
ಅನಧಿಕೃತ ಬ್ಯಾನರ್, ಸಭೆ, ಸಮಾರಂಭಗಳ ಮೇಲೆ ನಿಗಾ: ಜಿಲ್ಲಾಧಿಕಾರಿ ಕೂರ್ಮಾ ರಾವ್ ಸೂಚನೆ
ಉಡುಪಿ: ಜಿಲ್ಲಾದ್ಯಂತ ಅನಧಿಕೃತ ಜಾಹೀರಾತು ಫಲಕ ಅಳವಡಿಸಲು ಹಾಗೂ ಸಭೆ ಸಮಾರಂಭ ನಡೆಸಲು ಅವಕಾಶ ನೀಡಬಾರದು ಮತ್ತು ಈ ಸಂಬಂಧ ಎಲ್ಲೆಡೆ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ಅವರು ಸ್ಥಳೀಯಾಡಳಿತ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ನಗರ ಮತ್ತು ಗ್ರಾಮಾಂತರ ಪ್ರದೇಶ ಗಳಲ್ಲಿ ಅನುಮತಿ ಪಡೆಯದೆ ಹಾಕಲಾಗಿರುವ ಬ್ಯಾನರ್, ಬಂಟಿಂಗ್ಸ್ ಮತ್ತು ಫ್ಲೆಕ್ಸ್, ಗೋಡೆ ಬರಹ, ವಿವಿಧ ಪಕ್ಷಗಳ ಜಾಹೀರಾತು ಫಲಕ ಇತ್ಯಾದಿ ಕಂಡುಬಂದಲ್ಲಿ ತತ್‌ಕ್ಷಣವೇ ಸಂಬಂಧಪಟ್ಟವರಿಗೆ ನೋಟಿಸ್ ನೀಡಬೇಕು ಮತ್ತು ಅದನ್ನು ತೆರವುಗೊಳಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾ.ಪಂ.ಗಳ ನಿರ್ದಿಷ್ಟ ಸಮಿತಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಯವರು “ಉದಯವಾಣಿ’ಗೆ ಮಾಹಿತಿ ನೀಡಿದರು.
ಸಭೆ, ಸಮಾರಂಭ ಅಥವಾ ಯಾವುದೇ ಸಾರ್ವಜನಿಕ ಕಾರ್ಯಗಳು, ಔತಣಕೂಟಗಳನ್ನು ಸ್ಥಳೀಯಾಡಳಿತದ ಅನುಮತಿ ಇಲ್ಲದೇ ನಡೆಸುತ್ತಿರುವುದು ಕಂಡು ಬಂದಲ್ಲಿ ಅವರ ಮೇಲೆ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದಾರೆ. ಹಾಗೆಯೇ ನಿರ್ದಿಷ್ಟ ಕಾರ್ಯಕ್ರಮಗಳಿಗೆ ಬ್ಯಾನರ್, ಬಂಟಿಂಗ್ಸ್, ಫ್ಲೆಕ್ಸ್ ಇತ್ಯಾದಿಗಳನ್ನು ಹಾಕಲು ಅನುಮತಿ ಪಡೆದ ದಿನಗಳಿಗಷ್ಟೇ ಸೀಮಿತವಾಗಬೇಕು. ಕಾರ್ಯಕ್ರಮ ಮುಗಿದು ನಿರ್ದಿಷ್ಟ ಕಾಲಮಿತಿಯೊಳಗೆ ತೆರವುಗೊಳಿಸುವ ಕಾರ್ಯವೂ ಆಗಬೇಕು. ಸಾರ್ವಜನಿಕ ಸ್ಥಳಗಳ ಅಂದ ಕೆಡಿಸಲು ಅವಕಾಶ ನೀಡಬಾರದು. ಕಾನೂನು ಉಲ್ಲಂ ಸಿ ಕಾರ್ಯಕ್ರಮ ನಡೆಯದಂತೆಯೂ ನಿಗಾ ವಹಿಸಲು ನಿರ್ದೇಶಿಸಿದ್ದಾರೆ.