ಅಡಿಕೆಗೆ ಚುಕ್ಕೆ ರೋಗ: ಔಷಧಿಗೆ 10 ಕೋಟಿ ರೂ.ಗಳ ಬಿಡುಗಡೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Spread the love

ಅಡಿಕೆಗೆ ಚುಕ್ಕೆ ರೋಗ: ಔಷಧಿಗೆ 10 ಕೋಟಿ ರೂ.ಗಳ ಬಿಡುಗಡೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಕುಂದಾಪುರ: ಜನಪ್ರಿಯ ಸರ್ಕಾರವಿದ್ದರೆ, ಜನಪರ ನಾಯಕ ಅದರ ಮುಖ್ಯಸ್ಥನಾದರೆ ಯಾವ ರೀತಿ ಜನಸ್ಪಂದನೆ ಸಿಗುತ್ತದೆ ಎನ್ನುವುದಕ್ಕೆ ಈ ಬೈಂದೂರಿನ ಅಭಿವೃದ್ದಿಯ ಕತೆಯೇ ಸಾಕ್ಷಿ. ನಮ್ಮ ಸರ್ಕಾರದ ಅಭಿವೃದ್ದಿಯ ಕೆಲಸಗಳು ನಿಮ್ಮ ಮುಂದಿವೆ. ಕೇಂದ್ರ, ರಾಜ್ಯ ಸರ್ಕಾರದಂತೆ ಬೈಂದೂರಿನಲ್ಲಿಯೂ ಸಂಸದ ಹಾಗೂ ಶಾಸಕರ ಡಬಲ್ ಇಂಜಿನ್ ಸಮನ್ವಯತೆ ಇದೆ. ಇದು ಕೇವಲ ಬಾಯಿ ಮಾತಿನ ಸರ್ಕಾರವಲ್ಲ, ನಮ್ಮದು ಜನರಿಗೆ ಸ್ಪಂದಿಸುವ ಸರ್ಕಾರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಹೊಸಾಡು ಗ್ರಾಮದ ಮುಳ್ಳಿಕಟ್ಟೆಯ ನಗು ಸಿಟಿಯಲ್ಲಿ ಸೋಮವಾರ ಸಂಜೆ ಕರ್ನಾಟಕ ಸರ್ಕಾರ ಹಾಗೂ ಜಿಲ್ಲಾಡಳಿದ ವತಿಯಿಂದ ನಡೆದ ಮನೆಮನೆಗೆ ಕುಡಿಯುವ ನೀರು, ಮರವಂತೆ ಮೀನುಗಾರಿಕಾ ಬಂದರು, ಏತನೀರಾವರಿ ಯೋಜನೆಯ ಸಹಿತ ವಿವಿಧ ಅಭಿವೃದ್ದಿ ಕಾರ್ಯಕ್ರಮಗಳ ಶಂಕುಸ್ಥಾಪನೆ, ಉದ್ಘಾಟನೆ ಹಾಗೂ ಸರ್ಕಾರದ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತು ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬೆಂಗಳೂರಿನಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 9.3 ಲಕ್ಷ ಕೋಟಿ ಬಂಡವಾಳ ಹೂಡಿಕೆಯ ಭರವಸೆ ಸಿಕ್ಕಿದ್ದು, ಕರಾವಳಿ ಜಿಲ್ಲೆಗಳಾದ ಉಡುಪಿ, ದ.ಕ ಹಾಗೂ ಕಾರವಾರ ಜಿಲ್ಲೆಗಳಲ್ಲಿ ಅಂದಾಜು 2ಲಕ್ಷ ಕೋಟಿ ಬಂಡವಾಳ ಹೂಡಿಕೆಯ ನಿರೀಕ್ಷೆ ಇದ್ದು, ಇದರಿಂದ ಈ ಭಾಗದಲ್ಲಿ ಉದ್ಯೋಗಾವಕಾಶದ ಜೊತೆಯಲ್ಲಿ ಅಭಿವೃದ್ದಿಯ ಶೆಕೆ ಆರಂಭವಾಗಲಿದೆ. ಸರ್ಕಾರ ಹಾಗೂ ಜನಪ್ರತಿನಿಧಿಗಳಲ್ಲಿ ಸಮನ್ವಯತೆ ಇದ್ದರೆ ಕ್ಷೇತ್ರ ಅಭಿವೃದ್ದಿಯಾಗುತ್ತದೆ ಎನ್ನುವುದಕ್ಕೆ ಬೈಂದೂರೆ ಸಾಕ್ಷಿ. ಪ್ರಧಾನಿ ಮೋದಿ ಮಾರ್ಗದರ್ಶನ ಹಾಗೂ ಯಡಿಯೂರಪ್ಪನ ಆಶೀರ್ವಾದದಿಂದ ರಾಜ್ಯದ ಬಿಜೆಪಿ ಸರ್ಕಾರ ರಾಜ್ಯದ ಜನರಿಗೆ ಒಳ್ಳೆಯ ಆಡಳಿತವನ್ನು ನೀಡುತ್ತಿದೆ. ದುಡ್ಡೆ ದೊಡ್ಡಪ್ಪ ಎನ್ನುವ ಕಾಲ ಬದಲಾಗಿದ್ದು, ದುಡಿಮೆಯೇ ದೊಡ್ಡಪ್ಪ ಎನ್ನುವ ಸ್ವಾಭಿಮಾನದ ಚಿಂತನೆಗಳಿಗೆ ಒತ್ತು ನೀಡಲಾಗುತ್ತಿದೆ. ಎಸ್‍ಸಿ-ಎಸ್‍ಟಿ, ಹಿಂದುಳಿದ ವರ್ಗ, ರೈತರು, ಮೀನುಗಾರರು ಸೇರಿದಂತೆ ಸಮಾಜದ ಎಲ್ಲಾ ವರ್ಗದವರಿಗೂ ಸಾಮಾಜಿಕ ನ್ಯಾಯದ ಬದ್ದತೆ ಇರಿಸಿಕೊಳ್ಳಲಾಗಿದೆ. ಅಭಿವೃದ್ದಿ ನಿಂತ ನೀರಾಗಬಾರದು ಎನ್ನುವ ಕಲ್ಪನೆ ಹೊಂದಲಾಗಿದೆ ಎಂದರು.

