ಅನೈತಿಕ ಮಾರ್ಗದಲ್ಲಿ ಶ್ರೀಮಂತರಾಗಲು ಪೈಪೋಟಿ: ನ್ಯಾ.ಎನ್. ಸಂತೋಷ್

Spread the love

ಅನೈತಿಕ ಮಾರ್ಗದಲ್ಲಿ ಶ್ರೀಮಂತರಾಗಲು ಪೈಪೋಟಿ: ನ್ಯಾ.ಎನ್. ಸಂತೋಷ್

ಮೈಸೂರು : ಸಮಾಜದಲ್ಲಿ ಇನ್ನೊಬ್ಬರ ಬದುಕನ್ನು ಕಸಿದುಕೊಂಡು ಅನೈತಿಕ ಮಾರ್ಗದಲ್ಲಿ ಶ್ರೀಮಂತರಾಗುವ ಮತ್ತು ಅಧಿಕಾರವನ್ನು ಪಡೆಯುವ ರೀತಿಯಲ್ಲಿ ಕೆಟ್ಟ ಪೈಪೋಟಿ ಹೆಚ್ಚಾಗುತ್ತಿದೆ ಎಂದು ಲೋಕಾಯುಕ್ತದ ವಿಶ್ರಾಂತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಗಡೆ ಆತಂಕ ವ್ಯಕ್ತಪಡಿಸಿದರು.

ಗ್ಲೋಬಲ್ ಎಜುಕೇಶನ್ ಟ್ರಸ್ಟ್ ಹಾಗೂ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಹೂಟಗಳ್ಳಿಯ ದಕ್ಷ ಕಾಲೇಜು ಸಭಾಂಗಣದಲ್ಲಿ ನಡೆದ ವಿವಿಧ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದಕ್ಷ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷರಾದ ಡಾ.ಪಿ. ಜಯಚಂದ್ರ ರಾಜು ಅವರ ‘ಇಂಡಿಯಾ ಅಂಡ್ ದಿ ಯುನೈಟೆಡ್ ನೇಷನ್ಸ್’ ಇಂಗ್ಲಿಷ್ ಪುಸ್ತಕ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಕಾನೂನಿನ ಚೌಕಟ್ಟಿನಲ್ಲಿ ಶ್ರೀಮಂತರಾದರೆ, ಅಧಿಕಾರ ಪಡೆದರೆ ಅಪಾಯಕಾರಿ ಅಲ್ಲ. ಆದರೆ, ದುರಾಸೆಯ ಕಾರಣಕ್ಕೆ ತುಂಬಾ ಮಂದಿ ಅಡ್ಡ ಮಾರ್ಗ ಹಿಡಿದಿದ್ದಾರೆ. ಜೈಲಿಗೆ ಹೋಗಿಬಂದ ಭ್ರಷ್ಟಾಚಾರಿಗಳನ್ನು ಹಾರ ಹಾಕಿ ಭರ್ಜರಿಯಾಗಿ ಸ್ವಾಗತಿಸಿದರೆ ಕೆಟ್ಟ ಸಂದೇಶ ಕೊಡುತ್ತದೆ. ಯಾವುದೇ ಮುಲಾಜಿಲ್ಲದೆ ತಪ್ಪು ಮಾಡಿದವರನ್ನು‌ ಸಮಾಜ ಬಹಿಷ್ಕರಿಸಬೇಕು ಎಂದು ಕರೆ ನೀಡಿದರು.

ತೃಪ್ತಿ ಎಂಬುದನ್ನು ಕಂಡುಕೊಳ್ಳದಿದ್ದರೆ ನೈತಿಕ ಜೀವನವೆಂಬುದು ಅಸಾಧ್ಯವಾಗುತ್ತದೆ. ಇತರರ ಕುರಿತು ಮಾನವೀಯತೆಯೇ ನಮ್ಮ ಬದುಕಿನ ಚಾಲಕ ಶಕ್ತಿಯಾಗಬೇಕು. ಇವೆರಡನ್ನೂ ಸಾಧಿಸದೇ ಮಾಡುವ ಕೆಲಸಗಳು ಸಮಾಜಕ್ಕೆ ಅಹಿತವಾಗುವ ಸಾಧ್ಯತೆಯೇ ಹೆಚ್ಚು. ಯುವಜನರು, ವಿದ್ಯಾರ್ಥಿಗಳು ತೃಪ್ತಿ ಮತ್ತು ಮಾನವೀಯತೆಯ ಗುಣ ಬೆಳೆಸಿಕೊಳ್ಳಬೇಕು ಎಂದರು.

ಇಡೀ ಸಮಾಜ ಸೇವೆಗಾಗಿ ಕಾಯುತ್ತಿದೆ. ವಿದ್ಯಾರ್ಥಿಗಳು ಈ ಸೇವಾ ಮನೋಭಾವ ಮೈಗೂಡಿಸಿಕೊಳ್ಳಬೇಕು. ಕುವೆಂಪು ಅವರು ಪ್ರತಿಪಾದಿಸಿದ ವಿಶ್ವಮಾನವ ಮೌಲ್ಯವನ್ನು ಪಾಲಿಸುವ ಮೂಲಕ ಶಾಂತಿ ಮತ್ತು ಸೌಹಾರ್ದ ವಾತಾವರಣ ನಿರ್ಮಿಸಲು‌ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ತಿನ ಮಾಜಿ‌ ಶಾಸಕ ಡಿ.ಎಸ್. ವೀರಯ್ಯ ‘ರಾಜಕೀಯ, ಮಾಧ್ಯಮ, ಸಾಹಿತ್ಯ ವ್ಯಾಪಾರೀಕರಣಗೊಂಡಿವೆ. ಅತಿಯಾದ ಆಸೆಯಿಂದ ಸಮಾಜ ರೋಗಗ್ರಸ್ತವಾಗಿದೆ. ಜಾತಿ ವ್ಯವಸ್ಥೆಯಿಂದ ಕೊಳೆತು ನಾರುತ್ತಿದೆ. ಆದರ್ಶಗಳು ಕಣ್ಮರೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ಬುದ್ಧ, ಬಸವ, ಅಂಬೇಡ್ಕರ್, ಕುವೆಂಪು ಅವರ ಆದರ್ಶಗಳು ನಮಗೆ ಬೆಳಕಾಗಿವೆ’ ಎಂದರು.

ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಹಾಗೂ ಸಾಹಿತಿ ಟಿ. ಸತೀಶ್ ಜವರೇಗೌಡ ಸಮಾರಂಭದ‌ ಅಧ್ಯಕ್ಷತೆ ವಹಿಸಿದ್ದರು. ಪಂಚಾಂಗ ಕರ್ತರಾದ ಡಾ. ಮೂಗೂರು ಮಧು ದೀಕ್ಷಿತ್ ಗುರೂಜಿ ದಿವ್ಯ ಸಾನಿಧ್ಯ ವಹಿಸಿದ್ದರು. ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಎಸ್.ಎ. ಮೋಹನ್ ಕೃಷ್ಣ ಪುಸ್ತಕ ಕುರಿತು ಮಾತನಾಡಿದರು. ಪುಸ್ತಕದ ಕರ್ತೃ ಡಾ.ಪಿ. ಜಯಚಂದ್ರ ರಾಜು, ಕಿರುತೆರೆ ನಟಿ ಭಾರತಿ ಹೆಗಡೆ, ಸಮಾಜ ಸೇವಕ ಗೋವಿಂದಹಳ್ಳಿ ಕೃಷ್ಣೇಗೌಡ, ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಡಾ. ಗುಣವಂತ ಮಂಜು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.


Spread the love