ಅಂಚೆ ಇಲಾಖೆ, ಸ್ಕೂಲ್ ಆಫ್ ಸೋಶಲ್ ವರ್ಕ್, ರೋಶನಿ ನಿಲಯ ಒಡಂಬಡಿಕೆ 

Spread the love

ಅಂಚೆ ಇಲಾಖೆ, ಸ್ಕೂಲ್ ಆಫ್ ಸೋಶಲ್ ವರ್ಕ್, ರೋಶನಿ ನಿಲಯ ಒಡಂಬಡಿಕೆ 

ಭಾರತೀಯ ಅಂಚೆ ಇಲಾಖೆ, ಮಂಗಳೂರು ವಿಭಾಗವು ಮಂಗಳೂರಿನ ಸ್ಕೂಲ್ ಆಫ್ ಸೋಶಲ್ ವರ್ಕ್, ರೋಶನಿ ನಿಲಯದೊಂದಿಗೆ ಒಡಂಬಡಿಕೆ ಮಾಡಿ ಕೊಳ್ಳುವ ಮೂಲಕ ಸ್ಪೀಡ್ ಪೋಸ್ಟ್ ಮೂಲಕ ಶೈಕ್ಷಣಿಕ ದಾಖಲೆಗಳು, ಅಂಕಪಟ್ಟಿಗಳು, ಡಿಗ್ರಿ ಸರ್ಟಿಫಿಕೇಟ್ ಗಳನ್ನು ವಿದ್ಯಾರ್ಥಿಗಳ ಮನೆ ಬಾಗಿಲಿಗೆ ತಲುಪಿಸುವ ವಿಶಿಷ್ಟ ಸೇವೆ-ಪ್ರಾಜೆಕ್ಟ್ ಮಂಗಳ ಯೋಜನೆಯನ್ನು ಮಂಗಳೂರಿನ ವೆಲೆನ್ಸಿಯಾದ ಸ್ಕೂಲ್ ಆಫ್ ಸೋಶಲ್ ವರ್ಕ್, ರೋಶನಿ ನಿಲಯಕ್ಕೂ ವಿಸ್ತರಿಸಿತು. ದಿನಾಂಕ 13-10-2022 ರಂದು ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜು(KPT) ಮಂಗಳೂರಿನಲ್ಲಿ ಈ ಸೇವೆಗೆ ಕರ್ನಾಟಕದಲ್ಲೇ ಪ್ರಪ್ರಥಮ ಬಾರಿಗೆ ಚಾಲನೆ ನೀಡಲಾಗಿದ್ದು, ತದ ನಂತರ ದಿನಾಂಕ 02-03-2023 ರಂದು ಈ ಸೇವೆಯನ್ನು ದೇರಳಕಟ್ಟೆಯ ಯೆನಪೋಯಾ ಡೀಮ್ಡ್ ಯುನಿವರ್ಸಿಟಿಯ ಅಧೀನದ ಎಲ್ಲಾ 11 ಕಾಲೇಜುಗಳಿಗೆ ವಿಸ್ತರಿಸಿತು. ಇಂದು ಈ ಉಪಕ್ರಮದೊಂದಿಗೆ, ಮಂಗಳೂರಿನಲ್ಲಿ ಶೈಕ್ಷಣಿಕ ದಾಖಲೆಗಳು, ಅಂಕಪಟ್ಟಿಗಳು, ಡಿಗ್ರಿ/ಡಿಪ್ಲೋಮಾ ಸರ್ಟಿಫಿಕೇಟ್ ಗಳನ್ನು ಸ್ಫೀಡ್ ಪೋಸ್ಟ್ ಸೇವೆಯ ಮೂಲಕ ವಿದ್ಯಾರ್ಥಿಗಳ ಮನೆ ಬಾಗಿಲಿಗೆ ತಲುಪಿಸುವ ಸೇವೆಗೆ ಇನ್ನೊಂದು ಮೈಲಿಗಲ್ಲನ್ನು ಇಡಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸ್ಕೂಲ್ ಆಫ್ ಸೋಶಲ್ ವರ್ಕ್ ನ ರಿಜಿಸ್ಟ್ರಾರ್ಗಳಾದ ಪ್ರೊ.ವಿನೀತಾ.ಕೆ ಹಾಗೂ ಭಾರತೀಯ ಅಂಚೆ ಇಲಾಖೆಯ ಹಿರಿಯ ಅಂಚೆ ಅಧೀಕ್ಷಕರಾದ ಶ್ರೀ. ಶ್ರೀಹರ್ಷರವರು ‘ಪ್ರಾಜೆಕ್ಟ್ ಮಂಗಳ’ ಲೋಗೊ ವಿನ ಅನಾವರಣಗೊಳಿಸಿದರು ಹಾಗೂ ಒಡಂಬಡಿಕೆ ಪತ್ರವನ್ನು ಹಸ್ತಾಂತರಿಸಿದರು