ಭಾಷಣಗಳು ಕಾರ್ಯಕ್ರಮಗಳಾಗುವುದಿಲ್ಲ, ಸಮಾನತೆ ಹಾಗೂ ಸಮಾಜ ಸುಧಾರಣೆಯ ಬದ್ದತೆಯನ್ನು ಹೊಂದಿರುವ ನಮ್ಮ ಸರ್ಕಾರದಿಂದ ಪರಿಶಿಷ್ಟ ವರ್ಗ ಹಾಗೂ ಪರಿಶಿಷ್ಟ ಜಾತಿಯವರ ಮೀಸಲಾತಿ ಹೆಚ್ಚಿಸುವ ಕ್ರಾಂತಿಕಾರಿ ನಿರ್ಧಾರವನ್ನು ಕೈಗೊಳ್ಳಲಾಗಿದೆ. ರೈತರ ಮಕ್ಕಳಿಗಾಗಿ ವಿಧ್ಯಾಸಿರಿ ಯೋಜನೆಯನ್ನು ಜಾರಿಗೆ ತರಲಾಗಿದೆ. ನೂರು ಅಂಬೇಡ್ಕರ್ ವಸತಿ ನಿಲಯ ಸ್ಥಾಪನೆಗಾಗಿ ಯೋಜನೆ ರೂಪಿಸಲಾಗಿದೆ. ಐವತ್ತು ಕನಕದಾಸ ಹಿಂದುಳಿದ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು. ಮಂಗಳೂರಿನಲ್ಲಿ ಒಂದು ಸಾವಿರ ವಿದ್ಯಾರ್ಥಿಗಳಿಗೆ ಆಶ್ರಯ ಕಲ್ಪಿಸುವ ವಿದ್ಯಾರ್ಥಿ ನಿಲಯ ಸ್ಥಾಪಿಸಲಾಗುವುದು. ಬೆಂಗಳೂರು, ಗುಲ್ಬರ್ಗಾ, ಮೈಸೂರು ಧಾರವಾಡ ಸೇರಿದಂತೆ ರಾಜ್ಯಾದ್ಯಂತ ಈ ಯೋಜನೆಯನ್ನು ವಿಸ್ತರಿಸಲಾಗುವುದು. ಡೀಮ್ಡ್ ಫಾರೆಸ್ಟ್ ಎನ್ನುವ ಸಮಸ್ಯೆಯನ್ನು ಸರಿಪಡಿಸಿ ಆರು ಲಕ್ಷ ಹೆಕ್ಟೇರ್ ಭೂಪ್ರದೇಶದ ಜನರಿಗೆ ಅನುಕೂಲವಾಗುವ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಕುಚಲಕ್ಕಿಯನ್ನು ರೈತರಿಂದ ಖರೀದಿ ಮಾಡಿ ರೇಶನ್ ಕಾರ್ಡ್ ಮೂಲಕ ಬಡವರಿಗೆ ಕೊಡುತ್ತೇವೆ. ಈ ಭಾಗದ ಜನ ದೊಡ್ಡ ಪ್ರಮಾಣದಲ್ಲಿ ನಮಗೆ ಆಶೀರ್ವಾದ ಮಾಡಿದ್ದಾರೆ. ಇದನ್ನು ನಾವು ಮರೆಯುವುದಿಲ್ಲ. ಬರುವ ದಿನಗಳಲ್ಲಿ ನಾವು ಮಾಡಿರುವಂತಹ ಜನಪರ ಕಾರ್ಯಕ್ರಮಗಳ ರಿಪೋರ್ಟ್ ಕಾರ್ಡ್ ಅನ್ನು ನಿಮ್ಮ ಮುಂದೆ ಇಡುತ್ತೇವೆ. ಇದು ನಮ್ಮ ಸಂಕಲ್ಪ. ಕೇವಲ ಈ ಭಾಗ ಮಾತ್ರವಲ್ಲದೇ ಸಮಗ್ರ ಕರ್ನಾಟಕದ ಅಭಿವೃದ್ದಿಗೆ ಸರ್ಕಾರ ಕಟಿಬದ್ದವಾಗಿದೆ ಎಂದರು.

