ಅಕ್ರಮ ಮರಳುಗಾರಿಕೆ ಹಾಗೂ ಗಣಿಗಾರಿಕೆ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ – ಕೂರ್ಮಾ ರಾವ್ ಎಂ

Spread the love

ಅಕ್ರಮ ಮರಳುಗಾರಿಕೆ ಹಾಗೂ ಗಣಿಗಾರಿಕೆ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ – ಕೂರ್ಮಾ ರಾವ್ ಎಂ

ಉಡುಪಿ: ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಹಾಗೂ ಗಣಿಗಾರಿಕೆ ವಿರುದ್ಧಜಿಲ್ಲಾಡಳಿತ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಂಡು ಅಕ್ರಮ ಎಸಗಿದವರ ವಿರುದ್ಧ ನಿರಂತರ ಪ್ರಕರಣಗಳನ್ನು ದಾಖಲು ಮಾಡುತ್ತಿದೆ ೆಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ ಹೇಳಿದರು.

ಅವರು ಗುರುವಾರ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ ಮರಳಿನ ಕೊರತೆ ಎದುರಾಗದಂತೆ ಪಂಚಾಯಿತಿ ಮಟ್ಟದಲ್ಲಿ ಮರಳು ತೆಗೆಯುವ ಪ್ರಕ್ರಿಯೆ ಆರಂಭಿಸಲಾಗಿದೆ. ಮರಳು ದಿಬ್ಬಗಳಲ್ಲಿ ಸಾಂಪ್ರದಾಯಿಕವಾಗಿ ಮರಳು ತೆಗೆಯಲು ಒತ್ತು ನೀಡಲಾಗುತ್ತಿದೆ. ಕಟ್ಟುನಿಟ್ಟಾಗಿ ಎನ್‌ ಜಿಟಿ ನಿಯಮಗಳನ್ನು ಪಾಲಿಸಲಾಗುತ್ತಿದೆ ಎಂದು ತಿಳಿಸಿದರು.

ಮಲ್ಪೆಯ ಬಂದರಿನಿಂದ ಮೀನು ತುಂಬಿಕೊಂಡು ಹೊರ ರಾಜ್ಯ ಹಾಗೂ ಜಿಲ್ಲೆಗಳಿಗೆ ಸಾಗುವ ವಾಹನಗಳು ಹೆದ್ದಾರಿಯಲ್ಲಿ ಮೀನಿನ ನೀರು ಚೆಲ್ಲುತ್ತಿರುವ ಪರಿಣಾಮ ದ್ವಿಚಕ್ರ ವಾಹನಗಳು ಅಪಘಾತಕ್ಕೀಡಾಗುತ್ತಿವೆ. ರಸ್ತೆಯ ಮೇಲೆ ಮೀನಿನ ನೀರು ಚೆಲ್ಲದಂತೆ ವಾಹನ ಮಾಲೀಕರ ವಿರುದ್ಧ ಕ್ರಮಕ್ಕೆ ಆರ್ ಟಿ ಒ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.

ಮಳೆ ನಿಂತಿರುವುದರಿಂದ ನಗರಸಭೆ ವ್ಯಾಪ್ತಿಯ ಹಾಗೂ ಹೆದ್ದಾರಿ ವ್ಯಾಪ್ತಿಯಲ್ಲಿರುವ ಹೊಂಡ ಗುಂಡಿಗಳನ್ನು ಮುಚ್ಚಲು ನಗರಸಭೆ ಪೌರಾಯುಕ್ತರಿಗೆ ಹಾಗೂ ಹೆದ್ದಾರಿ ಇಲಾಖೆಯ ಎಂಜಿನಿಯ‌ರ್ ಗೆ ನಿರ್ದೇಶನ ನೀಡಲಾಗಿದೆ. ರಸ್ತೆ ನಿರ್ಮಾಣಕ್ಕೆ ಮರಗಳನ್ನು ಕಡಿದರೆ, ಕಡಿದ ಮರಕ್ಕೆ 10 ಪಟ್ಟು ಗಿಡ ನೆಡಬೇಕು ಎಂಬ ನಿಯಮವಿದೆ. ಜಿಲ್ಲೆಯಲ್ಲಿ ಈ ನಿಯಮ ಎಷ್ಟರಮಟ್ಟಿಗೆ ಅನುಷ್ಠಾನಗೊಂಡಿದೆ ಎಂದು ತಿಳಿಯಲು ಅರಣ್ಯ ಇಲಾಖೆ ಇದುವರೆಗೂ ಎಷ್ಟು ಮರಗಳನ್ನು ಕಡಿದಿದೆ. ಎಷ್ಟು ಗಿಡಗಳನ್ನು ನೆಟ್ಟು ಬೆಳೆಸಿದೆ ಎಂಬ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಇಂದ್ರಾಳಿ ಮೇಲ್ಲೇತುವೆ ಕಾಮಗಾರಿಗೆ ತಾಂತ್ರಿಕ ಕಾರಣಗಳು ಅಡ್ಡಿಯಾಗಿರುವ ಕಾರಣ ಸದ್ಯಕ್ಕೆ ಸುಸಜ್ಜಿತವಾದ ಹೆದ್ದಾರಿ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ. ಶೀಘ್ರ ಕಾಮಗಾರಿ ಆರಂಭವಾಗಲಿದ್ದು ವಾಹನಗಳ ಬದಲಿ ಮಾರ್ಗಕ್ಕೂ ಆದೇಶ ನೀಡಲಾಗಿದೆ ಎಂದರು.

ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಮೊದಲ ಬಾರಿಗೆ ಬ್ಲಾಗರ್ಸ್‌ ಮೀಟ್ ನಡೆಸಲಾಗಿದೆ. ಪ್ರಮುಖ ಬ್ಲಾಗರ್‌ಗಳನ್ನು ಜಿಲ್ಲೆಗೆ ಆಹ್ವಾನಿಸಿ 15 ಪ್ರಸಿದ್ಧ ಪ್ರವಾಸಿ ತಾಣಗಳನ್ನು ಪರಿಚಯಿಸಿ ಸಲಹೆಗಳನ್ನು ಸ್ವೀಕರಿಸಲಾಗಿದೆ. ಬ್ಲಾಗ್‌ಗಳ ಮೂಲಕ ಜಿಲ್ಲೆಗೆ ಹೆಚ್ಚು ಪ್ರವಾಸಿಗರನ್ನು ಸೆಳೆಯಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಪ್ರಧಾನ ಕಾರ್ಯದರ್ಶಿ ನಜೀರ್ ಪೊಲ್ಯ, ಖಜಾಂಚಿ ಉಮೇಶ್ ಮಾರ್ಪಳ್ಳಿ, ರಾಜ್ಯ ಸಮಿತಿ ಸದಸ್ಯ ಕಿರಣ್ ಮಂಜನಬೈಲು ಇದ್ದರು. ಚೇತನ್ ಮಟಪಾಡಿ ಕಾರ್ಯಕ್ರಮ ನಿರೂಪಿಸಿದರು.


Spread the love