ಇನ್ಮುಂದೆ ಸ್ಕೂಲ್ ಆಫ್ ಸೋಶಲ್ ವರ್ಕ್, ರೋಶನಿ ನಿಲಯದ ವಿದ್ಯಾರ್ಥಿಗಳ ಅಂರ್ತಿಮ ವರ್ಷದ ಅಂಕಪಟ್ಟಿಗಳು, ಡಿಗ್ರಿ ಸರ್ಟಿಫಿಕೇಟ್ ಗಳು ಸ್ಪೀಡ್ ಪೋಸ್ಟ್ ಮೂಲಕ ಮನೆಬಾಗಿಲಿಗೆ ತಲುಪಲಿದೆ.

ಅಂಚೆ ಇಲಾಖೆ ಈಗಾಗಲೇ ವಿವಿಧ ಸರ್ಕಾರಿ ದಾಖಲೆಗಳು, ಆಧಾರ್ ಕಾರ್ಡ್, ಪಾಸ್ ಪೋರ್ಟ್, ಪಾನ್ ಕಾರ್ಡ್, ವೋಟರ್ ಐಡಿ, ಜನನ/ಮರಣ ಪ್ರಮಾಣ ಪತ್ರ, ಡೆಬಿಟ್ ಕಾರ್ಡ್, ಎಟಿಎಂ ಕಾರ್ಡ್, ಚೆಕ್ ಬುಕ್ ಮುಂತಾದ ಲಕ್ಷಾಂತರ ದಾಖಲೆಗಳನ್ನು ಹಲವು ವರ್ಷಗಳಿಂದ ಪ್ರತಿದಿನ ಜನರ ಮನೆಬಾಗಿಲಿಗೆ ತಲುಪಿಸುತ್ತಿದ್ದು, ಈಗ ಎಲ್ಲಾ ಬಗೆಯ ಶೈಕ್ಷಣಿಕ ದಾಖಲೆಗಳನ್ನು ಸ್ಪೀಡ್ ಪೋಸ್ಟ್ ಮೂಲಕ ಮನೆಬಾಗಿಲಿಗೆ ತಲುಪಿಸಲು ಮುಂದಾಗಿದೆ.

ಪ್ರಸ್ತುತ ಪಿಯುಸಿ ಸೇರಿದಂತೆ, ಪದವಿ, ಉನ್ನತ ಪದವಿಗಳ ಅಂತಿಮ ಸೆಮಿಸ್ಟರ್ ಹಾಗೂ ಪದವಿಯ /ಉನ್ನತ ಪದವಿಯ ಸರ್ಟಿಫಿಕೇಟ್ ಗಳು ವಿದ್ಯಾರ್ಥಿಗಳು ಕಾಲೇಜು ಮುಗಿಸಿದ ಕೆಲತಿಂಗಳುಗಳ ನಂತರ ಮುದ್ರಣಗೊಂಡು ಕಾಲೇಜುಗಳಿಗೆ ರವಾನಿಸಲ್ಪಡುವುದರಿಂದ ವಿದ್ಯಾರ್ಥಿಗಳು ದೂರದ ಸ್ಥಳದಿಂದ ಇದನ್ನು ಪಡೆದುಕೊಳ್ಳುವುದಕ್ಕಾಗಿಯೇ ಕಾಲೇಜು, ಕೆಲಸಕ್ಕೆ ರಜೆ ಹಾಕಿ ಬರಬೇಕಾದ ಅನಿವಾರ್ಯತೆಯಿದೆ. ಆದ್ದರಿಂದ ಈ ವ್ಯವಸ್ಥೆಯಲ್ಲಿ ದೂರದ ಸ್ಥಳಗಳಿಂದ ಬರುವ ವಿದ್ಯಾರ್ಥಿಗಳು ಪ್ರಮಾಣ ಪತ್ರಗಳನ್ನು ಪಡೆಯಲು ಸಮಯ ಹಾಗೂ ಹೆಚ್ಚಿನ ಹಣವನ್ನು ವ್ಯಯಿಸಬೇಕಾಗುತ್ತದೆ.

ವಿದ್ಯಾರ್ಥಿಗಳ ಈ ಅನಾನುಕೂಲತೆಯನ್ನು ನಿವಾರಿಸಲು, ಅಂಚೆ ಇಲಾಖೆಯ ಈ ಹೊಸ ಯೋಜನೆ ಸಹಕಾರಿಯಾಗಲಿದೆ.

