
ʼನಮ್ಮ ನೋವಿಗೆ ಕಾರಣರಾದವರನ್ನು ತಾಯಿಯೇ ನೋಡಿಕೊಳ್ಳಲಿʼ: ಕೋಟ- ಅಮೃತೇಶ್ವರಿ ದೇವಿಗೆ ಮೊರೆ ಹೋದ ಕೊರಗ ಸಮುದಾಯ
ಕುಂದಾಪುರ: ಕೋಟತಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯ ಕೊರಗ ಸಮುದಾಯದ ಮೇಲಿನ ಪೊಲೀಸ್ ದೌರ್ಜನ್ಯದ ವಿರುದ್ಧ ಕೊರಗಕೇರಿ ನಿವಾಸಿಗಳು ಕೋಟದ ಅಮೃತೇಶ್ವರಿ ದೇವಿಗೆ ಮೊರೆ ಇಟ್ಟ ಘಟನೆ ಶನಿವಾರ ನಡೆಯಿತು.
ಗೃಹಸಚಿವರ ಭೇಟಿಯ ಬಳಿಕ ಸಭೆ ನಡೆಸಿದ ಕೊರಗರು ಹಿರಿಯರ ಮಾರ್ಗದರ್ಶದಂತೆ ಕೋಟ ಅಮೃತೇಶ್ವರಿ ದೇವಳಕ್ಕೆ ಭೇಟಿ ನೀಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ದೇವಳದ ಹೊರಭಾಗದಲ್ಲಿ ಕುಟುಂಬ ಸಹಿತ ತೆಂಗಿನ ಕಾಯಿ ಒಡೆದು ತಮ್ಮ ನೋವಿಗೆ ಕಾರಣೀಕರ್ತರಾದ ಯಾರೇ ಇರಬಹುದು ಅಂತವರ ವಿರುದ್ಧ ತಾಯಿ ನೋಡಿಕೊಳ್ಳಲಿ. ನಾವು ಅನ್ಯಾಯ ಮಾಡಿ ಬದುಕಿದವರಲ್ಲ ನಮ್ಮ ಕಾರ್ಯಕ್ರಮ ವಸ್ತುನಿಷ್ಠೆಯಾಗಿ ನಡೆಯುವ ಸಂದರ್ಭದಲ್ಲಿ ನಮ್ಮ ಮೇಲೆ ಏಕಾಏಕಿ ಹಲ್ಲೆ ಮಾಡಿ ಇಡೀ ಕುಟುಂಬ ಭಯದಲ್ಲಿ ಬದುಕುವಂತೆ ಮಾಡಿದ್ದಾರೆ. ನಮ್ಮನ್ನು ಕಾಯುವ ದೇವರ ಮೊರೆ ಹೋಗಲು ಹಿರಿಯರು ಸೂಚಿಸಿದ್ದಾರೆ. ಯಾರನ್ನಾದರೂ ಕಣ್ಣು ಕಟ್ಟಬಹುದು. ಆದರೆ ದೇವಿಯ ಕಣ್ಣು ಕಟ್ಡಲು ಸಾಧ್ಯವಿಲ್ಲ. ಅಂತೆಯೇ ನೊಂದ ನಮ್ಮ ಸಮಯದಾಯಕ್ಕೆ ಆ ತಾಯಿ ನ್ಯಾಯ ಒದಗಿಸುತ್ತಾಳೆ ನಂಬಿಕೆ ಇಟ್ಟಿದ್ದೇವೆ ಇಂದಿನಿದಲೇ ನೆಮ್ಮದಿಯ ಜೀವನ ಸಾಗಿಸಲು ತಾಯಿ ಅನುಗ್ರಹಿಸಿದ್ದಾಳೆ ಎಂದು ಕೊರಗ ಸಮಾಜದ ಮುಖಂಡ ಗಣೇಶ್ ಬಾರ್ಕೂರು ಹೇಳಿದರು.
ದೇವಳದ ಭೇಟಿಯಲ್ಲಿ ಸ್ಥಳೀಯರಾದ ದಿನೇಶ ಗಾಣಿಗ, ಜೀವನ್ ಮಿತ್ರ ಆಂಬ್ಯುಲೆನ್ಸ್ ಮಾಲಿಕ ನಾಗರಾಜ್ ಪುತ್ರನ್, ನಾಗೇಂದ್ರ ಪುತ್ರನ್,ಕೃಷ್ಣ ಪುತ್ರನ್, ರಾಮ ತೋಳಾರ್, ಭರತ್ ಗಾಣಿಗ ಮತ್ತಿತರರು ಉಪಸ್ಥಿತರಿದ್ದರು.