ಅನಿವಾಸಿ ವೈದ್ಯ, ಸಮಾಜ ಸೇವಕ ಡಾ. ಎ.ಕೆ. ಖಾಸಿಮ್ ಇನ್ನಿಲ್ಲ

Spread the love

ಅನಿವಾಸಿ ವೈದ್ಯ, ಸಮಾಜ ಸೇವಕ ಡಾ. ಎ.ಕೆ. ಖಾಸಿಮ್ ಇನ್ನಿಲ್ಲ

ಸೌದಿ ಅರೇಬಿಯಾದ ಮಕ್ಕಾ ನಗರದ ಝಹ್ರತುಲ್ ಕುದಾಯಿ ಏಷಿಯನ್ ಪಾಲಿಕ್ಲಿನಿಕ್ ಆಸ್ಪತ್ರೆಯಲ್ಲಿ ಮುಖ್ಯ ವೈದ್ಯಾಧಿಕಾರಿಯಾಗಿದ್ದ ಉಪ್ಪಳ ಮೂಲದ, ಪ್ರಸ್ತುತ ಮಂಗಳೂರು ಫಳ್ನೀರ್ ನಿವಾಸಿಯಾಗಿದ್ದ ಡಾ. ಎ.ಕೆ. ಖಾಸಿಮ್ (51) ಮಕ್ಕಾದ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಗುರುವಾರ ರಾತ್ರಿ ಸೌದಿ ಸಮಯ ರಾತ್ರಿ 11 ಗಂಟೆಗೆ ಜಿದ್ದಾಲ್ಲಿರುವ ಸಂಬಂಧಿಕರ ಜೊತೆಗೆ ಫೋನಲ್ಲಿ ಮಾತನಾಡಿ ಮರುದಿನ ಶುಕ್ರವಾರ ಜುಮಾ ನಮಾಝ್ ಗೆ ಜಿದ್ದಾಕ್ಕೆ ಆಗಮಿಸುವ ಬಗ್ಗೆ ತಿಳಿಸಿದ್ದರು. ಆದರೆ ಶುಕ್ರವಾರ ಎಷ್ಟೇ ಫೋನ್ ಮಾಡಿದರೂ ಸ್ವೀಕರಿಸದೇ ಇದ್ದಾಗ ಸಂಶಯಗೊಂಡು ಮನೆಯ ಬಾಗಿಲು ಮುರಿದಾಗ ಡಾ. ಖಾಸಿಮ್ ಅವರ ದೇಹ ಮನೆಯ ಕಿಚನ್ ಸಮೀಪ ನಿಶ್ಚಲವಾಗಿ ಬಿದ್ದಿತ್ತು. ಅವರು ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗ್ಗಿನ ಮಧ್ಯೆ ಹೃದಯಾಘಾತದಿಂದ ನಿಧನರಾಗಿರಬಹುದೆಂದು ಸಂಶಯಿಸಲಾಗಿದೆ.

