಪ್ರವೇಶ ಮಾಡುವುದರಿಂದ ಆ ಸಂದರ್ಭದಲ್ಲಿ ಸೂಕ್ತ ಸಂಚಾರ ವ್ಯವಸ್ಥೆ ನಿರ್ವಹಿಸುವಂತೆ ಹಾಗೂ ಹೊರೆ ಕಾಣಿಕೆ ಸಂದರ್ಭದಲ್ಲಿ ಸುಗಮ ವಾಹನ ಸಂಚಾರ ಮತ್ತು ಪರ್ಯಾಯ ಸಮಯದಲ್ಲಿ ವಾಹನಗಳ ನಿಲುಗಡೆ ಮತ್ತು ಸಂಚಾರಕ್ಕೆ ಕ್ರಮ ಕೈಗೊಳ್ಳುವಂತೆ ಮತ್ತು ಸೂಕ್ತ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ ವಿಶಾಲ್ ಅವರು ಸೂಚಿಸಿದರು.

ಈಗಾಗಲೇ ಅಗತ್ಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲು ಸಿದ್ದತೆ ನಡೆಸಿದ್ದು, ಜೊತೆಗೆ ಮಹಿಳಾ ಪೊಲೀಸ್ ಮತ್ತು ಗೃಹ ರಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾಗುವುದು , ಅಗತ್ಯವಿರುವಡೆ ಸಿಸಿ ಕ್ಯಾಮೆರಾ ಅಳವಡಿಸಲು ಸಿದ್ದತೆ ನಡೆಸಿದ್ದು, ಪರ್ಯಾಯ ಸಮಯದಲ್ಲಿ ಪಿಕ್ ಪಾಕೆಟ್, ಸರಗಳ್ಳತನ ಮುಂತಾದ ಅಪರಾಧ ಪ್ರಕರಣಗಳನ್ನು ತಡೆಯಲು ಜಿಲ್ಲೆಯ ಮತ್ತು ಹೊರ ಜಿಲ್ಲೆಗಳ ಪೊಲೀಸ್ ಅಪರಾಧ ವಿಭಾಗದ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು , ಅಲ್ಲದೇ ಪೊಲೀಸ್ ಕಂಟ್ರೋಲ್ ರೂಂ ಹಾಗೂ ಸಿಸಿ ಕ್ಯಾಮೆರಾ ಕಂಟ್ರೋಲ್ ರೂಂ ಸ್ಥಾಪಿಸಲಾಗುವುದು ಹಾಗೂ ಪಾರ್ಕಿಂಗ್ ವ್ಯವಸ್ಥೆಗೆ 24 ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದರು.

ಪೊಲೀಸ್ ಇಲಾಖೆಗೆ ಹೆಚ್ಚಿನ ವಾಹನಗಳ ಅಗತ್ಯವಿದ್ದಲ್ಲಿ ಆರ್.ಟಿ.ಓ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.

ಪಾರ್ಕಿಂಗ್ ಪ್ರದೇಶದಲ್ಲಿ ತಾತ್ಕಾಲಿಕ ಶೌಚಾಲಯಗಳನ್ನು, ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಮತ್ತು ಹೊರೆ ಕಾಣಿಕೆ ಮತ್ತು ಮೆರವಣಿಗೆ ನಡೆಯುವ ರಸ್ತೆಗಳನ್ನು ಸುಸ್ಥಿತಿಯಲ್ಲಿಡುವಂತೆ ಹಾಗೂ ಕೃಷ್ಣ ಮಠದ ಆವರಣದಲ್ಲಿ ಪೂರ್ಣಗೊಂಡಿರುವ ಕಾಮಗಾರಿ ಪ್ರದೇಶವನ್ನು ಸ್ವಚ್ಛಗೊಳಿಸುವಂತೆ ಪೌರಾಯುಕ್ತರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಅಗ್ನಿಶಾಮಕ ಇಲಾಖೆ ಸನ್ನದ್ದರಾಗಿರುವಂತೆ ಹಾಗೂ ತುರ್ತು ಆರೋಗ್ಯ ವ್ಯವಸ್ಥೆಗೆ ಆಂಬುಲೆನ್ಸ್ ಹಾಗೂ ಸಿಬ್ಬಂದಿಯನ್ನು ನಿಯೋಜಿಸುವಂತೆ ಆರೋಗ್ಯ ಇಲಾಖೆಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಪರ್ಯಾಯ ಕಾರ್ಯಕ್ರಮದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗದಂತೆ ಕ್ರಮ ವಹಿಸುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಮತ್ತು ಆಗಮಿಸುವ ಪ್ರಯಾಣಿಕರಿಗೆ ಹೆಚ್ಚಿನ ಬಸ್ ಸೌಕರ್ಯ ಒದಗಿಸುವಂತೆ ಕೆ.ಎಸ್.ಆರ್..ಟಿ.ಸಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರಿಗೆ ತಂಗಲು ಪ್ರವಾಸಿ ಮಂದಿರನ್ನು ಸಿದ್ದವಾಗಿಡುವಂತೆ ಮತ್ತು ಹೆಲಿಪ್ಯಾಡ್ ನಿರ್ಮಿಸುವಂತೆ ಲೋಕೊಪಯೋಗಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಜನವರಿ 4 ರಂದು ಸಂಜೆ 4 ಗಂಟೆಗೆ ಸ್ವಾಮೀಜಿಗಳು ಪುರ ಪ್ರವೇಶ ಮಾಡಲಿದ್ದು, ಮೆರವಣಿಗೆಯಲ್ಲಿ ಸ್ವಾಮೀಜಿಗಳ 600 ಶಿಷ್ಯರ ಬೈಕ್ ರ್ಯಾಲಿ, 55 ಕಲಾತಂಡಗಳಿಂದ ಮೆರವಣಿಗೆ ನಡೆಯಲಿದ್ದು, ಸುಮಾರು 3000 ಜನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ, ಕೆ.ಎಂ. ಮಾರ್ಗವಾಗಿ ಮೆರವಣಿಗೆ ನಡೆಯಲಿದ್ದು, 6.30 ಕ್ಕೆ ರಥಬೀದಿ ಪ್ರವೇಶಿಸಿ, 7.30 ಕ್ಕೆ ಪೌರ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಜನವರಿ 5 ರಿಂದ ಪ್ರತಿದಿನ ಸಂಜೆ 4 ಗಂಟೆಗೆ ಹೊರೆ ಕಾಣಿಕೆ ನಡೆಯಲಿದ್ದು, ಕೃಷ್ಣಮಠದ ಪಾರ್ಕಿಂಗ್ ಬಳಿ ಉಗ್ರಾಣ ಸ್ಥಾಪಿಸಲಾಗಿದೆ,ಜನವರಿ 17 ರಂದು ಮುಸ್ಲಿಂ ಬಾಂಧವರು ಬೃಹತ್ ರಕ್ತದಾನ ಶಿಬಿರ ನಡೆಸಲಿದ್ದಾರೆ ಎಂದು ಮಠದ ದಿವಾನರು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Please enter your comment!
Please enter your name here