
ಅಕ್ರಮ ಕಸಾಯಿ ಖಾನೆಯ ಮೇಲೆ ದಾಳಿಗೆ ತೆರಳಿದ್ದ ಕಾಪು ಪೊಲೀಸರ ಕರ್ತವ್ಯಕ್ಕೆ ಅಡ್ಡಿ – ಪ್ರಕರಣ ದಾಖಲು
ಉಡುಪಿ: ಅಕ್ರಮ ಕಸಾಯಿಖಾನೆಯ ಮೇಲೆ ದಾಳಿ ನಡೆಸಲು ತೆರಳಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಮೂಳೂರು ಎಂಬಲ್ಲಿ ಶುಕ್ರವಾರ ನಡೆದಿದ್ದು ಈ ಕುರಿತು ಪ್ರಕರಣ ದಾಖಲಾಗಿದೆ.
ಶುಕ್ರವಾರ ಬೆಳಿಗ್ಗೆ ಕಾಪು ಪೊಲೀಸ್ ಠಾಣೆಯ ಉಪನೀರಿಕ್ಷಕರಾದ ರಾಘವೇಂದ್ರ ಸಿ ಇವರಿಗೆ ಮೂಳೂರು ಗ್ರಾಮದ ಸುನ್ನಿ ಸೆಂಟರ್ ಹಿಂಬದಿ ಅಬ್ಬು ಮಹಮ್ಮದ್ ಎಂಬುವವರ ಮನೆಯ ಹಿಂದಿನ ಕೊಟ್ಟಿಗೆಯಲ್ಲಿ ದನವನ್ನು ಕಡಿದು ಮಾಂಸ ಮಾಡಿ ಮಾರಾಟ ಮಾಡುತ್ತಿದ್ದಾರೆ ಎಂದು ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿದ್ದು ಈ ವೇಳೆ ಇಸ್ಮಾಯಿಲ್ ಮತ್ತು ಅಬ್ಬು ಮಹಮ್ಮದ್ ಸ್ಥಳದಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ.
ಇದೇ ವೇಳೆ ಕೃತ್ಯವನ್ನು ತಡೆಯಲು ದಾಳಿ ನಡೆಸುತ್ತಿರುವಾಗ ಅಲ್ಲಿಗೆ ಬಂದ ಮಹಿಳೆಯರಾದ ಐಸಮ್ಮ, ರೆಯಾನ, ಜೋಹ್ರಾ ಮತ್ತು ಇತರರು ಏಕಾಏಕಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಅವಾಚ್ಯ ಶಬ್ದಗಳಿಂದ ಬೈದು ದೂಡಿ, ಸಿಬ್ಬಂದಿಯವರಿಗೆ ಕೈಯಿಂದ ಹಲ್ಲೆ ಮಾಡಿ ದೂಡಿದ್ದಲ್ಲದೇ, ನೊಗದಿಂದ ಹಲ್ಲೆ ಮಾಡಲು ಬಂದಿರುತ್ತಾರೆ. ಅಲ್ಲದೆ ವೈ ಬಿ ಸಿ ಭಾವ ಎಂಬುವವವನು ಗೇಟ್ ನ್ನು ಹಾಕಿ ಅವರನ್ನು ಹೊರಗಡೆ ಬಿಡಬೇಡಿ ಎಂದು ಹೇಳಿ ನಮ್ಮನ್ನು ತಡೆಯಲು ಬಂದಿರುತ್ತಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ದಾಳಿಯ ವೇಳೆ ಸ್ಥಳದಿಂದ ರೂ 5000 ಮೌಲ್ಯದ ಒಂದು ಗಂಡು ಕರು, ರೂ 2000 ಮೌಲ್ಯದ ಸುಮಾರು 10 ಕೆಜಿ ಮಾಂಸ, ಮಾಂಸ ಹಾಕಲು ಉಪಯೋಗಿಸಿದ ಅಲ್ಯುಮೀನಿಯಂ ಪಾತ್ರೆ, ಫೈಬರ್ ಟಬ್, ಕಬ್ಬಿಣದ ತೂಕದ ಮಾಪಕ, ರೂ 2 ಲಕ್ಷ ಮೌಲ್ಯದ ಪಿಕ್ ಅಪ್ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 180/2021 ಕಲಂ: 379, 341, 353, 332, 504, ಜೊತೆಗೆ 149 ಐ.ಪಿ.ಸಿ ಕಲಂ: 5 4 7 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಆದ್ಯಾದೇಶ 2020 ರಂತೆ ಪ್ರಕರಣ ದಾಖಲಾಗಿದೆ