ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಅಭ್ಯರ್ಥಿ ಆಯ್ಕೆ ಬಿಜೆಪಿ – ಕಾಂಗ್ರೆಸ್ ಕಸರತ್ತು

Spread the love

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಅಭ್ಯರ್ಥಿ ಆಯ್ಕೆ ಬಿಜೆಪಿ – ಕಾಂಗ್ರೆಸ್ ಕಸರತ್ತು

ಉಡುಪಿ: ಲೋಕಸಭೆ ಚುನಾವಣೆಗೆ ಆಯೋಗ ದಿನಾಂಕ ನಿಗದಿ ಮಾಡಿದ್ದು ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆ ಎಪ್ರಿಲ್ 18 ನಿಗದಿಯಾದ ಬೆನ್ನಲ್ಲೇ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಅಭ್ಯರ್ಥಿಗಳ ಆಯ್ಕೆಯ ಕಸರತ್ತು ಬಿರುಸು ಪಡೆದುಕೊಂಡಿದೆ.

ಉಡುಪಿ ಜಿಲ್ಲೆಯ ನಾಲ್ಕು ಹಾಗೂ ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ನಲ್ಲಿ ಟಿಕೆಟ್ಗಾಗಿ ಪೈಪೋಟಿ ಆರಂಭವಾಗಿದೆ. ಸದ್ಯದ ಮಾಹಿತಿಯಂತೆ ಬಿಜೆಪಿಯಿಂದ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಮೀನುಗಾರಿಕಾ ಸಮುದಾಯದ ಮುಖಂಡ ಯುವ ನಾಯಕ ಯಶಪಾಲ್ ಸುವರ್ಣ ನಡುವೆ ತೀವ್ರ ಪೈಪೋಟಿ ಇದ್ದರೆ, ಕಾಂಗ್ರೆಸ್ ಪಕ್ಷದಿಂದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮತ್ತು ಚಿಕ್ಕಮಗಳೂರು ಕಾಂಗ್ರೆಸ್ ನಾಯಕಿ ಆರತಿ ಕೃಷ್ಣ ಅವರುಗಳ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಬಿಜೆಪಿಯಲ್ಲಿ ಕಾರ್ಯಕರ್ತರು ಹೊಸ ಮುಖಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬ ಕೂಗು ಬಲವಾಗಿ ಪ್ರತಿಪಾದಿಸುತ್ತಿದ್ದು ಕಾಂಗ್ರೆಸ್ ಪಕ್ಷ ಬಿಜೆಪಿ ಅಭ್ಯರ್ಥಿಯನ್ನು ನೋಡಿ ತಮ್ಮ ಅಭ್ಯರ್ಥಿಯನ್ನು ಬಹಿರಂಗ ಪಡಿಸುವ ಕುರಿತು ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಒಟ್ಟಾರೆ ಕರ-ಕೇಸರಿ ಪಡೆ ನಡುವೆ ನೇರ ಹಣಾಹಣಿ ಇದ್ದು, ಜೆಡಿಎಸ್ ನಿರ್ಣಾಯಕವೇನಲ್ಲ.

2013 ರಲ್ಲಿ ಮೋದಿ ಅಲೆಯ ನಡುವೆ ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದಿಂದ ದಾಖಲೆ ಮತಗಳ ಅಂತರದಿಂದ ಗೆದ್ದ ಹಾಲಿ ಶೋಭಾ ಕರಂದ್ಲಾಜೆಗೇ ಈ ಬಾರಿ ಬಿಜೆಪಿ ಟಿಕೆಟ್ ನೀಡದಂತೆ ಕಾರ್ಯಕರ್ತರು ಹಾಗೂ ಶಾಸಕರು ಹೆಚ್ಚಿನ ಒತ್ತಡವನ್ನು ಹಾಕುತ್ತಿದ್ದಾರೆ. ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯೊಂದಿಗೆ ಈಗಾಗಲೇ ದೆಹಲಿ ತಲುಪಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡ್ಯೂರಪ್ಪ ಅವರು ಉಡುಪಿ – ಚಿಕ್ಕಮಗಳೂರು ಕ್ಷೇತ್ರದಿಂದ ಶೋಭಾ ಕರಂದ್ಲಾಜೆ ಮತ್ತು ಯಶಪಾಲ್ ಸುವರ್ಣ ಅವರ ಹೆಸರಗಳನ್ನು ಅಂತಿಮಗೊಳಿಸಿ ಅವರಲ್ಲಿ ಒರ್ವರಿಗೆ ಅವಕಾಶ ನೀಡುವಂತೆ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಪಟ್ಟಿಯನ್ನು ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದ್ದು ಕೊನೆಯ ಕ್ಷಣದಲ್ಲಿ ಯಾರಿಗೆ ಟಿಕೇಟ್ ಲಭಿಸಲಿದೆ ಎನ್ನುವುದು ಅಧಿಕೃತ ಪಟ್ಟಿ ಬಿಡುಗಡೆಯಾದ ಬಳಿಕವಷ್ಠೆ ತಿಳಿಯಲಿದೆ.

