ಅತಿಯಾದ ರಾಸಾಯನಿಕ ಬಳಕೆಯಿಂದ ಭೂಮಿ ಬಂಜರು

Spread the love

ಅತಿಯಾದ ರಾಸಾಯನಿಕ ಬಳಕೆಯಿಂದ ಭೂಮಿ ಬಂಜರು

ಕೃಷ್ಣರಾಜಪೇಟೆ: ರಾಸಾಯನಿಕ ಗೊಬ್ಬರ ಹಾಗೂ ಕ್ರಿಮಿನಾಶಕವನ್ನು ಅತಿಯಾಗಿ ಬಳಸಿ ಬೇಸಾಯ ಮಾಡುತ್ತಿರುವುದರಿಂದ ಫಲವತ್ತತೆ ನಾಶವಾಗಿ ಭೂಮಿ ಬಂಜರಾಗುತ್ತಿದೆ ಎಂದು ರಾಜ್ಯದ ರೇಷ್ಮೆ, ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವರಾದ ಡಾ.ನಾರಾಯಣಗೌಡ ಹೇಳಿದರು.

ತಾಲೂಕಿನ ಕಿಕ್ಕೇರಿ ಹೋಬಳಿಯ ಮಾದಾಪುರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿಶಾಲೆಯ ಸಭಾ ರಂಗಮಂದಿರದಲ್ಲಿ ಗ್ರಾಮವಿಕಾಸ ಯೋಜನೆಯ ನಿವಾಸಿ ಅಭ್ಯಾಸವರ್ಗ ಕಾರ್ಯಕ್ರಮದ ಅಡಿಯಲ್ಲಿ ಹೊಳೆನರಸೀಪುರ, ಚನ್ನರಾಯಪಟ್ಟಣ ಹಾಗೂ ಕೃಷ್ಣರಾಜಪೇಟೆ ತಾಲೂಕುಗಳ ವ್ಯಾಪ್ತಿಯ 150 ಕಲಿಕಾ ಕೇಂದ್ರಗಳ ಶಿಕ್ಷಕಿಯರಿಗೆ ಆಯೋಜಿಸಿರುವ 3 ದಿನಗಳ ಅಭ್ಯಾಸ ವರ್ಗ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಾವು ಸತ್ತರೆ ಭೂಮಿಯ ಒಡಲಿನಲ್ಲಿ ಸಾಕಿ ಅಂತ್ಯಸಂಸ್ಕಾರ ಮಾಡುತ್ತೇವೆ. ಆದರೆ ಭೂಮಿ ತಾಯಿಯೇ ಸತ್ತರೆ ನಮ್ಮನ್ನು ಸಲಹಿ ಕಾಪಾಡುವವರು ಯಾರು ಎಂದು ಪ್ರಶ್ನಿಸಿದರು.

ಗ್ರಾಮೀಣ ಪ್ರದೇಶದ ರೈತಾಪಿ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಣದ ಜ್ಞಾನದ ಬೆಳಕಿನ ಸಂಸ್ಕಾರದಿಂದ ವಂಚಿತರಾಗಿದ್ದು ಅವಿದ್ಯಾವಂತರಾಗಿರುವುದರಿಂದ ಗ್ರಾಮೀಣ ಜನರನ್ನು ವಂಚಿಸಿ ಮೋಸ ಮಾಡುವವರು ಹಾಗೂ ಸ್ವಾರ್ಥಿಗಳ ಸಂಖ್ಯೆಯು ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಯುವಜನರು, ವಿದ್ಯಾರ್ಥಿಗಳು ಹಾಗೂ ಗ್ರಾಮೀಣ ರೈತಾಪಿ ವರ್ಗವನ್ನು ಜಾಗೃತಿ ಮೂಡಿಸಲು ಜ್ಞಾನದ ಬೆಳಕಿನ ಸಂಕೇತವಾಗಿರುವ ಶಿಕ್ಷಣದ ಜ್ಞಾನವನ್ನು ನೀಡುವುದು ಇಂದಿನ ಅಗತ್ಯವಾಗಿದೆ. ವೈಜ್ಞಾನಿಕವಾಗಿ ಬೇಸಾಯ ಮಾಡಿ ಯಾವುದೇ ಅಡ್ಡಪರಿಣಾಮಗಳನ್ನು ಬೀರದ ಗುಣಮಟ್ಟದ ಆಹಾರ ಧಾನ್ಯಗಳನ್ನು ಬೆಳೆಯಲು ಅವಶ್ಯಕವಾಗಿ ತಿಳಿಯಲೇಬೇಕಾದ ಬೇಸಾಯ ಕ್ರಮಗಳು ಸೇರಿದಂತೆ ಉತ್ತಮವಾದ ಸಂಸ್ಕಾರವನ್ನು ನೀಡಿ ಸಜ್ಜುಗೊಳಿಸಲಾಗುತ್ತಿದೆ ಎಂದು ಹೇಳಿದರು.