ಅಡಿಕೆ ಮರಗಳಿಗೆ ಚುಕ್ಕೆ ರೋಗ ಬಂದಿದ್ದು, ಅದನ್ನು ತಡೆಗಟ್ಟಲು ಅಗತ್ಯವಿರುವ ಔಷಧಿಯನ್ನು ಕೂಡಲೇ 10 ಕೋಟಿ ರೂ.ಗಳ ಅನದಾನವನ್ನು ಕೂಡಲೆ ಬಿಡುಗಡೆ ಮಾಡುವುದಾಗಿ  ಬೊಮ್ಮಾಯಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು, ಬೈಂದೂರು ವಿಧಾನಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗಾಗಿ ರಾಜ್ಯದ ಬಿಜೆಪಿ ಸರ್ಕಾರ ಅನೇಕ ಕೊಡುಗೆಗಳನ್ನು ನೀಡಿದೆ. ಐದು ನದಿಗಳು ಹರಿಯುವ ಬೈಂದೂರು ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಕುಡಿಯುವ ನೀರಿಗೆ ಇದ್ದ ಸಮಸ್ಯೆಗೆ ಇದೀಗ ಪರಿಹಾರವಾಗಿರುವುದು ಸಂತೋಷ ತಂದಿದೆ. ಅಡಕೆಗಳಿಗೆ ಬಂದಿರುವ ಎಲೆ ಚುಕ್ಕಿ ರೋಗದಿಂದ ಶೇಕಡಾ 60ಕ್ಕೂ ಹೆಚ್ಚು ಬೆಳೆಗಾರರು ಕಂಗಾಲಾಗಿದ್ದು, ಸರ್ಕಾರ ಅವರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದರು.

