
ಅಕ್ರಮ ಗಣಿಗಾರಿಕೆ ತಡೆಯಲು ತೆರಳಿದ ಪೊಲೀಸ್ ವಾಹನದ ಮೇಲೆ ಕಲ್ಲು ತೂರಾಟ, ಕರ್ತವ್ಯಕ್ಕೆ ಅಡ್ಡಿ – ಪ್ರಕರಣ ದಾಖಲು
ಮಲ್ಪೆ: ಹೂಡೆಯ ಖದೀಮಿ ಜಾಮೀಯಾ ಮಸೀದಿ ಬಳಿ ಅಕ್ರಮವಾಗಿ ಮರಳು ತೆಗೆಯುತ್ತಿರುವ ದೂರಿನ ಮೇರೆಗೆ ಸ್ಥಳಕ್ಕೆ ಪರಿಶೀಲನೆಗೆ ತೆರಳಿದ ವೇಳೆ 10-12 ಜನರ ಗುಂಪು ಮಲ್ಪೆ ಠಾಣಾಧಿಕಾರಿ ಮತ್ತು ಸಿಬಂದಿ ಮೇಲೆ ಕಲ್ಲು ತೂರಾಟ ನಡೆಸಿದ ಬಗ್ಗೆ ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ.
ದಾಳಿಯಲ್ಲಿ ಪಿಎಸ್ ಐ ವಾಹನದ ಎಡಭಾಗ ಜಖಂಗೊಂಡಿದ್ದು, ಹಲ್ಲೆ ಮಾಡಿದವರು ತಪ್ಪಿಸಿಕೊಂಡ ಪರಾರಿಯಾಗಿ ಬಳಿಕ ಮಸೀದಿಯ ಹತ್ತಿರ ವಾಹನಗಳ ಮೇಲೆ ಕಲ್ಲು ತೂರಾಟ ಮಾಡಿ ಸಾರ್ವಜನಿಕರ ಮೇಲೂ ಕಲ್ಲು ತೂರಾಟ ನಡೆಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಕ್ರಮ ಕೂಟ ಸೇರಿ ಪೊಲೀಸರ ಹಾಗೂ ಸಾರ್ವಜನಿಕರ ಮೇಲೆ ಕಲ್ಲು ತೂರಾಟ ಮಾಡಿ ಹಲ್ಲೆ ಮಾಡಿದ ಆರೋಪ ಹಾಗೂ ಅಕ್ರಮ ಮರಳು ಗಣಿಗಾರಿಕೆ ತಡೆಗೆ ಸ್ಥಳ ಪರಿಶೀಲನೆಗೆ ಹೋಗಿದ್ದ ವೇಳೆ ಕಲ್ಲು ತೂರಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಳೆ ಆರೋಪಿಗಳಾದ ಇರ್ಷಾದ್, ಅಹಾದ್, ಅಲ್ಫಾಜ್, ಶಾಹಿಲ್, ಇರ್ಫಾನ್, ಇದಾಯತ್ ಹಾಗೂ ಇತರೆ ನಾಲ್ವರ ವಿರುದ್ದ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.