ಅನೈತಿಕ ಚಟುವಟಿಕೆಯ ಅಡ್ಡೆಯಾದ ಸಂತೆಮರಹಳ್ಳಿ ಮಾರುಕಟ್ಟೆ

Spread the love

ಅನೈತಿಕ ಚಟುವಟಿಕೆಯ ಅಡ್ಡೆಯಾದ ಸಂತೆಮರಹಳ್ಳಿ ಮಾರುಕಟ್ಟೆ

ಚಾಮರಾಜನಗರ: ಜಿಲ್ಲೆಯ ಎರಡನೇ ಅತಿದೊಡ್ಡ ಮಾರುಕಟ್ಟೆಯಾಗಿರುವ ಸಂತೆಮರಹಳ್ಳಿಯ ಮಾರುಕಟ್ಟೆಯೀಗ ಅನೈತಿಕ ಚಟುವಟಿಕೆಯ ಕೇಂದ್ರವಾಗಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಸದ್ಯಕ್ಕೆ ಈ ಮಾರುಕಟ್ಟೆ ನಿರ್ಲಕ್ಷ್ಯಕ್ಕೊಳಗಾಗಿರುವುದರಿಂದಾಗಿ ಗಿಡಗಂಟಿಗಳು ಬೆಳೆದಿದ್ದು ರಾತ್ರಿಯಾಯಿತೆಂದರೆ ಕುಡುಕರು, ಪುಂಡ ಪೋಕರಿಗಳ ಅಡ್ಡೆಯಾಗುತ್ತಿದೆ. ಮಾರುಕಟ್ಟೆಯ ಅವರಣದ ಸುತ್ತ ತಡೆ ಗೋಡೆ ಇದ್ದರೂ ಇಲ್ಲದಂತಿರುವುದರಿಂದ ದನ ನಾಯಿಗಳು ಬಂದು ಹೋಗುತ್ತಿವೆ. ಅಲ್ಲಿಯೇ ಮಲಗಿರುತ್ತವೆ. ಸಂಬಂಧಪಟ್ಟವರು ಕೂಡ ಈ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.

ಈ ಮಾರುಕಟ್ಟೆಯು ಹತ್ತಾರು ಎಕರೆ ಪ್ರದೇಶವನ್ನು ಹೊಂದಿದ್ದು, ನಿರ್ವಹಣೆ ಕೊರತೆಯಿಂದಾಗಿ ಈಗ ಸುತ್ತ ಮುತ್ತ ಗಿಡ ಗಂಟಿಗಳು ಬೆಳೆದು ನಿಂತಿದ್ದು, ವಿಷ ಜಂತುಗಳ ಆವಾಸತಾಣವಾಗಿದೆ ಎಂದರೂ ತಪ್ಪಾಗಲಾರದು. ಸರ್ಕಾರ ಲಕ್ಷಾಂತರ ರೂ. ಹಣ ಖರ್ಚು ಮಾಡಿ ರೈತರ ಅನುಕೂಲಕ್ಕಾಗಿ ಮಳಿಗೆಗಳನ್ನ ನಿರ್ಮಿಸಿದರೂ ಅದನ್ನು ಸಮರ್ಪಕವಾಗಿ ಬಳಸದ ಕಾರಣ ಮತ್ತು ನಿರ್ವಹಣೆ ಕೊರತೆಯಿಂದಾಗಿ ಕಸ ಮತ್ತು ತ್ಯಾಜ್ಯದ ರಾಶಿಗಳು ಬಿದ್ದಿವೆ.

ರಾತ್ರಿಯಾಯಿತೆಂದರೆ ಕುಡುಕರ ಅಡ್ಡೆಯಾಗುತ್ತಿದೆ ಎಂಬುದಕ್ಕೆ ಇಲ್ಲಿ ಕುಡಿದು ಎಸೆದು ಹೋಗಿರುವ ಖಾಲಿ ಬಾಟಲಿಗಳು ಸಾಕ್ಷಿಯಾಗಿವೆ. ತ್ಯಾಜ್ಯವನ್ನು ವಿಲೇವಾರಿ ಮಾಡದ ಕಾರಣ ಮತ್ತು ನೀರು ಅಲ್ಲಲ್ಲಿ ನಿಂತ ಪರಿಣಾಮ ಸೊಳ್ಳೆಗಳು ಉತ್ಪತ್ತಿಯಾಗುತ್ತಿದ್ದು, ಇದರಿಂದ ಸಾಂಕ್ರಾಮಿಕ ರೋಗದ ಭಯವೂ ಕಾಡಲಾರಂಭಿಸಿದೆ.

ಇಲ್ಲಿ ಹತ್ತಾರು ಮಳಿಗೆಗಳಿದ್ದು ಇದರಿಂದ ಸಾಕಷ್ಟು ಪ್ರಮಾಣದಲ್ಲಿ ಆದಾಯ ಬರುತ್ತದೆ, ಈ ಆದಾಯವನ್ನು ಮಾರುಕಟ್ಟೆಯ ಅಭಿವೃದ್ಧಿಗೆ ಬಳಸಿ ಪರಿಸರ ನೈರ್ಮಲ್ಯ ಕಾಪಾಡಬಹುದು. ಆದರೆ ಜಿಲ್ಲಾ ಮಾರುಕಟ್ಟೆ ಅಧಿಕಾರಿಗಳು ಮಾತ್ರ ಕಣ್ಣ ಮುಚ್ಚಿ ಕುಳಿತಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದರೂ ಸಂಬಂಧ ಪಟ್ಟ ಜಿಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳು ಇತ್ತ ಗಮನ ಹರಿಸಿ ಸುತ್ತಮುತ್ತ ಸ್ವಚ್ಛತೆ ಕಾಪಾಡಿ ಘನ ತ್ಯಾಜ್ಯ ವಸ್ತುಗಳನ್ನ ವಿಲೇವಾರಿ ಮಾಡಿಸಲಿ ಎಂದು ಸ್ಥಳೀಯರು ಒತ್ತಾಯ ಮಾಡಿದ್ದಾರೆ.


Spread the love