
ಅಪ್ಪು ಅಭಿಮಾನಿಯಿಂದ ಸೈಕಲ್ ನಲ್ಲಿ ದೇಶ ಪರ್ಯಟನೆ
ಗುಂಡ್ಲುಪೇಟೆ: ನಟ ಪುನೀತ್ ರಾಜಕುಮಾರ್ ಅವರ ಅಭಿಮಾನಿಯಾದ ತಮಿಳುನಾಡಿನ ಯುವಕನೊಬ್ಬ ಒಂದೂವರೆ ವರ್ಷದಿಂದ ದೇಶಾದ್ಯಂತ ಸೈಕಲ್ ಸವಾರಿ ಮಾಡುತ್ತಿದ್ದು, ಈ ಪ್ರಯಾಣವನ್ನು ಅಪ್ಪು ಅವರಿಗೆ ಸಮರ್ಪಿಸಿರುವುದು ವಿಶೇಷವಾಗಿದೆ.
ಕೊಯಮತ್ತೂರು ಬಳಿಯ ಪೊಳ್ಳಾಚಿ ಗ್ರಾಮದ 26 ವರ್ಷದ ಮುತ್ತು ಸೆಲ್ವನ್, ಅಪ್ಪು ಅಭಿಮಾನಿಯಾಗಿದ್ದು, ಚಾಮರಾಜನಗರದ ಮಾರ್ಗವಾಗಿ ಗುಂಡ್ಲುಪೇಟೆಗೆ ಬಂದಿದ್ದು ಸೈಕಲ್‌ನಲ್ಲಿ ದೇಶ ಪರ್ಯಟನೆ ಮಾಡುತ್ತಿರುವ ಬಗ್ಗೆ ಅನುಭವ ಹಂಚಿಕೊಂಡಿದ್ದಾರೆ. ಮುತ್ತು ಸೆಲ್ವನ್ ತಮಿಳುನಾಡಿನಿಂದ 2021 ಡಿಸೆಂಬರ್ 21 ರಂದು ಸೈಕಲ್ ಸವಾರಿ ಆರಂಭಿಸಿ ಒಟ್ಟು 1111 ದಿನಗಳನ್ನು ಕಳೆದಿದ್ದಾರೆ. ಈ ಅವಧಿಯಲ್ಲಿ ಅವರು 34.300 ಕಿ.ಮೀ.ಗಳ ದೂರ ಸಾಗುವ ಗುರಿ ಹೊಂದಿದ್ದು ಇದುವರೆಗೆ ಅವರು 18,600 ಕಿಲೋ ಮೀಟರ್ ಕ್ರಮಿಸಿದ್ದಾರೆ. ಇನ್ನೂ 13,700 ಕಿ.ಮೀ. ಸೈಕ್ಲಿಂಗ್ ಮಾಡಬೇಕಿದೆ.
ಪುನೀತ್ ಅವರ ವ್ಯಕ್ತಿತ್ವ ಮತ್ತು ಗುಣಗಳ ಬಗ್ಗೆ ಅರಿವು ಮೂಡಿಸುವ ಜೊತೆಗೆ, ಭಾರತದ ಎಲ್ಲ ನದಿ ಜೋಡಿಸಿ, ದೇಶದ ಎಲ್ಲರನ್ನೂ ಭಾರತೀಯರಾಗಿ ನೋಡಿ ಎನ್ನುವ ಸಂದೇಶ ಹೊತ್ತು ಅವರು ಸೈಕ್ಲಿಂಗ್ ಮಾಡುತ್ತಿದ್ದು, ಗಿನ್ನೆಸ್ ದಾಖಲೆ ಮಾಡುವ ಕಡೆ ದೃಷ್ಟಿನೆಟ್ಟಿದ್ದಾರೆ. ಹೋದ ಕಡೆಯಲ್ಲೆಲ್ಲಾ ಅವರ ಅಭಿಮಾನಿಗಳನ್ನು ಭೇಟಿ ಮಾಡುವುದು, ಶಾಲಾ ಕಾಲೇಜುಗಳಿಗೆ ಹೋಗಿ ಅರಿವು ಮೂಡಿಸುವುದು, ಪೊಲೀಸ್ ಠಾಣೆಗಳಿಗೆ, ಕಚೇರಿಗಳಿಗೆ ತೆರಳಿ ಅಪ್ಪು ಅವರ ಬಗ್ಗೆ ಹಾಗೂ ತಮ್ಮ ಪರ್ಯಟನೆ ಬಗ್ಗೆ ತಿಳಿಸುವ ಕೆಲಸ ಮಾಡುತ್ತಿದ್ದಾರೆ.
ಪ್ರತಿದಿನ 50 ಕಿಲೋಮೀಟರ್ ಕ್ರಮಿಸುವ ಇವರು ರಾತ್ರಿಹೊತ್ತು ಸಾರ್ವಜನಿಕರ ಸಹಾಯದಿಂದ ಊಟೋಪಚಾರ ಮತ್ತು ರಾತ್ರಿ ತಂಗಲು ಸಹಾಯ ಪಡೆದುಕೊಳ್ಳುತ್ತಾರೆ. ಮೂಲತಃ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಯಾಗಿರುವ ನನಗೆ ದೇಶದ ತಮ್ಮ ಅಭಿಮಾನಿಗಳು ಗಿನ್ನಿಸ್ ದಾಖಲೆ ಮಾಡಲು ಬೆಂಬಲವಾಗಿ ನಿಂತಿದ್ದಾರೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ರವಿ ಹಾಗೂ ಪೊಲೀಸ್ ಪೇದೆ ಸಂತೋಷ್ ರವರು ಮುತ್ತು ಸೆಲ್ವನ್ ಅವರಿಗೆ ಶುಭ ಕೋರಿ ಕಾಣಿಕೆ ನೀಡಿದರು.
ಈಗಾಗಲೇ ತಮಿಳುನಾಡು, ಆಂಧ್ರಪ್ರದೇಶ ತೆಲಂಗಾಣ, ಮಧ್ಯಪ್ರದೇಶ, ಉತ್ತರ ಪ್ರದೇಶ, ಹರಿಯಾಣ, ಉತ್ತರಾಖಂಡ, ಹಿಮಾಚಲ ಪ್ರದೇಶ, ಲಡಾಖ್, ಜಮ್ಮು ಕಾಶ್ಮೀರ, ಪಂಜಾಬ್, ರಾಜಸ್ಥಾನ , ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ ಪ್ರಯಾಣ ಮುಗಿಸಿದ್ದು ಇದೀಗ ಕೇರಳ, ಪಾಂಡಿಚೇರಿ, ಛತ್ತೀಸ್‌ಗಢ, ಒರಿಸ್ಸಾ, ಜಾರ್ಖಂಡ್, ಪಶ್ಚಿಮ ಬಂಗಾಳ, ಬಿಹಾರ, ಸಿಕ್ಕಿಂ, ಅಸ್ಸಾಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಮ್, ತ್ರಿಪುರ, ಮೇಘಾಲಯ ಹಾಗೂ ದೆಹಲಿವರೆಗೂ ಪ್ರಯಾಣ ನಡೆಸುವುದಾಗಿ ಹೇಳಿದ್ದಾರೆ.