ಅಂದು ಅಂಬಾರಿಯಲ್ಲಿ ರಾಜರು.. ಇಂದು ಚಾಮುಂಡೇಶ್ವರಿ!

Spread the love

ಅಂದು ಅಂಬಾರಿಯಲ್ಲಿ ರಾಜರು.. ಇಂದು ಚಾಮುಂಡೇಶ್ವರಿ!

ಮೈಸೂರು: ಮೈಸೂರು ದಸರಾದ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿಯನ್ನು ಪ್ರತಿಷ್ಠಾಪಿಸಿ ಮೆರವಣಿಗೆಯಲ್ಲಿ ತೆರಳಲಾಗುತ್ತದೆ. ಹಿಂದೆ ರಾಜರು ಅಂಬಾರಿಯಲ್ಲಿ ಕುಳಿತು ತೆರಳುತ್ತಿದ್ದರು. ಈಗ ಚಾಮುಂಡಿಬೆಟ್ಟದಲ್ಲಿ ಮುಂಜಾನೆ ಪೂಜೆ ಸಲ್ಲಿಸಿ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ಅರಮನೆಗೆ ತರಲಾಗುತ್ತದೆ. ಬಳಿಕ ವಿಧಿವಿಧಾನಗಳನ್ನು ನೆರವೇರಿಸಿ ಅಂಬಾರಿಯಲ್ಲಿ ಪ್ರತಿಷ್ಠಾಪಿಸಿಲಾಗುತ್ತದೆ.

ನಿಗದಿತ ಮುಹೂರ್ತದಲ್ಲಿ ಅಂದರೆ ಸಂಜೆ 5.07 ರಿಂದ 5.18 ರೊಳಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರು ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಅಂಬಾರಿ ಹೊತ್ತ ಅಭಿಮನ್ಯು ಅರಮನೆಯಿಂದ ಬನ್ನಿಮಂಟಪಕ್ಕೆ ತೆರಳಲಿದ್ದಾನೆ. ಮೈಸೂರು ದಸರಾ ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಆರಂಭವಾಗುತ್ತದೆ.

ಇನ್ನು ಮೈಸೂರು ಅರಸರಿಗೆ ಚಾಮುಂಡೇಶ್ವರಿ ಕುಲದೇವತೆಯಾದಳು ಎಂಬುದನ್ನು ನೋಡಿದ್ದೇ ಆದರೆ, ’ಮಹಿಷನ ಊರು’ ಕಾಲಗರ್ಭದಲ್ಲಿ ಮೈಸೂರಾಯಿತು ಎನ್ನಲಾಗುತ್ತಿದೆ. ಈ ಮಹಿಷಾಸುರ ಎಂಬ ಅಸುರನನ್ನು ಚಾಮುಂಡೇಶ್ವರಿ ಅವತಾರ ಎತ್ತಿ ಸಂಹರಿಸಿದಳು ಎಂಬುದು ಪುರಾಣದಲ್ಲಿ ಬರುವ ಕಥೆ.

ಮೈಸೂರು ರಾಜಪರಂಪರೆಯನ್ನು ನಾವು ನೋಡಿದ್ದೇ ಆದರೆ 1399ರಲ್ಲಿ ಮೈಸೂರು ಅರಸರ ಮೂಲ ಪುರುಷರು ಈ ಇತಿಹಾಸವನ್ನು ಮುಂದುವರೆಸಿದವರಾಗಿ ತಿಳಿಯುತ್ತದೆ. ರಾಜವಂಶದ ಯದುರಾಯ, ಕೃಷ್ಣರಾಯರು ಸ್ಥಳೀಯನಾಗಿದ್ದ, ಹದಿನಾಡಿನ ಪಾಳೆಯಗಾರನಾಗಿದ್ದ ಮಹಾಶೂರ ಕಾರುಗಳ್ಳಿ ಮಾರನಾಯಕನನ್ನು ಕೊಂದು ಹದಿನಾಡಿನ ಅರಸರಾಗುತ್ತಾರೆ. ದಳಪತಿ ಮಾರನಾಯಕ ಕೆಳ ಜಾತಿಯಾಗಿದ್ದು, ಹದಿನಾಡಿನ ಅರಸರ ಮಗಳನ್ನು ಕೇಳಿದನೆಂಬ ವಿಚಾರ ಹೊಸತೊಂದು ಸಾಮ್ರಾಜ್ಯಕ್ಕೆ ಕಾರಣವಾಗುತ್ತದೆ. ಇಂತಹ ಗೆಲುವು ವಿಜಯದಶಮಿ ತಳಕು ಹಾಕಿಕೊಳ್ಳುತ್ತದೆ.

