
ಅನಾರೋಗ್ಯ ಪೀಡಿತ ಮಕ್ಕಳಿಗಾಗಿ ರವಿ ಕಟಪಾಡಿ ಸಂಗ್ರಹಿಸಿದ ರೂ. 7.14 ಲಕ್ಷ ವಿತರಣೆ
ಉಡುಪಿ: ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಲಕ್ಷಾಂತರ ರೂಪಾಯಿ ಹಣ ಇರಲೇಬೇಕು ಎಂದೇನು ಇಲ್ಲ. ಒಳ್ಳೆಯ ಮನಸಿದ್ದರೆ ಸಾಕು ಎನ್ನುವುದನ್ನು ಉಡುಪಿಯ ರವಿ ಕಟಪಾಡಿ ಇನ್ನೋಮ್ಮೆ ಮಾಡಿ ತೋರಿಸಿದ್ದಾರೆ. ಈ ಬಾರಿಯ ಅಷ್ಟಮಿ ದಿನ ವೇಷ ಹಾಕಿ ಸುಮಾರು ರೂ. 7.14 ಲಕ್ಷ ಹಣವನ್ನು ಒಟ್ಟು ಮಾಡಿ 8 ಮಂದಿ ಅನಾರೋಗ್ಯ ಪೀಡಿತ ಮಕ್ಕಳಿಗೆ ಸೆಪ್ಟೆಂಬರ್ 16 ರಂದು ಜಿಲ್ಲೆಯ ವಿವಿಧ ಗಣ್ಯರ ಮೂಲಕ ಹಸ್ತಾಂತರ ಮಾಡಲಿದ್ದಾರೆ.
ಈ ಬಗ್ಗೆ ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಕಳೆದ ಆರು ವರ್ಷಗಳಲ್ಲಿ ಒಟ್ಟು 33 ಮಕ್ಕಳಿಗೆ ರೂ 79 ಲಕ್ಷ ಹಣವನ್ನು ವಿವಿಧ ರೀತಿಯ ವೇಷ ಧರಿಸಿ ಅದರಿಂದ ಒಟ್ಟಾದ ಹಣವನ್ನು ಹಂಚಲಾಗಿದೆ. ಈ ಬಾರಿ ಕೂಡ ಹಾಲಿವುಡ್ ಸಿನಿಮಾದ ಡಾರ್ಕ್ ಅಲೈಟ್ ವೇಷ ಹಾಕಿದ್ದು ಕೊರೋನಾ ನಡುವೆಯೂ ಸಹ ಜನರು ನನ್ನ ಒಳ್ಳೆಯ ಉದ್ದೇಶಕ್ಕೆ ಬೆಂಬಲ ನೀಡಿದ್ದಾರೆ ಎಂದರು.
ಈ ಬಾರಿ ಹಣ ಸಂಗ್ರಹ ಡಬ್ಬಿಗೆ ರೂ 4, 77,740 ಹಣ ಸಂಗ್ರಹವಾಗಿದ್ದು ಅದರೊಂದಿಗೆ ಚೆಕ್ ಮೂಲಕ ಹಾಗೂ ನೇರ ಖಾತೆಗೆ ಒಟ್ಟಾಗಿ ರೂ 7, 17, 350 ಹಣ ಸಂಗ್ರಹವಾಗಿದ್ದು 8 ಮಕ್ಕಳ ಅನಾರೋಗ್ಯದ ತೀವ್ರತೆಯನ್ನು ಗಮನಿಸಿ ಹಣವನ್ನು ಹಂಚಲಾಗುವುದು ಎಂದರು.
ಸೆಪ್ಟೆಂಬರ್ 16 ರಂದು ಸಂಜೆ ಕಟಪಾಡಿ ಪೇಟೆಬೆಟು ಶ್ರೀ ಬಬ್ಬುಸ್ವಾಮಿ ಕೊರಗಜ್ಜ ದೈವಸ್ಥಾನದ ಆವರಣದಲ್ಲಿ ಕೇಮಾರು ಮಠದ ಶ್ರೀ ಈಶ ವಿಠಲದಾಸ ಸ್ವಾಮೀಜಿ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ದಯಾನಂದ ಕತ್ತಲ್ ಸಾರ್, ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಪೊಲೀಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ್, ಉದಯವಾಣಿ ಪತ್ರಿಕೆಯ ಡಿಜಿಟಲ್ ಮಾರ್ಕೆಂಟಿಂಗ್ ಮುಖ್ಯಸ್ಥರಾದ ಹರೀಶ್ ಭಟ್, ರವಿ ಫ್ರೆಂಡ್ಸ್ ಕಟಪಾಡಿ ಇದರ ಮಾರ್ಗದರ್ಶಕರಾದ ಮಹೇಶ್ ಶೆಣೈ ಕಟಪಾಡಿ ಪೇಟೆಬೆಟು ಶ್ರೀ ಬಬ್ಬುಸ್ವಾಮಿ ಕೊರಗಜ್ಜ ದೈವಸ್ಥಾನದ ಮೊಕ್ತೇಸರರಾದ ಹರೀಶ್ಚಂದ್ರ ಪಿಲಾರ್ ಉಪಸ್ಥಿತಿಯಲ್ಲಿ ಹಂಚಲಾಗುತ್ತದೆ ಎಂದರು