ಅಂಬಾಗಿಲು- ಮಣಿಪಾಲ ಪೆರಂಪಳ್ಳಿ ರಸ್ತೆ ₹59.04 ಲಕ್ಷ ವೆಚ್ಚದಲ್ಲಿ ಕಾಂಕ್ರಿಟೀಕರಣ ಕಾಮಗಾರಿಗೆ ಟೆಂಡರ್ : ಯಶ್ಪಾಲ್ ಸುವರ್ಣ
ಉಡುಪಿ: ಅಂಬಾಗಿಲು ಮಣಿಪಾಲ ಮುಖ್ಯ ರಸ್ತೆಯ ಪೆರಂಪಳ್ಳಿ ಬಳಿ ಬಾಕಿ ಕಾಮಗಾರಿ ಪ್ರದೇಶದ ಕಾಂಕ್ರಿಟೀಕರಣಕ್ಕೆ 59.04 ಲಕ್ಷ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ಮೂಲಕ ಟೆಂಡರ್ ಕರೆಯಲಾಗಿದೆ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ತಿಳಿಸಿದ್ದಾರೆ.
ತಾಂತ್ರಿಕ ಕಾರಣಗಳಿಂದ ರಸ್ತೆ ಕಾಮಗಾರಿ 240 ಮೀಟರ್ ರಸ್ತೆ ಪೂರ್ಣಗೊಳ್ಳದೆ ಹದಗೆಟ್ಟು ಸಾರ್ವಜನಿಕರ ಸುಗಮ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ವಿಶೇಷ ಮುತುವರ್ಜಿವಹಿಸಿ ಲೋಕೋಪಯೋಗಿ ಇಲಾಖೆ ಮೂಲಕ ವಿಶೇಷ ಅನುದಾನ ಮೀಸಲಿರಿಸಿ ಕಾಮಗಾರಿ ನಡೆಸಲು ಈಗಾಗಲೇ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು , ನವೆಂಬರ್ 12 ಟೆಂಡರ್ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ.
ನವೆಂಬರ್ ತಿಂಗಳ ಮಧ್ಯ ಭಾಗದಲ್ಲಿ ಕಾಮಗಾರಿ ಪ್ರಾರಂಭಗೊಳ್ಳಲಿದ್ದು, ರಸ್ತೆ ಕಾಮಗಾರಿ ಸಂದರ್ಬದಲ್ಲಿ ರಸ್ತೆ ಸಂಚಾರ ನಿರ್ಬಂಧಿಸಿ, ಬದಲಿ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುವುದು.
ಬಹು ವರ್ಷಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಅತಿ ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಶಾಸಕ ಯಶ್ಪಾಲ್ ಸುವರ್ಣ ತಿಳಿಸಿದ್ದಾರೆ.
