ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಗೆ ಇಂದ್ರಜಿತ್ ಲಂಕೇಶ್ ಆಗ್ರಹ

Spread the love

ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಗೆ ಇಂದ್ರಜಿತ್ ಲಂಕೇಶ್ ಆಗ್ರಹ

ಮೈಸೂರು: ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದಲ್ಲಿ ಸಾಮೂಹಿಕ ಅತ್ಯಾಚಾರದಂತಹ ಪ್ರಕರಣಕ್ಕೆ ಯಾವ ಶಿಕ್ಷೆ ಕೊಟ್ಟಿದ್ದೇವೆ ಎನ್ನುವುದು ಇತರೆ ರಾಜ್ಯಗಳಿಗೆ ತೋರಿಸಿಕೊಡಬೇಕಾಗಿದೆ ಎಂದು ನಿರ್ದೇಶಕ, ಪತ್ರಕರ್ತ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿ ಅವರು ಹೆಣ್ಣು ಮಕ್ಕಳು ಮಧ್ಯರಾತ್ರಿಯಲ್ಲಿ ಓಡಾಡುವಂತಾದರೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದಂತೆ ಎಂದಿದ್ದರು. ಆದರೆ ಇವತ್ತು ಈ ಪ್ರಕರಣದ ಬಗ್ಗೆ ರಾಜಕಾರಣಿಗಳು ಆ ಯುವತಿ ಆ ಜಾಗಕ್ಕೆ ಏಕೆ ಹೋಗಿದ್ರು ಅಂತ ಕೇಳುತ್ತಿದ್ದಾರೆಯೇ ವಿನಃ ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮಗಳ ಕುರಿತಂತೆ ಮಾತನಾಡುವುದಿಲ್ಲ. ನಾನು ಈ ಪ್ರಕರಣವನ್ನು ಮಾನೀನಿ ಪ್ರಕರಣ ಅಂತ ಕರೆಯುತ್ತೇನೆ ಎಂದರು.

ಈ ಪ್ರಕರಣ ಹೆಣ್ಣುಮಗಳ ಮಾನವನ್ನ ಎತ್ತಿ ಹಿಡಿಯುವ ಪ್ರಕರಣ ಇದಾಗಬೇಕು ಎಂದು ಆಗ್ರಹಿಸಿದ ಅವರು, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದಲ್ಲಿ ಇಂತಹ ಪ್ರಕರಣಕ್ಕೆ ಯಾವ ಶಿಕ್ಷೆ ಕೊಟ್ಟಿದ್ದೇವೆ ಎನ್ನುವುದನ್ನು ಇತರೆ ರಾಜ್ಯಗಳಿಗೆ ತೋರಿಸಿಕೊಡಬೇಕಾಗಿದೆ. ಅಷ್ಟೇ ಅಲ್ಲದೆ ಸಂತ್ರಸ್ತೆಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರಲ್ಲದೆ, ನಿರ್ಭಯಾ ಕೇಸ್‍ ನಂತರ ಅತ್ಯಾಚಾರಿಗಳಿಗೆ ಯಾವ ಶಿಕ್ಷೆಯನ್ನು ನೀಡಬೇಕೆಂದು ಸುಪ್ರೀಂಕೋರ್ಟ್ ತೀರ್ಮಾನ ಮಾಡಿದೆಯೋ ಅದನ್ನೇ ಮೈಸೂರಿನ ಪ್ರಕರಣಕ್ಕೂ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.

ಇಲ್ಲಿ ಆಡಳಿತ ಪಕ್ಷ ವಿಪಕ್ಷ ಮುಖ್ಯವಲ್ಲ ನಾನು ತಿಂಗಳ ಹಿಂದೆಯೇ ಮೈಸೂರಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಹೇಳಿದ್ದೆ. ಪೊಲೀಸರ ಕರ್ತವ್ಯ ವಿಫಲತೆಯ ಬಗ್ಗೆಯೂ ವಿವರಿಸಿದ್ದೆನು. ಈಗ ಅದು ಜಗಜ್ಜಾಹೀರಾಗಿದೆ. ಈ ಘಟನೆ ಬಳಿಕ ಕೆಲವರು ಮೈಸೂರನ್ನು ತಾಲೀಬಾನಿಗೆ ಹೋಲಿಸುತ್ತಿದ್ದಾರೆ. ಇದು ನೋವಿನ ವಿಚಾರವಾಗಿದೆ ಎಂದ ಅವರು ಕೆಲವೇ ದಿನಗಳ ಅಂತರದಲ್ಲಿ ದರೋಡೆ ಮತ್ತು ಅತ್ಯಾಚಾರ ನಡೆದಿರುವುದು ನೋವು ತಂದಿದೆ. ತಂದೆ ಲಂಕೇಶ್ ಅವರಿಗೂ ಕೂಡ ಮೈಸೂರು ಪ್ರಿಯವಾದ ಸ್ಥಳವಾಗಿತ್ತು. ಇಂತಹ ಸ್ಥಳದಲ್ಲಿ ಇಂತಹ ದುಷ್ಕೃತ್ಯಗಳು ನಡೆಯಿತಲ್ಲಾ ಎಂಬ ಬೇಸರ ಕಾಡುತ್ತಿದೆ.

ಇನ್ನು ಮುಂದೆ ಹೆಣ್ಣುಮಕ್ಕಳಿಗೆ ಅತ್ಯಾಚಾರ ಮಾತ್ರವಲ್ಲ ಕಿರುಕುಳ, ಹಿಂಸೆ, ನೀಡುವವರಿಗೆ ಏನೇನು ಶಿಕ್ಷೆಗಳು ಎಂಬುದನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರಕಟಿಸಬೇಕು. ರಾಜಕಾರಣಿಗಳು ತಾವು ಕಟ್ಟಿಸಿದ ಕಟ್ಟಡ, ನಿಲ್ದಾಣ, ಇನ್ನಿತರ ವಿಚಾರಗಳ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುತ್ತಾರೆ ಆದರೆ ಇಂತಹ ಪ್ರಕರಣಗಳು ನಡೆದಾಗ ಯಾವ ಶಿಕ್ಷೆಯನ್ನು ನೀಡಬೇಕು ಎಂಬುದನ್ನು ತೀರ್ಮಾನ ತೆಗೆದುಕೊಳ್ಳದೆ ಎಲ್ಲವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಾರೆ. ಇನ್ನು ಮುಂದೆ ಇಂತಹ ದುಷ್ಕೃತ್ಯ ಎಲ್ಲಿಯೂ ನಡೆಯಬಾರದು ಅಂತಹ ಶಿಕ್ಷೆಗಳು ಆರೋಪಿಗಳಿಗೆ ಆಗಬೇಕೆಂದು ಆಗ್ರಹಿಸಿದರು.


Spread the love