ಹಾಲಿ ಸಂಸದೆ ಶೋಭಾ ಅವರ ಸ್ಪರ್ಧೆ ವಿಚಾರದಲ್ಲಿ ಜಿಲ್ಲೆಯ ಬಿಜೆಪಿ ಶಾಸಕರು ಸೇರಿದಂತೆ ಬಹುತೇಕ ಮುಖಂಡರಿಗೆ ಅಸಮಾಧಾನವಿದೆ. ಚಿಕ್ಕಮಗಳೂರು ಶಾಸಕ ಸಿ ಟಿ ರವಿ ಅವರು ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರೆ, ಇತರ ಶಾಸಕರು ಪಕ್ಷದ ಚೌಕಟ್ಟಿನಲ್ಲಿಯೇ ಶೋಭಾ ಅವರ ಅಭ್ಯರ್ಥಿತನಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಕಳೆದ ಬಾರಿ ಗೆದ್ದ ಬಳಿಕ ಶೋಭಾ ಅವರು ಉಡುಪಿಯ ಕಡೆಗೆ ಅಷ್ಟಾಗಿ ಗಮನ ನೀಡಿಲ್ಲ. ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ನಡೆಸಿಲ್ಲ. ರಾಷ್ಟ್ರೀಯ ಹೆದ್ದಾರಿ 66 ಹಾಗೂ 169 ಎ ರಸ್ತೆ, ಪ್ಲೈಓವರ್ ಕಾಮಗಾರಿ ಪೂರ್ಣಗೊಳಿಸುವುದರಲ್ಲಿ ವಿಳಂಬ. ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ನಿರ್ಲಕ್ಷ್ಯ. ಹೀಗೆ ಹಲವಾರು ಕಾರಣಗಳಿಂದ ಕ್ಷೇತ್ರದ ಜನತೆ ಹಾಗೂ ಬಿಜೆಪಿ ಪಕ್ಷದವರಿಗೆ ಆಕ್ರೋಶವಿದೆ. ಅಲ್ಲದೆ ಸಂಸದೆಯ ವೈಫಲ್ಯದಿಂದಾಗಿ ಹಲವಾರು ಬಾರಿ ಬಿಜೆಪಿ ಶಾಸಕರೇ ಮುಜುಗರಕ್ಕೆ ಒಳಗಾಗಬೇಕಾದ ಪ್ರಸಂಗ ಎದುರಾಗಿತ್ತು. ಕ್ಷೇತ್ರಕ್ಕೆ ಭೇಟಿ ನೀಡದೆ ರಾಜ್ಯ ರಾಜಕಾರಣದಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಸಂಸದೆಯ ವಿರುದ್ಧ ಇಡೀ ಕ್ಷೇತ್ರದ ಜನರಲ್ಲಿ ಆಕ್ರೋಶವಿದೆ. ಹಾಗಾಗಿ ಮತ್ತೆ ಇವರಿಗೆ ಟಿಕೆಟ್ ನೀಡಬಾರದೆಂದು ಸ್ವಪಕ್ಷಿಯರೇ ನಾಯಕರ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕು ದಾರದಹಳ್ಳಿ ಗ್ರಾಮವನ್ನು ಶೋಭಾ ಕರಂದ್ಲಾಜೆ ಸಂಸದರ ಆದರ್ಶ ಗ್ರಾಮ ಯೋಜನೆಗೆ ಆಯ್ಕೆ ಮಾಡಿ, ಆರಂಭದಲ್ಲಿ ಕೆಲ ಯೋಜನೆಗಳನ್ನು ಘೊಷಿಸಿದ್ದರು. ಆದರೆ ಗ್ರಾಮದಲ್ಲಿ ಯಾವುದೇ ಮಹತ್ವದ ಯೋಜನೆಗಳು ಜಾರಿಯಾಗಿಲ್ಲ.