ಡಾ. ಎ.ಕೆ. ಖಾಸಿಮ್ ಅವರು ಮೂಲತಃ ಕನ್ಯಾನದ ಕಡೂರಿನ ತರವಾಡಿನವರು. ಅವರ ತಂದೆ ಅಬ್ದುಲ್ ಖಾದರ್ ಬಳಿಕ ಉಪ್ಪಳದ ಪೈವಳಿಕೆಯ ಅಟ್ಟೆಗೋಳಿಯಲ್ಲಿ ವಾಸಿಸುತ್ತಿದ್ದರು. ಡಾ. ಖಾಸಿಮ್ ಪ್ರಸ್ತುತ ಮಂಗಳೂರಿನ ಫಳ್ನೀರ್ ನಲ್ಲಿ ಕುಟುಂಬ ಸಹಿತ ವಾಸ ಮಾಡುತ್ತಿದ್ದರು. ಕಳೆದ ಒಂದು ವರ್ಷದ ಹಿಂದೆ ಊರಿಗೆ ಬಂದು ಸೌದಿಗೆ ತೆರಳಿದ್ದರು. ಕಳೆದ 26 ವರ್ಷಗಳಿಂದ ಉಪ್ಪಳ, ಮಂಗಳೂರು, ಸೌದಿ ಅರೇಬಿಯಾದಲ್ಲಿ ವೈದ್ಯಕೀಯ ಸೇವೆ ಸಲ್ಲಿಸಿ ಜನಮನ್ನಣೆ ಗಳಿಸಿದ್ದರು. ಮಂಗಳೂರು ಕೆ.ಎಂ.ಸಿ.ಯಲ್ಲಿ ಎಂಬಿಬಿಎಸ್ ಮುಗಿಸಿ ಎಮರ್ಜೆನ್ಸಿ ಹೆಲ್ತ್ ಕೋರ್ಸ್ ಮಾಡಿದ್ದರು. ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಯ ಹಳೆ ವಿದ್ಯಾರ್ಥಿಯಾಗಿದ್ದರು. ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಸಹಪಾಠಿಯಾಗಿದ್ದ ಖಾಸಿಮ್ ಅವರ ಜೊತೆ ಅನ್ಯೋನ್ಯವಾಗಿದ್ದರು. ಖಾಸಿಮ್ ಸಂಘಟನಾತ್ಮಕವಾಗಿ ತೊಡಗಿಸಿಕೊಂಡಿದ್ದು, ಮಂಗಳೂರು ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಇದರ ಎನ್ನಾರೈ ಸದಸ್ಯರಾಗಿ ಸಕ್ರಿಯರಾಗಿದ್ದರು. ಎಂ.ಫ್ರೆಂಡ್ಸ್ ನ ಪ್ರತಿಯೊಂದು ಸೇವಾ ಚಟುವಟಿಕೆಗಳಿಗೂ ದೇಣಿಗೆ ನೀಡುತ್ತಿದ್ದರು. ಜಾತಿ ಮತ ನೋಡದೇ ನೂರಾರು ವಿಕಲಾಂಗರಿಗೆ ಗಾಲಿಕುರ್ಚಿ ಪ್ರಾಯೋಜಿಸಿ ಸಂತ್ರಸ್ಥರ ನೋವಿಗೆ ಸ್ಪಂದಿಸಿದ್ದಾರೆ. ಸೌದಿಗೆ ಉದ್ಯೋಗಕ್ಕೆ ತೆರಳುವ ಮುನ್ನ ಉಪ್ಪಳದ ಕೈಕಂಬದಲ್ಲಿ ಸೊಸೈಟಿ ಆಸ್ಪತ್ರೆ ತೆರೆದು ಬಡರೋಗಿಗಳ ಪಾಲಿಗೆ ನೆರವಾಗುತ್ತಿದ್ದರು. ಮಂಗಳೂರಿನಲ್ಲಿ ಕೂಡಾ ಹಲವಾರು ಕಾರುಣ್ಯ ಯೋಜನೆಯಲ್ಲಿ ಸಕ್ರಿಯರಾಗಿದ್ದರು. ಮಂಗಲ್ಪಾಡಿ ಅರ್ಬನ್ ಸೇವಾ ಸಹಕಾರಿ ಬ್ಯಾಂಕಿನ ಸ್ಥಾಪಕಾಧ್ಯಕ್ಷರಾಗಿದ್ದ ಡಾ. ಖಾಸಿಮ್ ಸರಳ ಸಜ್ಜನಿಕೆಯ ವ್ಯಕ್ತಿತ್ವ ಉಳ್ಳವರು. ಕಳೆದ ಕೆಲ ವರ್ಷಗಳಿಂದ ಪವಿತ್ರ ಮಕ್ಕಾ ನಗರದಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದ ಡಾ. ಖಾಸಿಮ್ ಊರಿನಿಂದ ಅಲ್ಲಿಗೆ ತೆರಳುತ್ತಿದ್ದ ಪ್ರವಾಸಿಗರ ಪಾಲಿಗೆ ಆಪತ್ಬಾಂಧವರಾಗುತ್ತಿದ್ದರು. ಹಜ್ ಸಂದರ್ಭ ಬಡರೋಗಿಗಳ ಶುಶ್ರೂಷೆಯಲ್ಲಿ ದಿನದ 24 ಗಂಟೆಯೂ ಸೇವೆ ಸಲ್ಲಿಸಿ ಪ್ರಶಸ್ತಿಗೆ ಭಾಜನರಾಗಿದ್ದರು. ಕಳೆದ ಬಾರಿ ಊರಿಗೆ ಬರುವ ಸಂದರ್ಭ ಅದೇ ವಿಮಾನದಲ್ಲಿ ಓರ್ವ ಮಹಿಳೆಗೆ ಹೃದಯಾಘಾತವಾದಾಗ ಅವರಿಗೆ ನಿದ್ದೆಗೆಟ್ಟು ವಿಮಾನದಲ್ಲೇ ತುರ್ತು ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದರು. ಈ ವಿಚಾರ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ಯಾರೇ ಕಷ್ಟದಲ್ಲಿದ್ದರೂ ಜಾತಿ ಮತ ನೋಡದೇ ಸಹಾಯಕ್ಕೆ ನೆರವಾಗುತ್ತಿದ್ದ ಡಾ. ಖಾಸಿಮ್ ಅವರ ಅಕಾಲಿಕ ನಿಧನವು ದೇಶ ವಿದೇಶದ ಸಹಸ್ರಾರು ಹಿತೈಷಿಗಳಿಗೆ ನೋವು ತಂದಿದೆ. ಡಾ. ಖಾಸಿಮ್ ಅವರು ತಮ್ಮ ಹೆತ್ತವರನ್ನಲ್ಲದೇ ಪತ್ನಿ, ಇಬ್ಬರು ಮಕ್ಕಳಾದ ಹಿರಿಯ ಪುತ್ರ ಡಾ. ಕಾಮಿಲ್, ಕಿರಿಯ ಪುತ್ರ ಎಂಬಿಬಿಎಸ್ ವಿದ್ಯಾರ್ಥಿ ಶಾಮಿಲ್ ಸೇರಿದಂತೆ ಕುಟುಂಬಿಕರನ್ನು, ಹಿತೈಷಿಗಳನ್ನು ಅಗಲಿದ್ದಾರೆ.


Spread the love