ಅಕ್ರಮ ನಿರ್ಮಾಣದ ನೆಪದಲ್ಲಿ ಬಡ ಮೀನುಗಾರರ ಶೆಡ್ ಉರುಳಿಸಿದ ಉಡುಪಿ ನಗರ ಸಭೆ – ಸ್ಥಳೀಯರ ಆಕ್ರೋಶ

Spread the love

ಅಕ್ರಮ ನಿರ್ಮಾಣದ ನೆಪದಲ್ಲಿ ಬಡ ಮೀನುಗಾರರ ಶೆಡ್ ಉರುಳಿಸಿದ ಉಡುಪಿ ನಗರ ಸಭೆ – ಸ್ಥಳೀಯರ ಆಕ್ರೋಶ

ಉಡುಪಿ: ಬಡ ಮೀನುಗಾರ ಮಹಿಳೆಯರಿಗೆ, ಮಳೆಯಿಂದ ರಕ್ಷಣೆ ನೀಡುತ್ತಿದ್ದ ತಾತ್ಕಾಲಿಕ ಶೆಡ್ ನ್ನು ನಿರ್ಮಾಣ ಹಂತದಲ್ಲಿರುವಾಗಲೇ ಉಡುಪಿ ನಗರಸಭೆ ಕೆಡವಿ ಹಾಕಿದೆ. ನಗರಾಡಳಿತದ ಈ ಅಮಾನವೀಯ ನಡೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಡುಪಿ ಜಿಲ್ಲೆಗೆ ಜನರನ್ನು ಸ್ವಾಗತಿಸುವ ಕಿನ್ನಿಮೂಲ್ಕಿ ಬಳಿಯ ಸುಂದರ ಸ್ವಾಗತ ಗೋಪುರ ಪಕ್ಕದಲ್ಲೇ, ಕಳೆದ ನಾಲ್ಕು ದಶಕಗಳಿಂದ ಬಡ ಮೀನುಗಾರ ಮಹಿಳೆಯರು ಮೀನು ಮಾರಾಟ ನಡೆಸುತ್ತಿದ್ದಾರೆ. ಮೀನಿನ ದರ ಒಂದು ರೂಪಾಯಿ ಇದ್ದ ಕಾಲದಿಂದಲೂ, ಇಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಮಳೆಯಿಂದ ರಕ್ಷಣೆ ನೀಡಲು ಒಂದು ಶೆಡ್ ನಿರ್ಮಿಸಿ ಕೊಡಿ ಎಂದು ಕಳೆದ ಹಲವಾರು ದಶಕಗಳಿಂದ ಬೇಡಿಕೆ ಇಟ್ಟು ಸೋತಿದ್ದಾರೆ.

ಇದೀಗ ಸ್ಥಳೀಯ ನಗರಸಭಾ ಸದಸ್ಯೆ ಅಮೃತಾ ಕೃಷ್ಣಮೂರ್ತಿ ತನಗೆ ಬರುವ ಗೌರವ ಧನದ ಹಣದಲ್ಲಿ ಒಂದು ತಾತ್ಕಾಲಿಕ ಶೆಡ್ ನಿರ್ಮಿಸಿದ್ದರು. ಕಳೆದ ಎರಡು ಮೂರು ದಿನಗಳಿಂದ ಈ ಪುಟ್ಟ ಶೆಡ್ ನಿರ್ಮಿಸಲಾಗುತ್ತಿತ್ತು. ಇಂದು ಯಾವುದೇ ನೊಟೀಸು ನೀಡದೆ ಉಡುಪಿ ನಗರಸಭೆ ಅಧಿಕಾರಿಗಳು ಶೆಡ್ ಕಡವಿ ಹಾಕಿದ್ದಾರೆ.

