ಅನುಮಾನದ ಪಿಶಾಚಿ ಗಂಡನಿಂದ ಹೆಂಡತಿಯ ಕೊಲೆ

Spread the love

ಅನುಮಾನದ ಪಿಶಾಚಿ ಗಂಡನಿಂದ ಹೆಂಡತಿಯ ಕೊಲೆ

ಹಾಸನ: ಸದಾ ಹೆಂಡತಿ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದ ಗಂಡನೊಬ್ಬ ಆಕೆಯನ್ನು ಹತ್ಯೆಗೈದು ತಾನು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೇಲೂರು ತಾಲೂಕಿನ ಬಿಕ್ಕೋಡು ಹೋಬಳಿಯ ಚಂದನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಚಂದನಹಳ್ಳಿ ಗ್ರಾಮದಲ್ಲಿ ಅಂಗನವಾಡಿ ಶಿಕ್ಷಕಿಯಾಗಿದ್ದ ಪ್ರೇಮಾ(40) ಗಂಡನಿಂದಲೇ ಹತ್ಯೆಗೀಡಾದ ದುರ್ದೈವಿ. ಈಕೆಯನ್ನು ಪತಿ ಶಾಂತೋಜಿರಾವ್ ಕೊಲೆ ಮಾಡಿದ್ದು, ಈಗ ಪೊಲೀಸ್ ಅತಿಥಿಯಾಗಿದ್ದಾನೆ.

ಸದಾ ಹೆಂಡತಿ ಮೇಲೆ ಅನುಮಾನ ಪಡುತ್ತಿದ್ದ ಈತ ಮದ್ಯ ಸೇವಿಸಿಬಂದು ಜಗಳ ತೆಗೆದು ಹೊಡೆಯುತ್ತಿದ್ದನು ಎನ್ನಲಾಗಿದೆ. ಈತನ ಹಿಂಸೆ ತಾಳಲಾರದೆ ಆತನ ಮೊದಲ ಹೆಂಡತಿ ದೂರವಾಗಿದ್ದಳು. ಎರಡನೇ ಹೆಂಡತಿ ಪ್ರೇಮಾಳೊಂದಿಗೆ ಅದೇ ಚಾಳಿಯನ್ನು ಮುಂದುವರೆಸಿದ್ದನು. ಹೀಗಾಗಿ ಈತನ ಸಹವಾಸವೇ ಬೇಡವೆಂದು ಪತ್ನಿ ಪ್ರೇಮಾ ಮಕ್ಕಳೊಂದಿಗೆ ಪ್ರತ್ಯೇಕವಾಗಿರಲು ಯೋಚಿಸಿದ್ದಳು.

ಈ ನಡುವೆ ತಾಯಿ ಮನೆ ಸೇರಿದ್ದ ಪ್ರೇಮಾಳ ಮನೆಗೆ ಉಪಾಯ ಮಾಡಿಕೊಂಡು ಬಂದ ಶಾಂತೋಜಿರಾವ್ ರಾತ್ರಿ ವೇಳೆ ಮಕ್ಕಳೊಂದಿಗೆ ಮಲಗಿದ್ದ ಪತ್ನಿಯನ್ನು ಮಚ್ಚಿನಿಂದ ಕುತ್ತಿಗೆಗೆ ಕೊಚ್ಚಿ ಕೊಲೆ ಮಾಡಿದ್ದಾನೆ. ನಂತರ ಇಬ್ಬರು ಮಕ್ಕಳನ್ನು ಮನೆಯಲ್ಲಿ ಕೂಡಿ ಬೀಗ ಹಾಕಿ ತಪ್ಪಿಸಿಕೊಂಡು ಹೋಗಿದ್ದನು.

ಈ ಸಂದರ್ಭ ಭಯಗೊಂಡ ಮಕ್ಕಳು ಮನೆಯ ಹೆಂಚು ತೆಗೆದು ಜೋರಾಗಿ ಕೂಗಿ ಕೊಂಡಾಗ ಅಕ್ಕಪಕ್ಕದ ಮನೆಯವರು ಬಂದು ಬಾಗಿಲು ತೆರೆದು ನೋಡಿ ಅರೇಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪಿಎಸ್ ಐ ಸುರೇಶ್ ಮತ್ತು ಸಿಬ್ಬಂದಿ ಸ್ಥಳದ ಮಹಜರು ನಡೆಸಿದ್ದು, ಆ ನಂತರ ಹಂತಕ ಹುಡುಕಾಟ ನಡೆಸಿದ ವೇಳೆ ಆತ ಗ್ರಾಮದ ಮಾವಿನ ತೋಪಿಗೆ ಹೋಗಿ ತನ್ನ ಕುತ್ತಿಗೆ ಕೊಯ್ದು ಕೊಳ್ಳಲು ಮುಂದಾದಾಗ ಪೊಲೀಸರು ಆತನನ್ನು ವಶಕ್ಕೆ ಪಡೆದು ಚಿಕಿತ್ಸೆಗಾಗಿ ಬೇಲೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದು, ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.


Spread the love