Home Mangalorean News Kannada News ಅಧಿಕಾರಕ್ಕೆ ಬಂದ 36 ಗಂಟೆಯಲ್ಲಿ ಎತ್ತಿನ ಹೊಳೆ ಸಮಸ್ಯೆ ಪರಿಹಾರ – ಜೆಡಿಎಸ್

ಅಧಿಕಾರಕ್ಕೆ ಬಂದ 36 ಗಂಟೆಯಲ್ಲಿ ಎತ್ತಿನ ಹೊಳೆ ಸಮಸ್ಯೆ ಪರಿಹಾರ – ಜೆಡಿಎಸ್

Spread the love

ಅಧಿಕಾರಕ್ಕೆ ಬಂದ 36 ಗಂಟೆಯಲ್ಲಿ ಎತ್ತಿನ ಹೊಳೆ ಸಮಸ್ಯೆ ಪರಿಹಾರ – ಜೆಡಿಎಸ್

ಮಂಗಳೂರು: ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಸರಕಾರ ಅಧಿಕಾರಕ್ಕೆ ಬಂದಲ್ಲಿ ಕೇವಲ 36 ಗಂಟೆಯಲ್ಲಿ ಎತ್ತಿನಹೊಳೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಜೆಡಿಎಸ್ ನಾಯಕ್ ಎಮ್ ಬಿ ಸದಾಶಿವ ಹೇಳಿದರು.

ಅವರು ನಗರದಲ್ಲಿ ಆಯೋಜಿಸಿದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಡೈರಿಯ ವಿಷಯವನ್ನು ತೆಗೆದುಕೊಂಡು ಪರಸ್ಪರ ಕೆಸರೆರೆಚಾಟದಲ್ಲಿ ತೋಡಗಿವೆ. ಬಿಜೆಪಿ ಪಕ್ಷ ಜಿಲ್ಲಾ ಬಂದ್ ಮಾಡಲು ಕರೆ ನೀಡಿದರೆ ಆಡಳಿತಾರೂಡ ಕಾಂಗ್ರೆಸ್ ಪಕ್ಷ ಅದನ್ನು ತಡೆಯುವುದಿಲ್ಲ. ರಾಜ್ಯದಲ್ಲಿ ಪಕ್ಷವನ್ನು ಬಲಗೊಳಿಸುವ ನಿಟ್ಟಿನಲ್ಲಿ 10 ಮಂದಿ ಸದಸ್ಯರ ಸಲಹಾ ಸಮಿತಿಯನ್ನು ಪಕ್ಷದ ನಾಯಕ ಕುಮಾರಸ್ವಾಮಿಯವರ ಆದೇಶದಂತೆ ರಚಿಸಲಾಗಿದ್ದು, ಅಮರನಾಥ ಶೆಟ್ಟಿ ಅವರನ್ನು ಅಧ್ಯಕ್ಷ ಹಾಗೂ ಹೈದರ್ ಪರ್ತಿಪಾಡಿ ಅವರನ್ನು ಸಂಚಾಲಕರನ್ನಾಗಿ ನೇಮಿಸಲಾಗಿದೆ.

ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಡೈರಿಯ ವಿಷಯದಲ್ಲಿ ಪರಸ್ಪರ ಕೆಸರೆರೆಚಾಟ ಮಾಡುತ್ತಾ ರಾಜ್ಯದ ಬರ ಪರಿಸ್ಥಿತಿಯನ್ನು ಸಂಪೂರ್ಣ ಮರೆತಿವೆ. ನಾವೂ ಕೂಡ ಸದ್ಯವೇ ಡೈರಿಯನ್ನು ಬಿಡುಗಡೆಗೊಳಿಸಲಿದ್ದು ಅದರ ಹೆಸರು ಜಯಪ್ರಕಾಶ್ ನಾರಾಯಣ್ ಅವರ ಜೈಲಿನ ಡೈರಿ. ಎರಡೂ ರಾಷ್ಟ್ರೀಯ ಪಕ್ಷಗಳು ಹಾಗೂ ಜನರು ನಮ್ಮ ಸ್ವಾತಂತ್ರ್ಯ ಹೋರಾಟದ ಬಗ್ಗೆ ತಿಳಿದುಕೊಳ್ಳಲಿ ಎಂದರು.

ಇದೇ ವೇಳೆ ಮಾತನಾಡಿದ ಮುನೀರ್ ಅವರು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೇಸ್ ಸರಕಾರ ಸಂಪೂರ್ಣ ವಿಫಲವಾಗಿದೆ. ಕೇರಳದ ಮುಖ್ಯಮಂತ್ರಿ ರಾಜ್ಯಕ್ಕೆ ಆಗಮಿಸುವಾಗ ವಿರೋಧ ಪಕ್ಷ ಬಂದ್ ಕರೆ ನೀಡಿದೆ. ಕಲ್ಲಡ್ಕದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಆಯೋಜಿಸಿದ ಕಾರ್ಯಕ್ರಮವೊಂದಕ್ಕೆ ಸಂಘಪರಿವಾರದವರು ತಡೆಯೊಡ್ಡಿದ್ದರು. ಜಿಲ್ಲಾ ಉಸ್ತುವಾರಿ ಸಚಿವರು ಇಂತಹ ವಿಚಾರಗಳನ್ನು ಗಂಭೀರವಾಗಿ ತೆಗೆದುಕೊಂಡು ಇದಕ್ಕೆ ಕಾರಣರಾದವರ ಮೇಲೆ ಸೂಕ್ತ ಕ್ರಮ ಕೈಗೊಂಡಿದ್ದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ. ಯಾರಾದರೂ ಬಂದ್ ಕರೆ ನೀಡಿದರೆ ಸರಕಾರ ಅಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಅಲ್ಲದೆ ಸರಕಾರಿ ಬಸ್ಸುಗಳನ್ನು ಹೆಚ್ಚುವರಿಯಾಗಿ ಒಡಿಸಿದರೆ ಜನರಿಗೆ ಆಗುವ ಸಮಸ್ಯೆ ತಪ್ಪುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರು ಸಮಾಜ ವಿರೋಧಿ ಚಟುವಟಿಕೆಗಳನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ ಇದರಿಂದ ಜನ ಭಯದಲ್ಲಿ ಬದುಕಬೇಕಾಗಿದೆ. ಇಂತಹ ಪರಿಸ್ಥಿತಿ ನೋಡಿದರೆ ಜಿಲ್ಲೆಯಲ್ಲಿ ಬಿಜೆಪಿ ಆಡಳಿತವಿದೆಯೋ ಇಲ್ಲ ಕಾಂಗ್ರೆಸ್ ಆಡಳಿತವಿದೆಯೋ ಎಂಬ ಪ್ರಶ್ನೆ ಮೂಡುತ್ತದೆ ಎಂದರು.

ಹೈದರ್ ಪರ್ತಿಪಾಡಿ, ಅಕ್ಷಿತ್ ಸುವರ್ಣ, ಗೋಪಾಲಕೃಷ್ಣ ಅತ್ತಾವರ, ದಿವಾಕರ್ ಶೆಟ್ಟಿ, ಸುಕುಮಾರ್ ಭಟ್, ಹರೀಶ್ ಪುತ್ರನ್ ಹಾಗೂ ಇತರರು ಉಪಸ್ಥಿತರಿದ್ದರು.


Spread the love

Exit mobile version