ಇದೊಂದು ಅಕ್ರಮ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರೋಡ್ ಪಕ್ಕದಲ್ಲೇ ಶೆಡ್ ಹಾಕಲಾಗಿದೆ, ಹಾಗಾಗಿ ನಾವು ತೆರವು ಮಾಡುತ್ತಿದ್ದೇವೆ ಎಂದು ನಗರಸಭೆ ಅಧಿಕಾರಿಗಳು, ಜೆಸಿಬಿ ಬಳಸಿ ಕಾರ್ಯಾಚರಣೆ ನಡೆಸಿದ್ದಾರೆ. ಅಲ್ಲಿನ ಕಟ್ಟಡ ಸಾಮಗ್ರಿಗಳನ್ನು ಮರುಬಳಕೆ ಮಾಡಲು ಅವಕಾಶವಿಲ್ಲದಂತೆ ಪುಡಿ ಗಟ್ಟಿದ್ದಾರೆ. ತಕ್ಷಣವೇ ಅಲ್ಲಿಗೆ ಬಂದ ಸ್ಥಳೀಯರು ಮತ್ತು ನಗರಸಭಾ ಸದಸ್ಯೆ ತೀವ್ರ ಆಕ್ರೋಶ ಹೊರಹಾಕಿದರು. ನಗರಸಭಾ ಅಧಿಕಾರಿಯ ವಾಹನವನ್ನು ತೆರಳಲು ಅವಕಾಶವಿಲ್ಲದಂತೆ ತಡೆಗಟ್ಟಿದರು.

ಉಡುಪಿನಗರ ಸಭಾ ವ್ಯಾಪ್ತಿಯಲ್ಲಿ ಅನೇಕ ಪ್ರತಿಷ್ಠಿತ ಮಳಿಗೆಗಳು ಅಕ್ರಮ ನಿರ್ಮಾಣ ಮಾಡಿವೆ. ಶ್ರೀಮಂತರಿಗೊಂದು, ಬಡವರಿಗೊಂದು ಕಾನೂನು ಯಾಕೆ ಎಂದು ಸಿಡಿಮಿಡಿಕೊಂಡರು. ಇದರಿಂದ ಕಿನ್ನಿಮೂಲ್ಕಿ ಸ್ವಾಗತ ಗೋಪುರ ಪರಿಸರದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಈ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿದ್ದು ಕೂಡಲೇ ಸ್ಥಳಕ್ಕೆ ಆಗಮಿಸಿದ ಮಲ್ಪೆ ಠಾಣಾಧಿಕಾರಿ ಸಕ್ತಿವೇಲು ಮತ್ತವರ ತಂಡ ಪರಿಸ್ಥಿತಿಯನ್ನು ಹತೋಟಿಗೆ ತಂದರು.ಮಲ್ಪೆ ಪೊಲೀಸರು ನಗರಸಭಾ ಅಧಿಕಾರಿಯನ್ನು ಭದ್ರತೆ ನೀಡಿ ಸ್ಥಳದಿಂದ ಕರೆದೊಯ್ದರು.ಸಂತ್ರಸ್ತ ಮೀನುಗಾರ ಮಹಿಳೆಯರನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಲು ನಗರಸಭಾ ಸದಸ್ಯೆ ಮುಂದಾಗಿದ್ದಾರೆ. ಈ ಘಟನೆಯಿಂದ ನಗರಸಭಾ ಸದಸ್ಯೆ ಅಮೃತಾಕೃಷ್ಣಮೂರ್ತಿ ಅವರ ಪತಿ ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ ನೊಂದು ಕಣ್ಣೀರು ಹಾಕಿದ ಪ್ರಸಂಗವೂ ನಡೆಯಿತು.

