
ಅನೀರಿಕ್ಷಿತ ಮಳೆ: ಉಡುಪಿ ನಗರದಲ್ಲಿ ಕೃತಕ ನೆರೆ ಸೃಷ್ಟಿ, ಮನೆಗಳಿಗೆ ನುಗ್ಗಿದ ನೆರೆ
ಉಡುಪಿ: ಮಂಗಳವಾರ ನಗರದಲ್ಲಿ ಸುರಿದ ಅನಿರೀಕ್ಷಿತ ಮಳೆಯಿಂದ ಬಹುತೇಕ ಜನಜೀವನ ಅಸ್ತವ್ಯಸ್ತಗೊಂಡಿತು. ಉಡುಪಿ ನಗರದ ವಿವಿಧೆಡೆ ಕೃತಕ ನೆರೆ ಸೃಷ್ಟಿಯಾಗಿ ಜನರು ಪರದಾಡುವ ಪರಿಸ್ಥಿತಿ ಉಂಟಾಯಿತು.
ರಾತ್ರಿ ಇಡೀ ಸುರಿದ ಧಾರಾಕಾರ ಮಳೆಯಿಂದಾಗಿ ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ನಗರದ ಬೈಲಕೆರೆ, ಮಠದ ಬೆಟ್ಟು, ಕೊಡವೂರು, ಕಲ್ಮಾಡಿ ಪರಿಸರದಲ್ಲಿ ಕೃತಕ ನೆರೆ ಉಂಟಾಗಿದ್ದು ನಗರಾಡಳಿತ ಮಧ್ಯರಾತ್ರಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಿದೆ.
ಮುಂಜಾನೆಯ ವೇಳೆ ಮಳೆ ಕಡಿಮೆಯಾಗಿದ್ದು ನೆರೆ ಇಳಿಮುಖವಾಗುತ್ತಿದೆ. ಬುಧವಾರ ಕೂಡ ಜಿಲ್ಲೆಯಲ್ಲಿ ಎಲ್ಲೋ ಅಲರ್ಟ್ ಘೋಷಣೆಯಾಗಿದ್ದು ಮಧ್ಯಾಹ್ನದ ವೇಳೆಗೆ ಮತ್ತೆ ಮಳೆ ಆರಂಭವಾಗುವ ಸಾಧ್ಯತೆ ಇದೆ.
ಅ.16ರವರೆಗೂ ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಅನೀರಿಕ್ಷಿತ ಮಳೆಯಿಂದ ತಗ್ಗು ಪ್ರದೇಶದಲ್ಲಿರುವ ತೋಟ, ಗದ್ದೆಗಳಿಗೆ ನೀರು ನುಗಿದ್ದು ರೈತರು ನಷ್ಟ ಅನುಭವಿಸಿದ್ದಾರೆ. ಇನ್ನೊಂದೆಡೆ ಗದ್ದೆಯಲ್ಲಿ ಕಟಾವಿಗೆ ಸಿದ್ಧವಾಗಿರುವ ಭತ್ತ ಪೈರು ಅಡ್ಡ ಬಿದ್ದು, ರೈತರಲ್ಲಿ ಆತಂಕಕ್ಕೂ ಕಾರಣವಾಗಿದೆ.
ಬಂಗಾಳ ಕೊಲ್ಲಿಯ ಉತ್ತರ ಅಂಡಮಾನ್ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆಯೂ ಇದ್ದು, ಇವೆಲ್ಲ ಮಳೆಗೆ ಪೂರಕ ವಾತಾರಣವಾಗಿ ಪರಿಣಮಿಸಿದೆ. ಅ.16ರವರೆಗೂ ಗುಡುಗು ಸಹಿತ ಮಳೆಯಾಗಲಿದೆ. ಇನ್ನೂ ನಾಲ್ಕು ದಿನ ಯೆಲ್ಲೋ ಅಲರ್ಟ್ ಮುಂದುವರಿದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.