ಅಪ್ಪು ದಸರಾ ಚಲನಚಿತ್ರೋತ್ಸವದ ಆಕರ್ಷಣೆ

Spread the love

ಅಪ್ಪು ದಸರಾ ಚಲನಚಿತ್ರೋತ್ಸವದ ಆಕರ್ಷಣೆ

ಮೈಸೂರು: ದಸರಾ ಚಲನಚಿತ್ರ ಪ್ರದರ್ಶನ ಸೆ.27ರಿಂದ ಅ.3ರವರೆಗೆ ನಡೆಯಲಿದ್ದು, ನಟ ಪುನೀತ್ ರಾಜ್‌ಕುಮಾರ್ ಮುಖ್ಯ ಆಕರ್ಷಣೆಯಾಗಿದ್ದಾರೆ.

ಮೈಸೂರು ದಸರಾ ಚಲನಚಿತ್ರೋತ್ಸವದಲ್ಲಿ ಅಪ್ಪು ಅಗಲಿಕೆ ನೋವಿನಲ್ಲಿರುವ ಅಭಿಮಾನಿಗಳಿಗಾಗಿ ಚಿತ್ರೋತ್ಸವದ ಒಂದು ದಿನ ಮೀಸಲಿಡಲಾಗಿದೆ. ಈ ವೇಳೆ ಅಪ್ಪು ಅಭಿನಯದ ಬ್ಲಾಕ್‌ಬಸ್ಟರ್ ಸಿನಿಮಾಗಳು, ಸಾಮಾಜಿಕ ಸಂದೇಶ ಸಾರುವ ಚಿತ್ರಗಳನ್ನು ಪ್ರದರ್ಶಿಸಲಾಗುವುದು. ಬಾಲ ನಟನಾಗಿ ನಟಿಸಿದ ಬೆಟ್ಟದ ಹೂ ಚಿತ್ರವೂ ಪ್ರದರ್ಶನಗೊಳ್ಳಲಿದೆ.

ನಗರದ ಎರಡು ಮಲ್ಟಿಫ್ಲೆಕ್ಸ್‌ಗಳಲ್ಲಿ ವಿದೇಶಿ ಮತ್ತು ದೇಶದ ವಿವಿಧ ಭಾಷೆಗಳ ಒಟ್ಟು 112 ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಇದೇ ವೇಳೆ ಕಿರುಚಿತ್ರ ತಯಾರಿಕೆ ಕುರಿತು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದ್ದು, ಹೆಸರಾಂತ ಚಿತ್ರ ನಿರ್ದೇಶಕರು ಪಾಲ್ಗೊಳ್ಳಲಿದ್ದಾರೆ. ಜತೆಗೆ ಕಿರುಚಿತ್ರ ಪ್ರದರ್ಶನ ನಡೆಯಲಿದೆ. ಚಲನಚಿತ್ರೋತ್ಸವದಲ್ಲಿ ಕನ್ನಡ ಸಿನಿಮಾ ಸೇರಿದಂತೆ ವಿದೇಶಿ ಸಿನಿಮಾಗಳು, ಪನೋರಮ, ದೇಶದ ವಿವಿಧ ಭಾಷೆಗಳ ಚಿತ್ರಗಳು ಪ್ರದರ್ಶನಗೊಳ್ಳಲಿವೆ. 112ಸಿನಿಮಾಗಳಲ್ಲಿ ಕನ್ನಡ 28, ಪನೋರಮಾ 28, 28 ವರ್ಲ್ಡ್ ಸಿನಿಮಾ ಪ್ರದರ್ಶನಗೊಳ್ಳಲಿವೆ. ಐನೋಕ್ಸ್‌ನಲ್ಲಿ 84, ಡಿಆರ್‌ಸಿಯಲ್ಲಿ 28 ಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಸೆ.22ರಿಂದ 24ರವರೆಗೆ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಸಿನಿಮಾ ನಿರ್ಮಾಣದ ಕೌಶಲಗಳನ್ನು ತಿಳಿಸಲಾಗುತ್ತದೆ. ಜತೆಗೆ ಕಡಿಮೆ ಬಜೆಟ್‌ನಲ್ಲಿ ಉತ್ತಮ ಚಿತ್ರ ನಿರ್ಮಾಣದ ಕುರಿತು ಕಲಿಸಲಾಗುತ್ತದೆ. ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಕಾರ್ಯಾಗಾರ ಉದ್ಘಾಟಿಸಲಿದ್ದಾರೆ. ಇದೇ ವೇಳೆ 5 ನಿಮಿಷಗಳ ಕಿರುಚಿತ್ರ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಕನ್ನಡ ಸಿನಿಮಾಗಳ ಹೊರತುಪಡಿಸಿ ಇತರೆ ಭಾಷೆಯ ಸಿನಿಮಾಗಳಿಗೆ ಅಡಿ ಬರಹ ಇರಬೇಕು. ಮೊದಲ ಬಹುಮಾನ 10 ಸಾವಿರ ನಗದು, ದ್ವಿತೀಯ 8 ಸಾವಿರ ನಗದು, 5 ಸಾವಿರ ತೃತೀಯ ನಗದು ಬಹುಮಾನ ನೀಡಲಾಗುತ್ತದೆ. ಇಬ್ಬರಿಗೆ 2 ಸಾವಿರ ರೂ. ಸಮಾಧಾನಕರ ಬಹುಮಾನ ನೀಡಲಾಗುತ್ತದೆ.

ಇನ್ನು ದಸರಾ ಚಲನಚಿತ್ರೋತ್ಸವಕ್ಕೆ ಸೆ.26ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಚಾಲನೆ ನೀಡಲಿದ್ದಾರೆ.


Spread the love