ಅಧರ್ಮದ ಪರ ಹೋರಾಟ ಮಾಡುವ ಸುಕುಮಾರ ಶೆಟ್ಟರಿಗೆ ಅಪಜಯ ಖಚಿತ: ಬಿಎಮ್ಎಸ್ ವಿರುದ್ದ ಮತ್ತೆ ವಿಕಾಸ್ ಹೆಗ್ಡೆ ವಾಗ್ದಾಳಿ

Spread the love

ಅಧರ್ಮದ ಪರ ಹೋರಾಟ ಮಾಡುವ ಸುಕುಮಾರ ಶೆಟ್ಟರಿಗೆ ಅಪಜಯ ಖಚಿತ: ಬಿಎಮ್ಎಸ್ ವಿರುದ್ದ ಮತ್ತೆ ವಿಕಾಸ್ ಹೆಗ್ಡೆ ವಾಗ್ದಾಳಿ

ಕುಂದಾಪುರ: ಅಧರ್ಮದ ಪರವಾಗಿ ಶಾಸಕ ಸುಕುಮಾರ ಶೆಟ್ಟರು ಬೈಂದೂರು ಕ್ಷೇತ್ರದಲ್ಲಿ ಯುದ್ದವನ್ನು ಸಾರಿದ್ದಾರೆ. ಗೋಪಾಲ ಪೂಜಾರಿಯವರ ನೇತೃತ್ವದಲ್ಲಿ ಮಹಿಳೆಯರ ಪರವಾಗಿ ನಾವೆಲ್ಲರೂ ಧರ್ಮದ ಯುದ್ದವನ್ನು ಸಾರಿದ್ದೇವೆ. ಅಧರ್ಮದ ಪರ ಹೋರಾಟ ಮಾಡುತ್ತಿರುವ ಸುಕುಮಾರ ಶೆಟ್ಟರಿಗೆ ಅಪಜಯವಾಗುವುದು ಖಚಿತ ರಂದು ಯುವ ಕಾಂಗ್ರೆಸ್ ಮುಖಂಡ ವಿಕಾಸ್ ಹೆಗ್ಡೆ ಬೈಂದೂರು ಶಾಸಕ ಬಿಎಮ್ಎಸ್ ವಿರುದ್ದ ಮತ್ತೆ ವಾಗ್ದಾಳಿ ನಡೆಸಿದ್ದಾರೆ.

ವಂಡ್ಸೆಯ ಸ್ವಾವಲಂಬನಾ ಹೊಲಿಗೆ ತರಬೇತಿ ಕೇಂದ್ರವನ್ನು ಕಾನೂನು ಬಾಹಿರವಾಗಿ ಮುಚ್ಚಿರುವುದನ್ನು ಖಂಡಿಸಿ ಸೋಮವಾರ ಕುಂದಾಪುರ ತಾಲೂಕು ಪಂಚಾಯತ್ರಾಜ್ ಒಕ್ಕೂಟ ಹಾಗೂ ವಿವಿಧ ಸಂಘಟನೆಗಳು ಆಶ್ರಯದಲ್ಲಿ ಉಪ್ಪುಂದ ಪೇಟೆಯಲ್ಲಿ ನಡೆದ ಸರಣಿ ಸತ್ಯಾಗ್ರಹವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸೀತೆಯನ್ನು ಅಪಹರಿಸಿದ ರಾವಣ ರಾಮನ ಮೂಲಕ ಸಾವನ್ನು ಕಾಣಬೇಕಾಯಿತು. ಇಡೀ ಮಹಾಭಾರತ ಯುದ್ದ ಧರ್ಮ ಹಾಗೂ ಅಧರ್ಮದ ಮೂಲಕ ನಡೆಯಿತು. ಧರ್ಮದ ಪರವಾಗಿ ಪಾಂಡವರಿದ್ದರೆ ಅಧರ್ಮದ ಪರವಾಗಿ ಕೌರವರಿದ್ದರು. ಧರ್ಮದ ಪರವಿದ್ದ ಪಾಂಡವರಿಗೆ ಕೊನೆಗೂ ಜಯವಾಗಿ ಅವರು ಅಧಿಕಾರವನ್ನು ಅನುಭವಿಸಿದರು. ಇವತ್ತು ಐದು ಜನ ಮಹಿಳೆಯರಿರಬಹುದು ಅಥವಾ ಎಪ್ಪತ್ತು ಜನ ಮಹಿಳೆಯರಿರಬಹುದು. ಇದು ಕೂಡ ಧರ್ಮ ಯುದ್ದವೆಂದು ನಾನು ತಿಳಿದುಕೊಳ್ಳುತ್ತೇನೆ. ಮುಂದಿನ ಚುನಾವಣೆಯಲ್ಲಿ ಬೈಂದೂರು ಜನತೆ ಗೋಪಾಲ ಪೂಜಾರಿಯವರ ಕೈಯ್ಯನ್ನು ಹಿಡಿಯುವ ಮೂಲಕ ಮಗದೊಮ್ಮೆ ಗೋಪಾಲ ಪೂಜಾರಿಯವರಿಗೆ ಶಾಸಕತ್ವವನ್ನು ಕೊಟ್ಟು ಅವರ ಮೂಲಕವಾದರೂ ಸುಕುಮಾರ ಶೆಟ್ಟಿಯವರಿಂದಾದ ಅನ್ಯಾಯಗಳಿಗೆ ಪರಿಹಾರ ಕಂಡುಕೊಳ್ಳುವಂತಹ ಕೆಲಸವನ್ನು ಕ್ಷೇತ್ರದ ಜನರು ಮಾಡುತ್ತಾರೆ ಎಂದರು.

ಗ್ರಾ.ಪಂ ಪಿಡಿಒ ಇಂದ ಹಿಡಿದು ಜಿ.ಪಂ ಸಿಇಒ ತನಕದ ಅಧಿಕಾರಿಗಳು ಸುಕುಮಾರ ಶೆಟ್ಟರ ಅಣತಿಯಂತೆ ಕೆಲಸ ಮಾಡುತ್ತಿದ್ದಾರೆ. ಸುಕುಮಾರ ಶೆಟ್ಟರಂತಹ ಸರ್ವಾಧಿಕಾರಿ ಶಾಸಕರ ಜೊತೆ ಸೇರಿಕೊಂಡು ಸ್ವಾವಲಂಬಿ ಮಹಿಳೆಯರನ್ನು ಬೀದಿಪಾಲು ಮಾಡಲು ಪ್ರಯತ್ನಪಟ್ಟ ಜಿಲ್ಲಾ ಪಂಚಾಯತ್ ಸಿಇಒ ಮೇಲೂ ಕ್ರಮ ಕೈಗೊಳ್ಳಬೇಕು. 22 ದಿನ ಕಳೆದಿದೆ. ಕನಿಷ್ಟಪಕ್ಷವಾದರೂ ಆ ಮಹಿಳೆಯರನ್ನು ಭೇಟಿ ಮಾಡಿ ಅವರ ನೋವುಗಳನ್ನು ಆಲಿಸಿ, ಸೌಜನ್ಯಕ್ಕಾದರೂ ಭೇಟಿ ಮಾಡುವ ಮನಸ್ಥಿತಿ ಇಲ್ಲದ ಅವರು ಖಂಡಿತವಾಗಿಯೂ ಜಿಲ್ಲಾಪಂಚಾಯತ್ ಸಿಇಒ ಅಲ್ಲ. ಅವರು ಶಾಸಕರ ಏಜೆಂಟ್ ಎಂದು ಪ್ರಹಾರ ನಡೆಸಿದರು.


Spread the love