ಬದಲಾವಣೆಗೆ ತೆರೆದುಕೊಳ್ಳಿ: ಶೇಕ್ ಮೊಯುದ್ದೀನ್

Spread the love

ಬದಲಾವಣೆಗೆ ತೆರೆದುಕೊಳ್ಳಿ: ಶೇಕ್ ಮೊಯುದ್ದೀನ್

ಮಿಜಾರು: ಡಿಜಿಟಲ್ ಟ್ರಾನ್ಸ್‍ಫಾರ್ಮೇಷನ್ ಜಗತ್ತನ್ನು ಅತ್ಯಂತ ವೇಗಗತಿಯಲ್ಲಿ ಸಾಗಿಸುತ್ತಿರುವುದರಿಂದ ನಾವು ಬದಲಾವಣೆಯ ಜೊತೆಯೇ ಹೆಜ್ಜೆ ಹಾಕಬೇಕಿದೆ ಎಂದು ಸೌದಿ ಅರೇಬಿಯಾದ ಎಕ್ಸ್‍ಪರ್ಟೈಸ್ ಕಾಂಟ್ರಾಕ್ಟರ್ಸ್‍ನ, ವ್ಯವಸ್ಥಾಪಕ ಶೇಕ್ ಮೊಯುದ್ದೀನ್ ಅಭಿಪ್ರಾಯಪಟ್ಟರು.

ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಗಣಕ ವಿಜ್ಞಾನ ವಿಭಾಗದ ವತಿಯಿಂದ ಗುರುವಾರ ಇಲ್ಲಿ ಆಯೋಜಿಸಲಾಗಿದ್ದ ಟೆಕ್ನೋಫಿಯಾ’19 ಅಂತರಕಾಲೇಜು ತಂತ್ರಜ್ಞಾನ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು ‘ಮೊದಲುಜ್ಞಾನ-ಹಣ-ಅಂತಸ್ತು ಇವುಗಳನ್ನು ಸಾಧನೆಯ ಸೂಚಕಗಳೆಂದು ಪರಿಗಣಿಸಲಾಗುತ್ತಿತ್ತು. ಆದರೆ ಇಂದಿನ ಯುಗದಲ್ಲಿ ಇವುಗಳ ಜೊತೆ ಡಿಜಿಟಲ್‍ತಂತ್ರಜ್ಞಾನದ ಅರಿವು ಹೊಂದಿರುವುದೂ ಅಷ್ಟೇ ಮುಖ್ಯವಾಗಿದೆ. ಇಲ್ಲಿರುವ ಎಷ್ಟೋ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್ ನಂತರ ಏನು ಎನ್ನುವ ಪ್ರಶ್ನೆ ಇರುತ್ತದೆ. ಅಂಥವರು ಸಿಕ್ಕ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಾ ಉತ್ತರ ಕಂಡುಕೊಳ್ಳಬೇಕು’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ ‘ಶೇಕ್ ಮೊಯುದ್ದೀನ್ ಅಂಥವರ ಪರಿಶ್ರಮದ ಬದುಕನ್ನು ವಿದ್ಯಾರ್ಥಿಗಳು ಮಾದರಿಯಾಗಿ ತೆಗೆದುಕೊಳ್ಳಬೇಕು. ನೀವು ಕಲಿಯುತ್ತಿರುವ ವಿಷಯದಲ್ಲಿ ಆಸಕ್ತಿಯಿಟ್ಟು ಆ ಕುರಿತಂತೆಯೇ ಕೆಲಸಗಳನ್ನು ಆರಂಭಿಸಿ. ಆಗ ನೀವು ಕಲಿತ ವಿದ್ಯೆಗೆ ನಿಜವಾದಅರ್ಥ ಸಿಗುತ್ತದೆ’ ಎಂದರು.

ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಗಣಕವಿಜ್ಞಾನ ಸಂಬಂಧಿತ ಡಿ-ಕೋಡಿಂಗ್, ರಸಪ್ರಶ್ನೆ, ಗೇಮಿಂಗ್, ವೆಬ್‍ಡಿಸೈನಿಂಗ್ ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫರ್ನಾಂಡಿಸ್, ಗಣಕ ವಿಭಾಗದ ಮುಖ್ಯಸ್ಥ ಮಂಜುನಾಥ್ ಕೊಠಾರಿ, ಹೇಮಂತ್, ವಿದ್ಯಾರ್ಥಿ ಸಂಚಾಲಕರಾದ ಭಾರ್ಗವಿ ಹಾಗೂ ಗೌತಮ್ ಉಪಸ್ಥಿತರಿದ್ದರು.


Spread the love