ಈ ಸೇವೆಯ ವಿಶೇಷತೆಗಳು :
• ಈ ಪ್ರಮಾಣ ಪತ್ರ/ಅಂಕ ಪಟ್ಟಿಗಳನ್ನು ಭಾರತದ ಯಾವುದೇ ಊರಿಗೂ ಸ್ಫೀಡ್ ಪೋಸ್ಟ್ ಸೇವೆಯ ಮೂಲಕ ತಲುಪಿಸಬಹುದು.
• ಬಟವಾಡೆಯಾಗಬೇಕಾಗಿರುವ ವಿಳಾಸವು ಕಾಲೇಜಿನ ಅರ್ಜಿಯಲ್ಲಿ ನಮೂದಿಸಲಾದ ವಿಳಾಸಕ್ಕಿಂತ ಬೇರೆ ಕೂಡಾ ಆಗಿರಬಹುದು
• ವಿದ್ಯಾರ್ಥಿಗಳು ಪ್ರಮಾಣ ಪತ್ರವನ್ನು ಮನೆಯ ವಿಳಾಸದಲ್ಲಿ ಅಥವಾ ಕಛೇರಿಯ ವಿಳಾಸದಲ್ಲೂ ಪಡೆಯಬಹುದು.
• ವಿದ್ಯಾರ್ಥಿಗಳ ಅನುಪಸ್ಥಿತಿಯಲ್ಲಿ ಅವರ ಕುಟುಂಬದ ಯಾವುದೇ ಸದಸ್ಯರು ಬಟವಾಡೆ ಪಡೆದುಕೊಳ್ಳಬಹುದು.
• ಈ ಸರ್ಟಿಫಿಕೇಟ್/ಅಂಕಪಟ್ಟಿಯನ್ನು ಸ್ಪೀಡ್ ಪೋಸ್ಟ್ ಮೂಲಕ 2 ರಿಂದ 5 ದಿನಗಳ ಒಳಗಾಗಿ ವಿದ್ಯಾರ್ಥಿಗಳ ಮನೆ ಬಾಗಿಲಿಗೆ ತಲುಪಿಸಲಾಗುವುದು.
• ರವಾನೆಯಿಂದ ಬಟವಾಡೆವರೆಗೆ ವಿವಿಧ ಹಂತಗಳಲ್ಲಿ ವಿದ್ಯಾರ್ಥಿಗಳಿಗೆ SMS ಮೂಲಕ ಮಾಹಿತಿ ನೀಡಲಾಗುವುದು.
• ಪ್ರಮಾಣ ಪತ್ರವನ್ನು ಒಳಗೊಂಡ ಸ್ಪೀಡ್ ಪೋಸ್ಟ್ ಬಟವಾಡೆಯ ಯಾವ ಹಂತದಲ್ಲಿದೆ ಎಂದು www.indiapost.gov.in ನಲ್ಲಿ ಟ್ರ್ಯಾಕ್ ಮಾಡಿ ನೋಡಬಹುದು.

ಅಂಚೆ ಇಲಾಖೆಯು ಈಗಾಗಲೇ ಮಂಗಳೂರಿನ ಇತರ ಎಲ್ಲಾ ಪಿಯುಸಿ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಈ ಬಗೆಗೆ ಪ್ರಸ್ತಾವನೆ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ಈ ಸಂಸ್ಥೆಗಳಿಂದ ಧನಾತ್ಮಕ ಉತ್ತರ ಬರುವ ನಿರೀಕ್ಷೆಯಿದೆ. ಮಂಗಳೂರಿನಲ್ಲಿ ಶಿಕ್ಷಣ ಪಡೆದು ಮರಳುವ ಎಲ್ಲಾ ವಿದ್ಯಾರ್ಥಿಗಳಿಗೂ ಈ ಸೇವೆ ವರದಾನವಾಗಲಿದೆ.

ಸ್ಕೂಲ್ ಆಫ್ ಸೋಶಲ್ ವರ್ಕ್, ರೋಶನಿ ನಿಲಯದ ಪ್ರಾಂಶುಪಾಲರಾದ ಡಾ. ಸೊಫಿಯಾ ಫೆರ್ನಾಂಡಿಸ್, ಮಂಗಳೂರಿನ ಸಹಾಯಕ ಅಂಚೆ ಅಧೀಕ್ಷಕರಾದ ಶ್ರೀ ಶ್ರೀನಾಥ್ ಎನ್.ಬಿ ಹಾಗೂ ಮಂಗಳೂರಿನ ಅಂಚೆ ವಿಭಾಗದ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ರಾದ ಶ್ರೀ. ಸುಭಾಷ್ ಪಿ ಸಾಲ್ಯಾನ್ ರವರು ಉಪಸ್ತಿತರಿದ್ದರು.


Spread the love

Leave a Reply

Please enter your comment!
Please enter your name here