
ಅಧಿಕಾರಿಗಳ ಕರ್ತವ್ಯ ಲೋಪ: ಮಾಧ್ಯಮಕ್ಕೂ ಮೊದಲೇ ಕಾರ್ಯಕರ್ತರಿಂದ ಫಲಿತಾಂಶ ಸೋರಿಕೆ!
ಮಾಧ್ಯಮದವರಿಗೆ ಕಾರ್ಯಕರ್ತರಿಂದ ಫಲಿತಾಂಶದ ಮಾಹಿತಿ. ಆಕ್ಷೇಪ ವ್ಯಕ್ತಪಡಿಸಿ ಸ್ಥಳದಲ್ಲೇ ಉಡುಪಿ ಪತ್ರಕರ್ತರಿಂದ ಪ್ರತಿಭಟನೆ. ಪೊಲೀಸರೊಂದಿಗೆ ವಾಗ್ವಾದ. ಡಿಸಿ ಭರವಸೆ ಬಳಿಕ ಪ್ರತಿಭಟನೆ ವಾಪಾಸ್
ಉಡುಪಿ: ಉಡುಪಿಯಲ್ಲಿ ನಡೆಯುತ್ತಿರುವ ಮತ ಎಣಿಕೆ ಕಾರ್ಯದಲ್ಲಿ ಮಾಧ್ಯಮದವರಿಗೆ ಮಾಹಿತಿ ಸಿಗುವ ಮೊದಲೇ ಏಜೆಂಟರಿಂದ ಮಾಹಿತಿ ಸೋರಿಕೆಯಾದ ಹಿನ್ನೆಲೆ ಮಾಧ್ಯಮ ಮಿತ್ರರು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದು ಆಕ್ಷೇಪ ವ್ಯಕ್ತಪಡಿಸಿದ ಘಟನೆ ಸೈಂಟ್ ಸಿಸಿಲಿ ಶಿಕ್ಷಣ ಸಂಸ್ಥೆಯ ಮತ ಎಣಿಕೆ ಕೇಂದ್ರದಲ್ಲಿ ನಡೆದಿದೆ.
ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭಗೊಂಡಿದ್ದು, ಮೊದಲ ಸುತ್ತಿನಿಂದಲೂ ಮಾಧ್ಯಮದವರಿಗೆ ತಡವಾಗಿ ಮಾಹಿತಿ ಲಭಿಸುತ್ತಿತ್ತು. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಮತ ಎಣಿಕೆ ಕೇಂದ್ರದೊಳಗೆ ಮೊಬೈಲ್ ಅನ್ನು ಸಂಪೂರ್ಣ ನಿಷೇಧಿಸಿದ್ದರೂ ಅಧಿಕಾರಗಳ ಕರ್ತವ್ಯ ಲೋಪದಿಂದಾಗಿ ಮೊಬೈಲ್ ಕೊಂಡೊಯ್ದ ಏಜೆಂಟರು ಮೊಬೈಲ್ ಮೂಲಕ ಒಳಗಿನ ಮಾಹಿತಿಯನ್ನು ಕಾರ್ಯಕರ್ತರಿಗೆ ರವಾನಿಸುತ್ತಿರುವುದು ಪತ್ರಕರ್ತರ ಗಮನಕ್ಕೆ ಬಂದಿದೆ.
ಕಾರ್ಯಕರ್ತರ ಮೂಲಕ ಮಾಧ್ಯಮದವರಿಗೆ ಮಾಹಿತಿ ಸಿಕ್ಕ ಹಿನ್ನೆಲೆ ಮತ ಎಣಿಕೆ ಕೇಂದ್ರದ ಪ್ರವೇಶ ಧ್ವಾರಕ್ಕೆ ತೆರಳಿದ ಉಡುಪಿಯ ಮಾಧ್ಯಮ ಮಿತ್ರರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಸ್ಥಳಕ್ಕೆ ಎಸ್ಪಿ, ಡಿಸಿ ಬರುವ ತನಕ ಸ್ಥಳ ಬಿಟ್ಟು ಕದಲೋದಿಲ್ಲ ಎನ್ನುವ ಪಟ್ಟು ಹಿಡಿದ ಪತ್ರಕರ್ತರು ಮೊಬೈಲ್ ತೆಗೆದುಕೊಂಡು ಹೋದ ಬಗ್ಗೆ ಪರಿಶೀಲನೆ ನಡೆಸಿ ಎಂದು ಪಟ್ಟು ಹಿಡಿದರು.
ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ಈ ಬಗ್ಗೆ ಪರಿಶೀಲನೆ ನಡೆಸಿ ಆದಷ್ಟು ಶೀಘ್ರದಲ್ಲಿ ಮಾಧ್ಯಮದವರಿಗೆ ಮಾಹಿತಿ ತಲುಪುವಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ಕೊಟ್ಟ ಬಳಿಕ ಪತ್ರಕರ್ತರು ದಿಢೀರ್ ಪ್ರತಿಭಟನೆಯನ್ನು ವಾಪಾಸ್ ಪಡೆದಿದ್ದಾರೆ.