ಗ್ರಾಮ ವಿಕಾಸ ಯೋಜನೆಯ ರಾಜ್ಯ ಸಂಯೋಜಕರಾದ ಕೋ.ಸು.ರಮೇಶ್ ಮಾತನಾಡಿ ಸ್ವಾರ್ಥವೇ ತುಂಬಿರುವ ಇಂದಿನ ಸಮಾಜದಲ್ಲಿ ಸೇವೆ ಎಂಬ ಪದವು ತನ್ನ ನಿಜವಾದ ಅರ್ಥವನ್ನು ಕಳೆದುಕೊಳ್ಳುತ್ತಿದೆ. ಸಣ್ಣ-ಪುಟ್ಟ ವಿಚಾರಗಳಿಗೆ ಪರಸ್ಪರ ಕಿತ್ತಾಟ ಮಾಡಿಕೊಂಡು ಬದ್ಧವೈರಿಗಳಂತೆ ದ್ಷೇಷಿಗಳಾಗದೇ ಪರಸ್ಪರ ಪ್ರೀತಿ ವಿಶ್ವಾಸಗಳಿಂದ ಕೂಡಿ ಬಾಳುವುದನ್ನು ಕಲಿಯಬೇಕು. ನಮ್ಮ ಸಂಸ್ಕಾರ, ಆಚಾರ-ವಿಚಾರಗಳ ಬಗ್ಗೆ ಅರಿವನ್ನು ಮೂಡಿಸಿಕೊಂಡು ಮಾವನ ಕುಲಕ್ಕೆ ಹಾಗೂ ಸಮಾಜಕ್ಕೆ ಮಾರಕವಾಗುವಂತಹ ಸಾಮಾಜಿಕ ಕಟ್ಟುಪಾಡುಗಳು ಹಾಗೂ ಮೂಢನಂಬಿಕೆಗಳ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕು. ವರದಕ್ಷಿಣೆ, ಬಾಲ್ಯವಿವಾಹ, ಹೆಣ್ಣು ಭ್ರೂಣಹತ್ಯೆಯಂತಹ ಸಾಮಾಜಿಕ ಪಿಡುಗುಗಳ ವಿರುದ್ಧ ಸಮರವನ್ನೇ ಸಾರಬೇಕು ಎಂದು ಕಿವಿಮಾತು ಹೇಳಿದರು.

ಸಂಪನ್ಮೂಲ ವ್ಯಕ್ತಿಗಳಾದ ಜನಾರ್ಧನ್, ವಿಕಾಸ ಕೇಂದ್ರದ ವಿಭಾಗ ಸಂಯೋಜಕರಾದ ಚೇತನ್, ಜಿಲ್ಲಾ ಸಂಯೋಜಕರಾದ ರಾಜಶೇಖರ್, ರಾಜ್ಯ ಯುವಪ್ರಶಸ್ತಿ ಪುರಸ್ಕೃತರಾದ ಮಾದಾಪುರ ಸೋಮಶೇಖರ್, ಮಾದಾಪುರ ಮೊರಾರ್ಜಿದೇಸಾಯಿ ವಸತಿಶಾಲೆಯ ಪ್ರಾಂಶುಪಾಲರಾದ ಕುಪ್ಪಹಳ್ಳಿ ಪ್ರಸನ್ನಕುಮಾರ್, ಸೇರಿದಂತೆ ಪೂರ್ಣಾವಧಿ ಸಂಯೋಜಕರು ಶಿಬಿರದಲ್ಲಿ ಭಾಗವಹಿಸಿದ್ದರು.


Spread the love