ಹದಿನಾಡಿನಿಂದ ಯದುವಂಶ ಆರಂಭವಾಗುತ್ತದೆ. ’ಗಂಡಭೇರುಂಡ’ ಪಕ್ಷಿ ಲಾಂಛನವಾಗುತ್ತದೆ. 25 ಒಡೆಯರ್ 1399ರಿಂದ 1970ರವರೆಗೆ ಮೈಸೂರು ಸಾಮ್ರಾಜ್ಯ ಕಟ್ಟಿ ಆಳುತ್ತಾರೆ. ಹಳೆ ಮೈಸೂರು ಪ್ರಾಂತ್ಯವು ಸ್ವಾತಂತ್ರ್ಯಾ ನಂತರ ದೇಶದ ಗಣರಾಜ್ಯದಲ್ಲಿ ವಿಲೀನವಾಗುತ್ತದೆ. ಆ ನಂತರ ಕರ್ನಾಟಕದ ಉದಯವೂ ಆಗುತ್ತದೆ. ಇವೆಲ್ಲಾ ಇತಿಹಾಸದ ಕಾಲಚಕ್ರದೊಳಗೆ ಸಾಗಿದಂತೆ ’ಮೈಸೂರು ದಸರಾ’ ಮಾತ್ರ ಜನರ ನಡೆ ನುಡಿಯ ಬದುಕಾಗಿ ಇತಿಹಾಸದ ನಾಲ್ಕು ಶತಮಾನದ ಕಾಲಘಟ್ಟದಲ್ಲಿ ಮಗ್ಗಲು ಬದಲಿಸುತ್ತಾ ಸಾಗುತ್ತಿದೆ.

ಸರಿಸುಮಾರು ನಾಲ್ಕು ಶತಮಾನಗಳಿಂದ ಅದೆಷ್ಟು ದಸರಾಗಳು ಬಂದು ಹೋಗಿದೆಯೋ? ಒಂದಷ್ಟು ಬದಲಾವಣೆಗಳೊಂದಿಗೆ ಮೈಸೂರು ದಸರಾ ಈಗಲೂ ತನ್ನ ವೈಭವವನ್ನು ಮೆರೆಯುತ್ತಲೇ ಸಾಗುತ್ತಿದೆ ಎಂಬುದೇ ಸಂತಸದ ವಿಚಾರವಾಗಿದೆ. ಇವತ್ತಿಗೂ ಮೈಸೂರು ಎಂದರೆ ಚಾಮುಂಡಿಬೆಟ್ಟ ನಮ್ಮ ಕಣ್ಣುಮುಂದೆ ಬಂದು ನಿಲ್ಲುತ್ತದೆ. ಅದರಾಚೆಗೆ ಮಹಿಷಾಸುರನೂ ಕಾಣಿಸುತ್ತಾನೆ. ಇವತ್ತೇನಾದರೂ ನಾವು ಚಾಮುಂಡಿಬೆಟ್ಟವನ್ನು ತದೇಕ ಚಿತ್ತದಿಂದ ವೀಕ್ಷಿಸಿದರೆ ಹಚ್ಚ ಹಸುರು, ಹೆಬ್ಬಂಡೆಗಳ ಬೃಹತ್ ಬೆಟ್ಟ ಕಾಣಿಸುತ್ತದೆ. ಅದನ್ನೇ ಗಮನಿಸಿ ನೋಡಿ ಮಹಿಷಾಸುರ ಮಲಗಿದಂತೆ ಒಮ್ಮೆ ಗೋಚರಿಸಿದರೆ ಅಚ್ಚರಿ ಪಡಬೇಕಾಗಿಲ್ಲ.


Spread the love