19 ಪಂಚಾಯಿತಿಗಳಿಗೆ ಘನತ್ಯಾಜ್ಯ ವಿಲೇ ಘಟಕ ಮಂಜೂರು ; ಪ್ರಿಯಾಂಕ ಮೇರಿ ಫ್ರಾನ್ಸಿಸ್

ಉಡುಪಿ: ಉಡುಪಿ ಜಿಲ್ಲೆ ಬಯಲು ಮಲವಿಸರ್ಜನೆ ಮುಕ್ತ ಜಿಲ್ಲೆಯಾಗಿ ಗುರುತಿಸಲಾಗಿದ್ದು, ಸ್ವಚ್ಛ ಭಾರತ್ ಮಿಷನ್‍ನಡಿ ಬಯಲು ಶೌಚಾಲಯ ಮುಕ್ತ ಜಿಲ್ಲೆಯಾಗಿ ಕೇಂದ್ರ ಸರ್ಕಾರದಿಂದ ಶೀಘ್ರವೇ ಅಧಿಕೃತ ಘೋಷಣೆಗೆ ತಯಾರಾಗಿ ನಿಂತಿದೆ.
ಜಿಲ್ಲೆಯಲ್ಲಿ ತ್ಯಾಜ್ಯ ವಿಲೇ ಹಾಗೂ ಸ್ವಚ್ಛತೆಯನ್ನು ನಿರಂತರವಾಗಿ ಕಾಪಿಡಲು ಎಲ್ಲ ಗ್ರಾಮಪಂಚಾಯತ್‍ಗಳಲ್ಲಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ಘಟಕಗಳ ಸ್ಥಾಪನೆಗೆ ಆದ್ಯತೆ ನೀಡಿ; ಯೋಜನೆಗಳನ್ನು ಕಾರ್ಯಾನುಷ್ಠಾನಗೊಳಿಸಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು,
2012ರ ಯೋಜನಾ ಅನುಷ್ಠಾನ ಗುರಿಯಡಿ 27966 ಶೌಚಾಲಯ ನಿರ್ಮಾಣದ ನಿಗದಿತ ಗುರಿಯಲ್ಲಿ 27872 ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಜಿಲ್ಲೆಯನ್ನು ಒಡಿಎಫ್(ಬಯಲು ಮಲವಿಸರ್ಜನೆ ಮುಕ್ತ ಜಿಲ್ಲೆಯಾಗಿಸಲು) ನ್ನಾಗಿ ರೂಪಿಸಲು ಎಲ್ಲ ಗ್ರಾಮಪಂಚಾಯತ್‍ಗಳಲ್ಲಿ ಸ್ವಯಂ ಮೌಲ್ಯಮಾಪನ ಮತ್ತು ಅಂತರ್ ತಾಲೂಕು ಮೌಲ್ಯಮಾಪನ ನಡೆಸಲಾಗಿದೆ. ನ್ಯೂನ್ಯತೆಗಳನ್ನು ಸರಿಪಡಿಸಲು ಕ್ರಮಕೈಗೊಳ್ಳಲಾಗಿದೆ.