ಪ್ರಾಸ್ತಾವಿಕ ಮಾತನಾಡಿದ ಸಂಸದ ಬಿವೈ ರಾಘವೇಂದ್ರ ಅವರು, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕರಾವಳಿ ಭಾಗವನ್ನು ಹೊಂದಿರುವ ಬೈಂದೂರು ಕ್ಷೇತ್ರದ ಅಭಿವೃದ್ದಿಗಾಗಿ ಸಾಕಷ್ಟು ಯೋಜನೆಗಳನ್ನು ಜೋಡಿಸಲಾಗಿದ್ದು, 251.46 ಕೋಟಿ. ರೂ.ಗಳ ಯೋಜನೆಗಳು ಇಂದು ಉದ್ಘಾಟನೆಗೊಂಡಿದೆ. 1,095.16 ಕೋಟಿ ರೂ. ಯೋಜನೆಗಳ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಬೈಂದೂರು ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅನುದಾನಗಳು ಹಾಗೂ ಯೋಜನೆಯನ್ನು ಬಳಸಿಕೊಂಡು ಅಭಿವೃದ್ದಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬೈಂದೂರು ಶಾಸಕ ಬಿಎಂ ಸುಕುಮಾರ್ ಶೆಟ್ಟಿ ಅವರು, ಕರಾವಳಿ ಹಾಗೂ ಮಲೆನಾಡು ಭಾಗ ಹೊಂದಿರುವ ಬೈಂದೂರು ಕ್ಷೇತ್ರ ಧಾರ್ಮಿಕವಾಗಿ ಸಂಪನ್ನವಾಗಿದ್ದು, ಈ ಕ್ಷೇತ್ರದಲ್ಲಿನ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸಲಾಗಿದೆ. ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಧಾರ್ಮಿಕ ಕ್ಷೇತ್ರಗಳ ಅಭಿವೃದ್ದಿಗಾಗಿ ಹಾಗೂ ಗಂಗೊಳ್ಗಿ ಬಂದರು ಅಬ್ಥಿವೃದ್ದಿಗೆ ವಿಶೇΜÀ ಅನುದಾನವನುSS ದಗಿಸುವಂತೆ ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿಕೊಂಡರು.

ಸಚಿವರಾದ ಗೋವಿಂದ ಎಂ. ಕಾರಜೋಳ, ಎಸ್ ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಸುನಿಲ್ ಕುಮಾರ್, ರಾಜ್ಯ ಹಿಂದುಳಿದ ಆಯೋಗದ ಅಧ್ಯಕ್ಷ ಕೆ ಜಯಪ್ರಕಾಶ್ ಹೆಗ್ಡೆ, ಕರಾವಳಿ ಅಭಿವೃದ್ದಿ ಪ್ರಾಧಿಖಾರ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕೆ. ರಘುಪತಿ ಭಟ್, ಲಾಲಾಜಿ ಆರ್ ಮೆಂಡನ್, ದಿ ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್‍ನ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ, ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಉಪಾಧ್ಯಕ್ಷ ಕಿರಣ್ ಕುಮಾರ್ ಕೊಡ್ಗಿ, ಪರಿಷತ್ ಸದಸ್ಯ ರವಿಕುಮಾರ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಬಿ ಗುಂಗೆ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆಯ ನಿರ್ದೇಶಕ ಮೃತ್ಯುಂಜಯ ಸ್ವಾಮಿ, ಮೀನುಗಾರಿಕಾ ಇಲಾಖೆಯ ನಿರ್ದೇಶಕ ರಾಮಾಚಾರ್ಯ, ಜಿಲ್ಲಾ ಪಒಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚೇಂದ್ರ, ಉಪವಿಭಾಗಾಧಿಕಾರಿ ರಾಜು ಕೆ ಉಪಸ್ಥಿತರಿದ್ದರು.

ಬೈಂದೂರು ಮಂಡಲ ಬಿಜೆಪಿ ವತಿಯಿಂದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಸನ್ಮಾನಿಸಲಾಯಿತು. ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತು ಹಾಗೂ ಹಕ್ಕುಪತ್ರ ವಿತರಿಸಲಾಯಿತು. ಡಾ.ಬಿಬಿ ಹಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ ಹಾಗೂ ಮೂಡುಬಿಡಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕøತಿ ಕಾರ್ಯಕ್ರಮಗಳು ನಡೆದವು.

ಜಿಲ್ಲಾಧಿಕಾರಿ ಎಂ ಕೂರ್ಮಾ ರಾವ್ ಸ್ವಾಗತಿಸಿದರು. ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್ ಧನ್ಯವಾದವಿತ್ತರು. ಪತ್ರಕರ್ತ ರಾಜೇಶ್ ಕೆ.ಸಿ ಕಾರ್ಯಕ್ರಮವನ್ನು ನಿರೂಪಿಸಿದರು.


Spread the love