ಅಜ್ಜಿಯಂದಿರ ಕೈ ಗೆ ಸಿಕ್ಕಿ ಹಾಕಿಕೊಂಡ ಒಣ ಮೀನು ಕಳ್ಳ!

Spread the love

ಅಜ್ಜಿಯಂದಿರ ಕೈ ಗೆ ಸಿಕ್ಕಿ ಹಾಕಿಕೊಂಡ ಒಣ ಮೀನು ಕಳ್ಳ!

ಉಡುಪಿ: ಸಣ್ಣ ಕಾಗದದ ತುಂಡಿನಿಂದಲೂ ದೊಡ್ಡ ಕಳ್ಳ ಸಿಕ್ಕಿ ಹಾಕಿಕೊಳ್ಳುತ್ತಾನೆ ಎನ್ನುದಕ್ಕೆ ಈ ಸ್ಟೋರಿ ಸಾಕ್ಷಿ. ಒಣ ಮೀನು ಕಳ್ಳತನವಾಗಿ, ಕಳ್ಳ ಅಜ್ಜಿಯಂದಿರ ಕೈ ಸಿಕ್ಕಿಹಾಕಿ ಕೊಂಡದ್ದೇ ಕುತೂಹಲಕಾರಿ ಕಥೆ. ಕದ್ದ ವಸ್ತು ಇದ್ದಲ್ಲಿಗೆ ಬಂದು, ಕಳ್ಳ ತಗಲಾಕೊಂಡದ್ದು ಹೇಗೆ ಅಂತೀರಾ ಈ ಸ್ಟೋರಿ ನೋಡಿ.

ಕರಾವಳಿಯ ಸುಡು ಬಿಸಿಲಿನಲ್ಲಿ ಮೀನು ಒಣ ಹಾಕುತ್ತಿರುವ ಅಜ್ಜಿಯರಿಗೆ, ಒಣ ಮೀನು ಮಾರಾಟವೇ ಜೀವಾಳ. ವಯಸ್ಸಾದಂತೆ ಮೀನುಗಾರ ಮಹಿಳೆಯರು, ಹಸಿ ಮೀನು ಮಾರಾಟ ಮಾಡುವ ವೃತ್ತಿಯನ್ನು ಸ್ವಲ್ಪ ಕಮ್ಮಿ ಮಾಡಿ, ಹಸಿ ಮೀನು ಒಣಗಿಸಿ ಮಾರಾಟ ಮಾಡುತ್ತಾರೆ.

ಉಡುಪಿಯ ಮಲ್ಪೆ ಬಂದರಿನ ಬಳಿ ಹಸಿ ಮೀನು, ಒಣಗಿಸಿ ಮಾರಾಟ ಮಾಡಿ ಅದರಿಂದಲೇ ತಮ್ಮ ಕುಟುಂಬ ನಿರ್ವಹಣೆ ಮಾಡುತ್ತಾರೆ. ಆದ್ರೆ ಇತ್ತೀಚಿನ ಕೆಲ ತಿಂಗಳಿನಿಂದ ಮೀನು ಒಣಗಿಸಿ, ಚೀಲಗಳಲ್ಲಿ ಕಟ್ಟಿ ಗೂಡುಗಳಲ್ಲಿ ಇಟ್ಟಿದ್ದ ಮೀನುಗಳು ಕಾಣೆಯಾಗುತ್ತಿತ್ತು. ಟನ್ ಗಟ್ಟಲೇ ಮೀನು ಕಳ್ಳತನ ಆಗುತ್ತಿತ್ತು.

ಆದರೆ ಈಗ ಕಳ್ಳ ತಗಲಾಕೊಂಡಿದ್ದಾನೆ.. ತಮಿಳುನಾಡು ಮೂಲದ ರಮನಾಥನೇ ಈ ಅಜ್ಜಿಯಂದಿರು ಮಾರಾಟ ಮಾಡಲು ಒಣಗಿಸಿದ್ದ ಮೀನು ಕದ್ದವನು. ಹೇಗೆ ಸಿಕ್ಕಾಕೊಂಡ ಎನ್ನುವುದೇ ಇಂಟ್ರೆಸ್ಟಿಂಗ್.