ಯಶಪಾಲ್ ಸುವರ್ಣ ಅವರು ಮೀನುಗಾರಿಕಾ ನಾಯಕರಾಗಿ ತನ್ನ ಸಮುದಾಯದ ಪರವಾಗಿ ದನಿ ಎತ್ತಿ ಸದಾ ಸುದ್ದಿಯಲ್ಲಿದ್ದು ಮೀನುಗಾರಿಕಾ ಮುಖಂಡರೂ ಸಹ ಅವರಿಗೆ ಈ ಬಾರಿ ಅವಕಾಶ ನೀಡುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಆರ್ ಎಸ್ಎಸ್ ವಲಯದಿಂದ ಕೂಡ ಯಶಪಾಲ್ ಸುವರ್ಣ ಅವರ ಆಯ್ಕೆಗೆ ಗ್ರೀನ್ ಸಿಗ್ನಲ್ ಲಭಿಸಿದ್ದು ಇದು ಕೂಡ ಅವರಿಗೆ ವರವಾಗಲಿದೆ ಎನ್ನಲಾಗುತ್ತಿದೆ. ಜಾತಿ ಲೆಕ್ಕಾಚಾರದಲ್ಲಿ ನೋಡಿದರೆ ಕರಾವಳಿ ಭಾಗದಲ್ಲಿ ಮೊಗವೀರ ಸಮುದಾಯ ಕೂಡ ಪ್ರಬಲ ಸಮುದಾಯವಾಗಿದೆ. ಅಲ್ಲದೆ ಈ ಸಮುದಾಯದ ಅಭ್ಯರ್ಥಿಗಳಿಗೆ ಬೇರೆ ಕಡೆಗಳಲ್ಲಿ ಟಿಕೆಟ್ ನೀಡಲು ಅಸಾಧ್ಯವಾಗಿರುವುದರಿಂದ ಮೊಗವೀರ ಸಮುದಾಯಕ್ಕೆ ಸೇರಿದ ಯಶ್ ಪಾಲ್ ಸುವರ್ಣ ಅವರಿಗೆ ಟಿಕೆಟ್ ನೀಡಲು ಹೈಕಮಾಂಡ್ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ. ಆ ಮೂಲಕ ಮೀನುಗಾರ ಸಮುದಾಯಕ್ಕೆ ಆದ್ಯತೆ ನೀಡಲು ತೀರ್ಮಾನಿಸಿದೆ.