priyanka-mary-francis

ಶಾಲಾ ಹಾಗೂ ಅಂಗನವಾಡಿ ನೈರ್ಮಲ್ಯಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದ ಸಿಇಒ ಅವರು, 19 ಗ್ರಾಮಪಂಚಾಯತ್ ಗಳಿಗೆ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ಘಟಕಗಳಿಗೆ ಸರ್ಕಾರದಿಂದ ಅನುಮೋದನೆ ದೊರಕಿದ್ದು ಜಮೀನು ಗುರುತಿಸಿ ಕೆಲಸ ಆರಂಭಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಉಡುಪಿಯ ಕೊಕ್ಕರ್ಣೆ, ಯಡ್ತಾಡಿ, ಪೆರ್ಡೂರು, ಕಲ್ಯಾಣಪುರ. ಮುದರಂಗಡಿ, ವಾರಂಬಳ್ಳಿ ಕುಂದಾಪುರದ ತ್ರಾಸಿ, ಬಸ್ರೂರು, ಸಿದ್ದಾಪುರ, ಮರವಂತೆ ಹಾಗೂ ಕಾರ್ಕಳದ ಸಾಣೂರು, ನೀರೆ, ಮುಂಡ್ಕೂರು, ಬೆಳ್ಮಣ್, ಮಿಯಾರು, ವರಂಗ, ಮರ್ಣೆ, ಬೈಲೂರು, ಈದುವಿಗೆ ಒಟ್ಟು ತಲಾ 20 ಲಕ್ಷ ರೂ. ಅನುದಾನ ನಿಗಧಿಪಡಿಸಿ ಅನುಷ್ಠಾನಗೊಳಿಸಲು ಆದೇಶಿಸಲಾಗಿದೆ.
ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಹಸಿಕಸವನ್ನು ಗೊಬ್ಬರವಾಗಿ ಪರಿವರ್ತಿಸಿ ಶಾಲಾ ಕೈತೋಟಗಳಿಗೆ ಬಳಸುವಂತೆ ಯೋಜನೆಯನ್ನು ಅಳವಡಿಸಿ ಎಂದು ಜಿಲ್ಲೆಯ ವಿದ್ಯಾಂಗ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಉಡುಪಿ ತಾಲೂಕಿನ ಹೆಗ್ಗುಂಜೆ, ಕಾಡೂರು, ಬಡಗಬೆಟ್ಟು, ಅಲೆವೂರು ಗ್ರಾಮಪಂಚಾಯಿತಿ, ಕುಂದಾಪುರ ತಾಲೂಕಿನ ತ್ರಾಸಿ, ಹೊಸಾಡು, ತಲ್ಲೂರು, ಕೋಣಿ ಗ್ರಾಮಪಂಚಾಯತ್, ಕಾರ್ಕಳ ತಾಲೂಕಿನ ಎರ್ಲಪ್ಪಾಡಿ, ವರಂಗ, ಮಿಯಾರು, ಕಡ್ತಲ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಪೈಪು ಕಾಂಪೋಸ್ಟ್ ಪ್ರಾರಂಭಿಸಲಾಗಿದೆ. ಜನರು ತಮ್ಮ ಮನೆಯಲ್ಲಿ ಹಸಿಕಸವನ್ನು ರಸಗೊಬ್ಬರವಾಗಿ ಪರಿವರ್ತಿಸಲು ಮುಂದಾಗಿದ್ದಾರೆ.
ಇದೇ ಮಾದರಿಯನ್ನು ಜಿಲ್ಲೆಯ ಶಾಲಾ, ಕಾಲೇಜುಗಳಲ್ಲಿ ಅಳವಡಿಸುವುದರಿಂದ ಮಕ್ಕಳ ಮೂಲಕ ಹೆತ್ತವರು ಯೋಜನೆಯ ಬಗ್ಗೆ ಆಸಕ್ತಿ ತೋರಿಸುವುರಲ್ಲದೆ, ತ್ಯಾಜ್ಯ ವಿಲೇ ಸುಲಭವಾಗಿ ತ್ಯಾಜ್ಯದಿಂದ ಗೊಬ್ಬರ ಉತ್ಪಾದನೆಯಾಗಲಿದೆ ಎಂದು ಸಿಇಒ ಹೇಳಿದರು.
ಬೇಸಿಗೆಯಲ್ಲಿ ನೀರಿನಿಂದ ಹರಡುವ ರೋಗಗಳ ಬಗ್ಗೆ ಎಚ್ಚರಿಕೆ ವಹಿಸಲು ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗೆ ಸೂಚನೆ ನೀಡಿದರು.
ಉಪಕಾರ್ಯದರ್ಶಿ ಶ್ರೀನಿವಾಸ್ ರಾವ್ ಮತ್ತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿದ್ದರು.

Leave a Reply