ನಗರಸಭೆಗೆ ದಶಕಗಳಿಂದ ಬೇಡಿಕೆ ಇಟ್ಟರೂ ಸಹ ಮೀನುಗಾರರಿಗೆ ಸೂಕ್ತವಾದ ವ್ಯವಸ್ಥೆ ಕಲ್ಪಿಸಲು ಮುಂದಾಗದೆ ಇದ್ದು ತಾತ್ಕಾಲಿಕ ನೆಲೆಯಲ್ಲಿ ಶೆಡ್ ನಿರ್ಮಾಣಕ್ಕೆ ನಗರಸಭಾ ಸದಸ್ಯೆ ಮುಂದಾಗಿದ್ದರು. ನಗರ ಸಭೆಯ ಅಧಿಕಾರಿಗಳು ಏಕಾಏಕಿ ಆಗಮಿಸಿ ಶೆಡನ್ನು ನೆಲಸಮ ಮಾಡಿದ್ದು ಶೆಡ್ ಗೆ ಬಳಸಿದ ಕಟ್ಟಡ ಸಾಮಾಗ್ರಿಗಳನ್ನು ಬಳಸಿಕೊಳ್ಳಲು ಅವಕಾಶವಿಲ್ಲದಂತೆ ಹಾಳು ಮಾಡಲಾಗಿದೆ.

ನಗರ ಸಭೆಯ ಅಮಾನವೀಯ ಕೃತ್ಯದ ಬಗ್ಗೆ ಸ್ಥಳೀಯ ರಿಕ್ಷಾ ಚಾಲಕರು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ನಗರದ ಪ್ರತಿಷ್ಠಿತ ಕಟ್ಟಡಗಳಿಗೆ ಇಲ್ಲದ ಕಾನೂನು  ಕೇವಲ ಬಡವರ  ಮೇಲೆ ಹೇರಲಾಗುತ್ತಿದೆ ಎಂದು  ಸ್ಥಳೀಯರು ಆರೋಪಿಸಿದರು

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸ್ಥಳೀಯ ನಗರಸಭಾ ಸದಸ್ಯೆ ಅಮೃತಾ ಕೃಷ್ಣಮೂರ್ತಿ ಅವರು ಹಲವಾರು ಬಾರಿ ನಗರಸಭೆಗೆ ಮನವಿ ಮಾಡಿದರೂ ಕೂಡ ಇಲ್ಲಿ ಮೀನು ಮಾರಾಟ ಮಾಡುವ ಮಹಿಳೆಯರಿಗೆ ಸೂಕ್ತ ಸೂರು ನೀಡಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ನಾನು ನನ್ನ ನಗರಸಭಾ ಸದಸ್ಯರಿಗೆ ಸಿಗುವ ಗೌರವ ಧನದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿ ಕೊಡುವ ಭರವಸೆ ನೀಡಿದ್ದೆ. ಶೆಡ್ ನಿರ್ಮಿಸಿದ ಸ್ಥಳ ರಾಷ್ಟ್ರೀಯ ಹೆದ್ದಾರಿಗೆ ಸೇರಿದ್ದು, ನಗರಸಭೆಗೆ ಮತ್ತು ಇದಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಈ ಶೆಡ್ ಕೇವಲ ತಾತ್ಕಾಲಿಕವಾಗಿದ್ದು ನಗರಸಭೆಯವರು ಇಂದು ಏಕಾಏಕಿ ಯಾವುದೇ ನೋಟಿಸ್ ನೀಡದೆ ಬಂದು ಅದನ್ನು ಕೆಡವಿ ಹಾಕಿದ್ದಾರೆ. ನಗರ ಸಭೆಯ ಸದಸ್ಯೆಯಾಗಿ ನನ್ನ ಗಮನಕ್ಕೂ ಕೂಡ ತಾರದೆ ಇಂತಹ ದುರ್ವತನೆಯನ್ನು ತೋರಿಸಿರುವುದು ಖಂಡನೀಯ. ಬಡವರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸ ನಗರ ಸಭೆ ಮಾಡಿದ್ದು ಇವರ ಕಣ್ಣಿರು ಮುಂದಿನ ದಿನಗಳಲ್ಲಿ ಅವರಿಗೆ ಶಾಪವಾಗಿ ಪರಿಣಮಿಸಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು


Spread the love