2008ರಲ್ಲಾದ ಲೋಕಸಭೆ ಕ್ಷೇತ್ರ ಪುನರ್ವಿಂಗಡಣೆ ಬಳಿಕ 2009ರಲ್ಲಿ ನಡೆದ ಚುನಾವಣೆಯಲ್ಲಿ ವಲಸೆ ಬಂದ ಡಿ.ವಿ. ಸದಾನಂದ ಗೌಡ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದು, 2011ರಲ್ಲಿ ರಾಜ್ಯದ ಮುಖ್ಯಮಂತ್ರಿಯಾದರೂ ಉಡುಪಿ-ಚಿಕ್ಕಮಗಳೂರಿಗೇನೂ ದಕ್ಕಲಿಲ್ಲ. ಸದಾನಂದ ಗೌಡ ಅವರು ಕೆಲವೇ ಸಮಯ ಸಂಸದರಾಗಿ ಮಧ್ಯದಲ್ಲಿಯೇ ಮುಖ್ಯಮಂತ್ರಿಯಾಗಿ ಹೋದ ಬಳಿಕ ಕ್ಷೇತ್ರವನ್ನು ಅನಾಥವಾಗಿಸಿದರು. ಅಲ್ಲದೆ ಸಂಸದರಾಗಿದ್ದ ಸಮಯದಲ್ಲೂ ಕೂಡ ಕ್ಷೇತ್ರದ ಕುರಿತು ಅಷ್ಟೋಂದು ಉತ್ಸಾಹ ತೋರಿಸಿರಲಿಲ್ಲ. ಉಡುಪಿ-ಚಿಕ್ಕಮಗಳೂರು ಎರಡೂ ಕಡೆ ವೈಯಕ್ತಿಕ ವರ್ಚಸ್ಸು ಹೊಂದಿರುವವರು ಜಯಪ್ರಕಾಶ್ ಹೆಗ್ಡೆ. 2012ರ ಉಪ ಚುನಾವಣೆ ಯಲ್ಲಿ ಸ್ಪರ್ಧಿಸಿ ಗೆದ್ದು, 2014ರಲ್ಲಿ ಶೋಭಾ ಎದುರು ಸೋಲುಂಡಿದ್ದರು. ಬಳಿಕ ಪಕ್ಷದ ಜತೆ ಮುನಿಸಿಕೊಂಡು ಬಿಜೆಪಿ ಸೇರಿದ್ದರು. ವಿಧಾನಸಭಾ ಚುನಾವಣೆ ಸಂದರ್ಭ ಬೈಂದೂರಿನಿಂದ ಟಿಕೆಟ್ ಆಕಾಂಕ್ಷಿ ಎಂದು ಬಿಂಬಿತರಾಗಿದ್ದರೂ ಲೋಕಸಭಾ ಟಿಕೆಟ್ ನೀಡುವುದಾಗಿ ಪಕ್ಷ ಭರವಸೆ ನೀಡಿತ್ತು. ಈ ನಡುವೆ ಅವರು ಕಾಂಗ್ರೆಸ್ ಸೇರುತ್ತಾರೆ, ಮೂಲ ಪಕ್ಷ ಜನತಾ ಪರಿವಾರಕ್ಕೆ ಮರಳುತ್ತಾರೆ ಎಂದೆಲ್ಲ ವದಂತಿಗಳಿದ್ದವು. ಸದ್ಯ ಅವರನ್ನೇ ಬಿಜೆಪಿ ಅಭ್ಯರ್ಥಿಯನ್ನಾಗಿ ಮಾಡಬೇಕೆಂಬ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ಆರಂಭಗೊಂಡಿದ್ದರು ಕೂಡ ಪಕ್ಷದಿಂದ ಸೂಕ್ತವಾದ ಮನ್ನಣೆ ಸಿಗುವುದು ಅನುಮಾನವೇ. 2014 ರಲ್ಲಿ ಬೆಂಗಳೂರಿನಿಂದ ಬಂದು ಸಂಸದರಾಗಿ ಆಯ್ಕೆಯಾದ ಶೋಭಾ ಕರಂದ್ಲಾಜೆ ಕೂಡ ಕ್ಷೇತ್ರವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದರು ಅಲ್ಲದೆ ಕಾರ್ಯಕರ್ತರಿಗೆ ಕೂಡ ಸಿಗುತ್ತಿರಲಿಲ್ಲ ಎಂಬ ಕಾರಣಕ್ಕೆ ಸ್ಥಳೀಯ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿ ಎಂಬ ಕಾರ್ಯಕರ್ತರ ಆಗ್ರಹಕ್ಕೂ ಮನ್ನಣೆ ನೀಡಿದಂತೆ ಆಗುತ್ತದೆ ಎಂಬ ಲೆಕ್ಕಾಚಾರವನ್ನು ಹಾಕಿಕೊಂಡಿದೆ ಎನ್ನಲಾಗುತ್ತಿದೆ.