ಇದೇ ಮೀನು ಒಣಗಿಸುವ ಸ್ಥಳಕ್ಕೆ ಒಬ್ಬ ಯುವಕ ರಿಕ್ಷಾದಲ್ಲಿ ಬಂದು ಈ ಮಹಿಳೆಯರ ಬಳಿ ನನ್ನಲ್ಲಿ ಒಣ ಮೀನು ಇದೆ ನನಗೆ ಹಣ ನೀಡಿ, ನೀವ್ ಮಾರಾಟ ಮಾಡುವಾಗ ಇದನ್ನು ಮಾರಾಟ ಮಾಡಿ ಅಂತ ಹೇಳಿದ.. ಆಟೋದಲ್ಲಿ ಇದ್ದ ಮೀನಿನ ಗೋಣಿ ನೋಡುವಾಗಲೇ ಮಹಿಳೆಯರಿಗೆ ಇದು ನಮ್ಮದೇ ಗೋಣಿ ಚೀಲ ಅಂತ ಡೌಟ್ ಬಂದಿತ್ತು. ಆದರೂ ಗೋಣಿ ಚೀಲ ಕಳಗೆ ಇರಿಸಿ ಕಟ್ಟಿದ ಹಗ್ಗ ಬಿಚ್ಚಿಸಿ ನೋಡಿದಾಗ ಅದರಲ್ಲಿ ಕಾಗದ ಇತ್ತು. ಇದೇ ಕಾಗದ ಕಳ್ಳನನ್ನು ಹಿಡಿಯಲು ಸಾಕ್ಷಿ ಆಯ್ತು. ಅದು ಹೇಗಪ್ಪ ಅಂದ್ರೆ, ಕಾಗದ ಈ ಮಹಿಳೆಯರು ಯಾರಿಗೆ ಮಾರಾಟ ಮಾಡಬೇಕು ಅವರ ಹೆಸರು ಬರೆದು ಗೋಣಿ ಚೀಲದ ಒಳಗೆ ಇಟ್ಟಿದ್ದು, ಯುವಕ ತಂದ ಗೋಣಿ ಚೀಲದಲ್ಲಿ ಇದ್ದ ಕಾಗದ ಕೂಡ ಅದೇ ಆಗಿತ್ತು.

ನಂತರ ರಿಕ್ಷಾ ಚಾಲಕನನ್ನು ಸರಿಯಾಗಿ ಕ್ಲಾಸ್ ತೆಗೆದುಕೊಂಡಾಗ ನಿಜ ವಿಷಯ ಬಾಯಿ ಬಿಟ್ಟ. ಇದು ನಾನು ಕದ್ದದ್ದು ಅಲ್ಲ ನನಗೆ ತಮಿಳುನಾಡು ಮೂಲದ ರಮಾನಾಥ ಎಂಬುವನು ಕೊಟ್ಟದ್ದು ಅಂತ ಅಂದ. ಬಳಿಕ, ರಮಾನಾಥನನ್ನು, ರಿಕ್ಷಾ ಚಾಲಕನಿಂದಲೇ ಎಣ್ಣೆ ಹಾಕುವ ಬಾ ಅಂತ ಸ್ಥಳಕ್ಕೆ ಉಪಾಯದಿಂದ ಕರೆಸಿ, ಹಿಡಿದು ಮಲ್ಪೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಒಟ್ಟಿನಲ್ಲಿ, ಅಜ್ಜಿಯಂದಿರ ಕಷ್ಟ ಪಟ್ಟು ಬೆವರು ಸಿರಿಸಿ, ಕೂಡಿಟ್ಟ ಒಣ ಮೀನನ್ನು ಕದಿಯುತ್ತಿದ್ದ ಖದೀಮ ಸಿಕ್ಕಿಬಿದ್ದು ಪೊಲೀಸ್ ವಶದಲ್ಲಿ ಇದ್ದಾನೆ. ಮಹಿಳೆಯರಿಗೂ ತಮ್ಮ ಒಣ ಮೀನು ಮತ್ತೆ ಸಿಕ್ಕ ಖುಷಿ ಇದೆ.


Spread the love