ಅನುದಾನ ಸಮರ್ಪಕ ಬಳಕೆಗೆ ಸಚಿವ ಬಿ.ವಿ. ಬಸವರಾಜ್ ಸೂಚನೆ

Spread the love

ಅನುದಾನ ಸಮರ್ಪಕ ಬಳಕೆಗೆ ಸಚಿವ ಬಿ.ವಿ. ಬಸವರಾಜ್ ಸೂಚನೆ

ಮಂಗಳೂರು: ರಾಜ್ಯ ಸರ್ಕಾರವು ಮಂಗಳೂರು ಮಹಾನಗರ ಪಾಲಿಕೆಗೆ ನೀಡಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ನಿಗಧಿತ ಕಾಲಮಿತಿಯಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸುವಂತೆ ನಗರಾಭಿವೃದ್ಧಿ ಸಚಿವರಾದ ಬಿ.ವಿ. ಬಸವರಾಜ್ (ಬೈರತಿ) ಅವರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಅವರು ಫೆ.28ರ ಮಂಗಳವಾರ ಮಂಗಳೂರು ನಗರದ ಹೊರವಲಯದಲ್ಲಿ ಹಮ್ಮಿಕೊಂಡಿದ್ದ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

15ನೇ ಹಣಕಾಸು ಆಯೋಗ, ನಗರೋತ್ಥಾನ, ಮಹಾತ್ಮಾ ಗಾಂಧಿ ನಗರ ನೈರ್ಮಲ್ಯ ಯೋಜನೆ, ಎಸ್ ಎಫ್ ಸಿ ವಿಶೇಷ ಅನುದಾನಗಳು ಸೇರಿದಂತೆ ಹಲವು ಯೋಜನೆಗಳಡಿ ಸರ್ಕಾರ ಬಿಡುಗಡೆ ಮಾಡುವ ಅನುದಾನ ನಿಗದಿತ ಕಾಲಮಿತಿಯಲ್ಲಿ ಬಳಕೆಯಾಗಿ ಅರ್ಹ ಫಲಾನುಭವಿಗಳಿಗೆ ಅದರ ಸೌಲಭ್ಯ ದೊರಕಬೇಕು, ಯಾವುದೇ ಕಾರಣಕ್ಕೂ ಆ ಅನುದಾನ ಲ್ಯಾಪ್ಸ್ ಆಗದಂತೆ ಎಚ್ಚರ ವಹಿಸಬೇಕು, ಯಾವುದೇ ಕಾಮಗಾರಿಗಳು ಬಾಕಿ ಉಳಿಯಬಾರದು ಈ ದಿಸೆಯಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ವಿಶೇಷವಾಗಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಯಾವುದೇ ಸಮಸ್ಯೆ ಎದುರಾಗಬಾರದು, ನಗರ ಸೌಂದರ್ಯೀಕರಣದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು, ಇದೀಗ ಬೇಸಿಗೆ ಆರಂಭವಾಗಿರುವುದರಿಂದ ಕುಡಿಯುವ ನೀರಿನ ಪೂರೈಕೆಗೆ ಹೆಚ್ಚಿನ ಆದ್ಯತೆ ನೀಡಬೇಕು, ಸುರತ್ಕಲ್ ನಲ್ಲಿ 82 ಕೋಟಿ ರೂ.ಗಳಲ್ಲಿ ನಿರ್ಮಾಣಗೊಂಡಿರುವ ಹಾಗೂ ಮಂಗಳೂರಿನ ಕದ್ರಿ ಹಾಗೂ ಕಂಕನಾಡಿಯಲ್ಲಿ ನಿರ್ಮಾಣಗೊಂಡಿರುವ ಮಾರುಕಟ್ಟೆಗಳನ್ನು ಮುಂಬರುವ 10 ದಿನದೊಳಗೆ ಲೋಕಾರ್ಪಣೆಗೊಳಿಸಬೇಕು ಎಂದರು.

ರಾತ್ರಿಯಲ್ಲಿ ಬೀದಿ ದೀಪಗಳ ಕಾರ್ಯನಿರ್ವಹಣೆಯಲ್ಲಿ ಯಾವುದೇ ಲೋಪ ಆಗಬಾರದು, ಫುಟ್ ಪಾತ್ ವ್ಯಾಪಾರಿಗಳಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಬೇಕು, ಸ್ಮಾರ್ಟ್ ಸಿಟಿ ಲಿಮಿಟೆಡ್, ಮಂಗಳೂರು ಮಹಾನಗರ ಪಾಲಿಕೆ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸರ್ಕಾರದ ಹಂತದಲ್ಲಿ ಆಗಬೇಕಾಗಿರುವ ಯಾವುದೇ ಕೆಲಸಗಳು ಬಾಕಿ ಉಳಿದಿದ್ದಲ್ಲಿ ಅಧಿಕಾರಿಗಳೇ ಖುದ್ದಾಗಿ ಹಾಜರಾಗಿ ಅದನ್ನು ಕೂಡಲೇ ಪೂರ್ಣಗೊಳಿಸಿಕೊಳ್ಳಬೇಕು ಹಾಗೂ ಮಂಗಳೂರು ಮಹಾನಗರ ಪಾಲಿಕೆ ಬಜೆಟ್ ಮಂಡಿಸುವಂತೆ ಈ ಸಂದರ್ಭದಲ್ಲಿ ಅವರು ತಿಳಿಸಿದರು.

ಬಂಟ್ವಾಳ ಶಾಸಕರಾದ ರಾಜೇಶ್ ನಾಯಕ್, ಮೂಡ ಅಧ್ಯಕ್ಷ ರವಿಶಂಕರ್ ಮಿಜಾರು, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಚೆನ್ನಬಸಪ್ಪ, ಸ್ಮಾರ್ಟ್ ಸಿಟಿ ಅಧಿಕಾರಿ ಅರುಣ್ ಪ್ರಭ, ಮೂಡ ಆಯುಕ್ತ ಭಾಸ್ಕರ್, ಸ್ಮಾರ್ಟ್ ಸಿಟಿ ಲಿಮಿಟೆಡ್, ಮಂಗಳೂರು ಮಹಾನಗರ ಪಾಲಿಕೆ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ, ಕೆ ಐ ಯು ಡಿ ಎಫ್ ಸಿ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.


Spread the love