ಯಶ್ ಪಾಲ್ ಈಗಾಗಲೇ ಎರಡನ್ಮೂರು ಭಾರೀ ದೆಹಲಿಗೆ ಭೇಟಿ ನೀಡಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಇತರೆ ನಾಯಕರನ್ನು ಭೇಟಿಯಾಗಿ ಟಿಕೆಟ್ ಗೆ ಬೇಡಿಕೆ ಇಟ್ಟಿದ್ದಾರೆ. ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ಪರಿಗಣಿಸುತ್ತೇವೆ ಎಂಬ ಭರವಸೆ ಸಿಕ್ಕಿದೆ ಎಂದು ತಿಳಿದುಬಂದಿದೆ. ಆದ್ದರಿಂದ ಹಾಲಿ ಹಾಗೂ ಮಾಜಿ ಸಂಸದರ ಸಂಘರ್ಷದ ನಡುವೆ ಯಶ್ ಪಾಲ್ ಸುವರ್ಣ ಹೈಕಮಾಂಡ್ ಮನವೊಲಿಸಿ ಟಿಕೆಟ್ ದಕ್ಕಿಸಿಕೊಳ್ಳುತ್ತಾರ ಎಂಬುವುದನ್ನು ಕಾದುನೋಡಬೇಕಿದೆ.

ಲೋಕಸಭಾ ಹಾಗೂ ವಿಧಾನಸಭಾ ಎರಡೂ ಚುನಾವಣೆಗಳಲ್ಲಿ ತೀವ್ರ ಹಿನ್ನಡೆ ಅನುಭವಿಸಿರುವ ಕಾಂಗ್ರೆಸ್ನಲ್ಲಿ ಟಿಕೆಟ್ಗಾಗಿ ಪ್ರಮೋದ್ ಮಧ್ವರಾಜ್, ಡಾ. ಆರತಿ ಕೃಷ್ಣ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿದ್ದು ಈ ನಡುವೆ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಚಿಕ್ಕಮಗಳೂರು ಡಿಸಿಸಿ ಅಧ್ಯಕ್ಷ ಡಾ.ಡಿ.ಎಲ್.ವಿಜಯಕುಮಾರ್ ಹೆಸರು ಕೂಡ ಹರಿದಾಡುತ್ತಿದೆ.

ವಿಧಾನಸಭೆ ಸೋಲಿನ ಬಳಿಕ ಪ್ರಮೋದ್ ಮಧ್ವರಾಜ್ ಪಕ್ಷದ ಕಾರ್ಯಕ್ರಮಗಳಲ್ಲಿ ಚಟುವಟಿಕೆಯಿಂದಿಲ್ಲವಾದರೂ ಪಕ್ಷ ಸೂಚಿಸಿದರೆ ಅಭ್ಯರ್ಥಿಯಾಗುವೆ ಎನ್ನುತ್ತಿದ್ದಾರೆ. ಚಿಕ್ಕಮಗಳೂರಿನ ಡಾ.ಆರತಿ ಕೃಷ್ಣ ಇತ್ತೀಚೆಗೆ ಹಲವಾರು ಬಾರಿ ಉಡುಪಿಗೆ ಭೇಟಿ ನೀಡಿ ಕಾರ್ಯಕರ್ತರನ್ನು ಭೇಟಿ ಮಾಡುತ್ತಿರುವುದು, ಪಕ್ಷದದ ಚುಟುವಟಿಕೆಗಳಲ್ಲಿ ಹೆಚ್ಚಿನ ರೀತಿಯಲ್ಲಿ ತೊಡಗಿಸಿಕೊಂಡಿರುವುದು ಕಂಡಾಗ ಕಾಂಗ್ರೆಸ್ ಹೈಕಮಾಂಡ್ ಅವರಿಗೆ ಮಣೆ ಹಾಕುವುದೆಂಬ ನಿರೀಕ್ಷೆ ಕೂಡ ಇದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಕಳೆದ ಬಾರಿ ಆಯ್ಕೆಯಾದ ಶೋಭಾ ಕರಂದ್ಲಾಜೆ ಕ್ಷೇತ್ರದ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲರಾಗಿದ್ದಾರೆ. ಅವರ ಪಕ್ಷದ ಕಾರ್ಯಕರ್ತರೇ ಗೋ ಬ್ಯಾಕ್ ಶೋಭಾ ಎಂಬ ಅಭಿಯಾನ ಮಾಡಿದ್ದಾರೆ ಎಂದಿರುವ ಆರತಿ ಕೃಷ್ಣ ನಾನು ಅನಿವಾಸಿ ಭಾರತೀಯ ಉಪಾಧ್ಯಕ್ಷೆಯಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದೇನೆ. ನಾನು ಉಡುಪಿಯಲ್ಲಿ ಜನಿಸಿ ಅದಮಾರು ಮಠದಲ್ಲಿ ವಿಸ್ಯಾಭ್ಯಾಸ ಮಾಡಿದ್ದೇನೆ. ನಮ್ಮ ತಂದೆ ಮಂತ್ರಿಯಾಗಿ ಮಾಡಿದ ಕೆಲಸ ಕಾರ್ಯಗಳನ್ನು ಈಗಲೂ ಉಡುಪಿ, ಕಾರ್ಕಳ, ಮಂಗಳೂರಿನ ಜನರು ಮರೆತಿಲ್ಲ ಎನ್ನುತ್ತಾರೆ.

