
ಅತ್ತೂರು ಬಸಿಲಿಕಾದ ಕ್ಯಾಂಡಲ್ ತಯಾರಿಕಾ ಘಟಕದಲ್ಲಿ ಆಕಸ್ಮಿಕ ಬೆಂಕಿ ಅನಾಹುತ
ಕಾರ್ಕಳ: ಅತ್ತೂರು ಸಂತ ಲಾರೆನ್ಸ್ ಬಾಸಿಲಿಕಾದ ಬಳಿಯ ಕ್ಯಾಂಡಲ್ ತಯಾರಿಕಾ ಘಟಕಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಲಕ್ಷಾಂತರ ರೂಪಾಯಿ ನಷ್ಟವಾದ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ.
ಮಾಹಿತಿಗಳ ಪ್ರಕಾರ ತಯಾರಿಕಾ ಘಟಕದ ನೌಕರರು ಕ್ಯಾಂಡಲ್ ತಯಾರಿಕೆ ಮಾಡಿ ಇಟ್ಟು ಊಟಕ್ಕೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ಘಟನೆಯಿಂದ ಸಂಪೂರ್ಣ ಘಟಕ ಬೆಂಕಿಯ ಕೆನ್ನಾಲಿಗೆಗೆ ಉರಿದು ಭಸ್ಮವಾಗಿದ್ದು, ತಯಾರಿಸಿಟ್ಟಿದ್ದ ಕ್ಯಾಂಡಲ್ ಗಳು ಕೂಡ ಬೆಂಕಿಗೆ ಆಹುತಿಯಾಗಿವೆ.
ಘಟನೆಯ ಕುರಿತು ಮಾಹಿತಿ ತಿಳಿದು ಕೂಡಲೇ ಸ್ಥಳಕ್ಕೆ ಆಗಮಿಸಿದ ಕಾರ್ಕಳ ಅಗ್ನಿಶಾಮಕ ದಳದ ಸಿಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಘಟನೆಯಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದ್ದು ಅದೃಷ್ಟವಶಾತ್ ನೌಕರರಿಗೆ ಯಾವುದೇ ರೀತಿಯ ಹಾನಿಯಾಗಿಲ್ಲ.
ಬೆಂಕಿ ನಂದಿಸುವ ಕಾರ್ಯದಲ್ಲಿ ಕಾರ್ಕಳ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಆಲ್ಬರ್ಟ್ ಮೋನಿಸ್, ಸಿಬ್ಬಂದಿಗಳಾದ ಉದಯ್ ಕುಮಾರ್ ಹೆಗ್ಡೆ, ಅಚ್ಚುತ್ ಕರ್ಕೇರಾ, ಜಯ ಮೂಲ್ಯ, ಮಹ್ಮ್ಮದ್ ರಫೀಕ್, ಕೇಶವ್, ಸುಜಯ್, ಉಮೇಶ್, ಬಸವರಾಜ್, ರವಿಚಂದ್ರ, ವಿನಾಯಕ್, ಸಂಜಯ್ ಮತ್ತು ಮುಜಮಿಲ್ ಸಹಕರಿಸಿದರು.
ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ಭೇಟಿಗಾಗಿ ಪ್ರತಿನಿತ್ಯ ಭಕ್ತಾದಿಗಳು ದೇಶ ವಿದೇಶಗಳಿಂದ ಆಗಮಿಸುತ್ತಿದ್ದ ಸಂತ ಲಾರೆನ್ಸರಿಗೆ ಕ್ಯಾಂಡಲ್ ಬೆಳಗಿಸಿ ಹರಕೆಗಳನ್ನು ತೀರಿಸುತ್ತಾರೆ ಇದಕ್ಕಾಗಿ ಕ್ಯಾಂಡಲ್ ಗಳನ್ನು ಕ್ಷೇತ್ರದ ಪಕ್ಕದ ಘಟಕದಲ್ಲಿ ತಯಾರಿಸಲಾಗುತ್ತಿತ್ತು.