ಅಡುಗೆ ಅನಿಲ ದರ ಏರಿಕೆ ವಿರೋಧಿಸಿ ಡಿವೈಎಫ್ಐ ಪ್ರತಿಭಟನೆ

Spread the love

ಅಡುಗೆ ಅನಿಲ ದರ ಏರಿಕೆ ವಿರೋಧಿಸಿ ಡಿವೈಎಫ್ಐ ಪ್ರತಿಭಟನೆ

ಕುಂದಾಪುರ: ಗ್ರಾಹಕರಿಗೆ ಸಂಕಷ್ಟ ತಂದೊಡ್ಡುತ್ತಿರುವ ಕೇಂದ್ರ ಸರಕಾರದ ಗ್ಯಾಸ್ ಬೆಲೆ ಏರಿಕೆಯನ್ನು ವಿರೋಧಿಸಿ ಡಿವೈಎಫ್ಐ ರಾಜ್ಯವ್ಯಾಪಿ ಪ್ರತಿಭಟನೆ ಅಂಗವಾಗಿ ಬುಧವಾರ ಕುಂದಾಪುರದಲ್ಲಿ ಡಿವೈಎಫ್ಐ ತಾಲೂಕು ಸಮಿತಿ ಹಾಗೂ ಕುಂದಾಪುರ ಆಟೋರಿಕ್ಷಾ ಮತ್ತು ವಾಹನ ಚಾಲಕರ ಸಂಘ(ಸಿಐಟಿಯು)ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಡಿವೈಎಫ್ಐ ತಾಲೂಕು ಅಧ್ಯಕ್ಷ ರಾಜೇಶ ವಡೇರಹೋಬಳಿ ಮಾತನಾಡಿ, ಮಾರಕ ಕೊರೋನಾ ಸೋಂಕು ಸಾಮಾನ್ಯ ಜನತೆಯ ಬದುಕನ್ನು ಕಸಿದುಕೊಂಡಿರುವ ಈ ಕರಾಳ ದಿನಗಳಲ್ಲೇ ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿರುವುದು ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಪೆಟ್ರೋಲ್​-ಡೀಸೆಲ್​ ಬೆಲೆ, ಧಾನ್ಯಗಳ ಬೆಲೆ, ಎಲ್​ಪಿಜಿ ಗ್ಯಾಸ್ ಸಿಲಿಂಡರ್​ ಬೆಲೆ ಹಾಗೂ ಅಡುಗೆ ಎಣ್ಣೆಯ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಇದು ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದ್ದು, ಬದುಕು ನಡೆಸುವುದೇ ದುಸ್ತರವಾಗಿದೆ ಎಂದರು.

ವರ್ಷದ ಆರಂಭದಿಂದ ಮೇಲಿಂದ ಮೇಲೆ ದರ ಹೆಚ್ಚಳವಾಗುತ್ತಿರುವ ಸಿಲಿಂಡರ್ ಬೆಲೆ ಈಗ 25 ರೂ ಹೆಚ್ಚಳದೊಂದಿಗೆ 826 ರೂ ಆಗಿದ್ದು, ಈ ತಿಂಗಳಲ್ಲೇ 1000 ರೂಪಾಯಿ ಆಗಲಿದೆ ಎನ್ನುವ ಆತಂಕ ಶುರುವಾಗಿದೆ. ಇನ್ನು ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 96 ರೂಪಾಯಿ ಏರಿಕೆಯಾಗಿದೆ. ಇದೀಗ ಕಮರ್ಷಿಯಲ್ ಸಿಲಿಂಡರ್ ದರ 1,666 ರೂಪಾಯಿ ಆಗಿರುವುದು ಜನರ ಆದಾಯವನ್ನೇ ಮೋದಿ ಸರಕಾರ ಕಸಿಯುತ್ತಿದೆ ಎಂದರು

ರಿಕ್ಷಾ ಚಾಲಕರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ರಾಜು ದೇವಾಡಿಗ ಮಾತನಾಡಿ, ಬಿಜೆಪಿ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗ್ಯಾಸ್, ತೈಲ ಬೆಲೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದರಿಂದ ಜನಸಾಮಾನ್ಯರು ಜೀವನ ನಡೆಸಲು ತೊಂದರೆಯಾಗಿದೆ. ಈಗ ಗ್ಯಾಸ್ ಬೆಲೆ ಹೆಚ್ಚಳ ಮಾಡುವ ಮೂಲಕ ಸರಕಾರ ಜನಸಾಮಾನ್ಯರ ಬದುಕಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಆರೋಪಿಸಿದ ಅವರು, ಕೇಂದ್ರ ಸರಕಾರ ಕೂಡಲೇ ಏರಿಸಿದ ಸಿಲಿಂಡರ್ ಗ್ಯಾಸ್ ಬೆಲೆ ಇಳಿಸುವ ಮೂಲಕ ಜನಸಾಮಾನ್ಯರಿಗೆ ಆಸರೆಯಾಗಬೇಕು. ಇಲ್ಲವಾದಲ್ಲಿ ಜನತೆ ಮತ್ತಷ್ಟು ತೀವ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಡಿವೈಎಫ್ಐ ಮುಖಂಡರಾದ ರಾಜ ಬಿಟಿಆರ್, ನಿತಿನ್, ಸಂತೋಷ್,‌ ರಿಕ್ಷಾ ಚಾಲಕ ಸಂಘದ ಮುಖಂಡರಾದ ಕರುಣಾಕರ ಎಚ್, ಲಕ್ಷ್ಮಣ ಬರೇಕಟ್ಟು, ಚಂದ್ರ ವಿ, ರಮೇಶ ವಿ,ಇದ್ದರು.


Spread the love