ಕಳೆದೆರಡು ತಿಂಗಳಿನಿಂದ ಉಡುಪಿ, ಕಾರ್ಕಳ ಭಾಗದಲ್ಲಿ ಪ್ರವಾಸ ಮಾಡುತ್ತಿರುವಾಗ ಜನರು ನಿವೇ ಲೋಕಸಭೆ ಅಭ್ಯರ್ಥಿಯಾಗಬೇಕು ಎಂದು ಒತ್ತಡ ಹೇರುತ್ತಿದ್ದಾರೆ. ಉಡುಪಿ, ಚಿಕ್ಕಮಗಳೂರು ಕ್ಷೇತ್ರದ ಜನರು ಹೊಸಬರ ಹುಡುಕಾಟದಲ್ಲಿದ್ದಾರೆ. ಸಂಸದೆಯಾಗಿ ಆಯ್ಕೆಯಾದರೆ ಅಡಕೆ, ಕಾಫಿ ಬೆಳೆಗಾರರ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ನಾನು ಈ ಬಾರಿ ಉಡುಪಿ, ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಕ್ಷೇತ್ರಕ್ಕೆ ಬಂದು ಹೋದ ಚುನಾವಣಾ ವೀಕ್ಷಕರು ನನ್ನ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಈಗಾಗಲೇ ಎಲ್ಲ ಕ್ಷೇತ್ರಗಳ ಕಾಂಗ್ರೆಸ್ ಮುಖಂಡರು, ಶಾಸಕರು, ಮಾಜಿ ಶಾಸಕರೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಒಟ್ಟಾರೆ ಎರಡೂ ಪಕ್ಷಗಳೂ ಕೂಡ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸಿ ಈ ಬಾರಿ ಗೆಲುವು ತಮ್ಮದಾಗಿಸಬೇಕೆಂಬ ಕನಸು ಹೊತ್ತಿದ್ದು ಬಿಜೆಪಿ ಅಭ್ಯರ್ಥಿಯ ಘೋಷಣೆಯ ಬಳಿಕ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಲು ನಿರ್ಧಾರ ಮಾಡಿದೆ ಆದರೆ ಬೆಂಗಳೂರು ಮೂಲಗಳ ಪ್ರಕಾರ ಮೊದಲ ಪಟ್ಟಿಯಲ್ಲಿ ಬಿಜೆಪಿ ಉಡುಪಿ-ಚಿಕಮಗಳೂರು ಕ್ಷೇತ್ರದ ಅಭ್ಯರ್ಥಿಯನ್ನು ಘೋಷಣೆ ಮಾಡುವುದು ಅನುಮಾನ ಎನ್ನಲಾಗಿದೆ. ಒಂದು ವೇಳೆ ಶೋಭಾ ಅವರನ್ನು ಮತ್ತೆ ಅಭ್ಯರ್ಥಿಯಾಗಿಸಿದ್ದಲ್ಲಿ ಕಾರ್ಯಕರ್ತರು ಬಹಿರಂಗ ಪ್ರತಿಭಟನೆಗೆ ಇಳಿಯಲಿದ್ದಾರೆ ಎಂಬ ಸಂದಿಗ್ಧತೆಗೆ ಜಿಲ್ಲೆ ಹಾಗೂ ರಾಜ್ಯದ ನಾಯಕರು ಬಿದ್ದಿದ್ದು ಕೊನೆಯ ಕ್ಷಣದಲ್ಲಿ ಯಾವ ರೀತಿಯ ಬದಲಾವಣೆ ಆಗಲಿದೆ ಎನ್ನುವುದು ಕಾದು ನೋಡಬೇಕು.


Spread the love