ಸಿದ್ದಾರಾಮಯ್ಯ ಸರಕಾರದಿಂದ “ನಿದ್ರಾಪಹಾರದ”ಬಜೆಟ್ : ಕ್ಯಾಪ್ಟನ್ ಗಣೇಶ್ ಕಾರ್ಣಿಕ್

ಮಂಗಳೂರು: ಸದಾ ನಿದ್ರಿಸುತ್ತಿದ್ದ ಸಿದ್ದಾರಾಮಯ್ಯ ಸರಕಾರದಿಂದ “ನಿದ್ರಾಪಹಾರದ” ಬಜೆಟ್ ನೀಡಿದೆ ಎಂದು ವಿಧಾನಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಲೇವಡಿ ಮಾಡಿದ್ದಾರೆ.
ಜನಸಾಮಾನ್ಯರು ಉಪಯೋಗಿಸುವ ವಸ್ತುಗಳ ಬೆಲೆ ಎರಿಕೆಗೆ ಕಾರಣವಾಗುವ ತೆರಿಗೆ ನೀತಿ ತಂದ ಮುಖ್ಯಮಂತ್ರಿಗಳು ಶ್ರೀಮಂತರು ಉಪಯೋಗಿಸುವ ವಸ್ತುಗಳ ಮೇಲೆ ತೆರಿಗೆ ವಿನಾಯಿತಿ ನೀಡಿದ್ದಾರೆ. ಖಾಸಗಿ ವಾಹನಗಳ ಆಸನಗಳ ಮೇಲೆ ಹೆಚ್ಚಿಸಿರುವ ತೆರಿಗೆಯಿಂದ ಜನಸಾಮಾನ್ಯರ ಮೇಲೆ ತೀವ್ರ ಪರಿಣಾಮ ಬೀರಲಿದ್ದು ಬಜೆಟನ್ನು ಸಾಂಕೇತಿಸುವಂತೆ ಬಜೆಟ್ ಪುಸ್ತಕದೊಂದಿಗೆ ನೀಡಿದ “ಸೆಣಬಿನ ಚೀಲ”ವೇ ಜನ ಸಾಮಾನ್ಯರಿಗೆ ಈ ಬಜೆಟ್ ನೀಡಿದ ಕೊಡುಗೆ ಎಂದಿದ್ದಾರೆ.
ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಅನುದಾನವನ್ನು ಕಳೆದ ವರ್ಷದ 14% ನಿಂದ 12% ಕ್ಕೆ ಇಳಿಸಿರುವುದು ಅತ್ಯಂತ ಖೇದಕರವಾಗಿದ್ದು, ವೇತನ ತಾರತಮ್ಯ, ಕಾಲ್ಪನಿಕ, ಅನುದಾನಿತ ಹುದ್ದೆಗಳನ್ನು ತುಂಬಲು ಅನುಮತಿ, 95ರ ನಂತರ ಪ್ರಾರಂಭವಾದ ಖಾಸಗೀ ಶಾಲಾ ಕಾಲೇಜುಗಳನ್ನು ಅನುದಾನದ ವ್ಯಾಪ್ತಿಗೆ ಒಳಪಡಿಸುವುದು, ಶಿಕ್ಷಕ, ಉಪನ್ಯಾಸಕ ವೃಂದದವರಿಗೆ ಆರೋಗ್ಯ ವಿಮೆ ಮುಂತಾದವುಗಳ ಬಗ್ಗೆ ಬಹು ನಿರೀಕ್ಷೆ ಇದ್ದರೂ ಎಲ್ಲವನ್ನೂ ಹುಸಿಗೊಳಿಸಿದ ಈ ಬಜೆಟ್ ಶಿಕ್ಷಣ ಕ್ಷೇತ್ರಕ್ಕೆ ಮಾರಕ ಹೊಡೆತ ನೀಡಿದೆ. ಬಾಲವಾಡಿ, ಅಂಗನವಾಡಿ, ಸರಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆಯ “ಅಭಯ” ಯೋಜನೆ ಸ್ವಾಗತಾರ್ಹ ಆದರೆ ಈ ತಪಾಸಣೆಯ ಸೌಲಭ್ಯ ವನ್ನು ಅದೇ ಶಾಲೆಯ ಶಿಕ್ಷಕರಿಗೆ ವಿಸ್ತರಿಸದಿರುವುದು ದುರಂತವಾಗಿದೆ.ಹೊಸ 43 ತಾಲೂಕುಗಳ ಘೋಷಣೆ ನಿರಿಕ್ಷಿಸಿದ್ದ ಜನತೆಗೆ ಪೂರ್ಣ ನಿರಾಸೆಯಾಗಿದ್ದು, ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಹಾಗೂ ಅತ್ಯಂತ ಅಗತ್ಯವಿರುವ ಮಂಗಳೂರು ವಿಮಾನ ನಿಲ್ದಾಣದ ರನ್‍ವೇ ವಿಸ್ತರಣಾ ಕಾರ್ಯವನ್ನು ಕಡೆಗಣಿಸಿರುವುದು ದುರಾದೃಷ್ಟಕರ.
ರಾಷ್ಟೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಪ್ರಯಾಣಿಕರಿಗೆ ಮೂಲ ಸೌಲಭ್ಯಗಳನ್ನು ಒದಗಿಸುವ “ ಕುಟೀರ” ಯೋಜನೆ ರಾಜ್ಯದಲ್ಲೇ ವಿಶಿಷ್ಟವಾಗಿರುವ ಮಂಗಳೂರಿನ ಪಿಲಿಕುಳ ನಿಸರ್ಗದಾಮದಲ್ಲಿ ಪ್ರಾರಂಭಿಸಲಾಗುವ “ಓಶನೇರಿಯಂ” ಸ್ಥಾಪಿಸುವ ನಿರ್ಣಯ ಅಭಿನಂದನಾರ್ಹ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Leave a Reply