
ಅಪ್ಪ-ಮಗನ ಅಪಹರಣ ಪ್ರಕರಣ: 10ಮಂದಿಯ ಬಂಧನ
ಮೈಸೂರು: ನಂಜನಗೂಡಿನ ಅಪ್ಪ-ಮಗನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಜನ ಆರೋಪಿಗಳನ್ನು ಬಂಧಿಸಲಾಗಿದ್ದು, ಆರೋಪಿಗಳಿಂದ 21.10 ಲಕ್ಷ ರೂ. ನಗದು, ಕೃತ್ಯಕ್ಕೆ ಬಳಸಿದ್ದ ಒಂದು ಕಾರು, ಮೂರು ಬೈಕ್ ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅವರು, ಫೆ.6ರಂದು ಮಧ್ಯಾಹ್ನ 12.30ಕ್ಕೆ ನಂಜನಗೂಡು ತಾಲೂಕಿನ ಅಡಕನಹಳ್ಳಿ ಕೈಗಾರಿಕಾ ಪ್ರದೇಶದ ಹರ್ಷ ಇಂಪೆಕ್ಟ್ ಫ್ಯಾಕ್ಟರಿಯ ಮಾಲೀಕ ದೀಪಕ್, ಅವರ ಮಗ ಹರ್ಷನನ್ನು ಅಪಹರಣ ಮಾಡಲಾಗಿತ್ತು. ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಮಾರಕಾಸ್ತçಗಳಿಂದ ಹೆದರಿಸಿ, ಇವರನ್ನು ಗೋದಾಮಿನಲ್ಲಿ ಕೂಡಿ ಹಾಕಿ ಪರಾರಿಯಾಗಿದ್ದರು. ದೀಪಕ್ ಅವರ ಕಾರ್‌ನಲ್ಲೇ ತಂದೆ-ಮಗನನ್ನು ಕಿಡ್ನಾಪ್ ಮಾಡಿದ್ದ ಆರೋಪಿಗಳು ಜೀವ ಬೆದರಿಕೆ ಹಾಕಿ 1 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು.
ಬಳಿಕ ಮನೆಯವರು ಸತತ ಮಾತುಕತೆ ನಡೆಸಿ 35 ಲಕ್ಷ ರೂ. ನೀಡಿದ್ದರಿಂದ ಆರೋಪಿಗಳು ಅಪ್ಪ-ಮಗನನ್ನು ಬಿಡುಗಡೆ ಮಾಡಿದ್ದರು. ಫೆ.6ರಂದು ಮಧ್ಯಾಹ್ನ 12ರ ಹೊತ್ತಿನಲ್ಲಿ ಅಪಹರಣ ಮಾಡಿದ್ದ ಆರೋಪಿಗಳು ಸಂಜೆ 7 ಗಂಟೆಯ ಹೊತ್ತಿಗೆ ಹಣ ಪಡೆದು ಇಬ್ಬರನ್ನು ಬಿಟ್ಟಿದ್ದರು. ಆ ನಂತರವೂ ಆರೋಪಿಗಳು ಮೈಸೂರು ತಾಲೂಕಿನ ವರುಣಾ, ನಂಜನಗೂಡು ವ್ಯಾಪ್ತಿಯಲ್ಲಿಯೇ ಅಡ್ಡಾಡಿದ್ದಾರೆ ಎಂದು ಹೇಳಿದರು.
ಬಂಧಿತ ಆರೋಪಿಗಳು ಕ್ರಿಮಿನಲ್‌ಗಳು ಎಂಬುದನ್ನು ಅರಿತು, ಒತ್ತೆಯಲ್ಲಿದ್ದವರ ಜೀವಕ್ಕೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ತಂದೆ-ಮಗನ ಬಿಡುಗಡೆಯಾಗುವವರೆಗೂ ಪೊಲೀಸರು ಸುಮ್ಮನಿದ್ದು ಕೇಸ್ ಮೇಲೆ ನಿಗಾ ವಹಿಸಿದರು. ಜಿಲ್ಲೆಯ ಎಲ್ಲ ಪೊಲೀಸರನ್ನು ಬಳಸಿಕೊಂಡು ಪ್ರಮುಖ ರಸ್ತೆಯಲ್ಲಿ ನಾಕಾಬಂಧಿ ಹಾಕಿ ತಪಾಸಣೆ ಮಾಡಲಾಯಿತು . ಇಬ್ಬರ ಬಿಡುಗಡೆಯ ಬಳಿಕ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಯಿತು. ಅದಕ್ಕಾಗಿ 3 ತಂಡ ರಚಿಸಲಾಯಿತು.
ಹಣಕ್ಕಾಗಿ ಉದ್ಯಮಿ ದೀಪಕ್ ಅವರನ್ನು ಒಂದು ವರ್ಷದ ಹಿಂದೆ ಬೆದರಿಸಲಾಗಿತ್ತು. ಅವರು ದೂರವಾಣಿಯ ಕರೆಯ ಸಂಭಾಷಣೆ, ಮೊಬೈಲ್ ಸಂಖ್ಯೆಯನ್ನು ಸಂಗ್ರಹಿಸಿ ಇಟ್ಟುಕೊಟ್ಟಿದ್ದರು. ವಿಚಾರಣೆ ವೇಳೆ ಇದುವೇ ಸುಳಿವು ನೀಡಿತು. ಇವರ ಕಾರ್ಖಾನೆಯಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೇ ಆರೋಪಿಗಳಿಗೆ ಮಾಹಿತಿ ನೀಡಿ ಈ ಕೃತ್ಯ ಎಸಗುವಂತೆ ಮಾಡಿದ್ದನು.
ಮಂಡ್ಯ ಜಿಲ್ಲೆಯ ಚಂದಗಾಲದ ಕಾರದಪುಡಿ ಬಸವ, ಕುಣಿಗಲ್‌ನ ಅಭಿ, ಪ್ರಮೋದ್, ಶಶಿಧರ್, ರಾಹುಲ್, ಚಂದು, ಶ್ರೀಧರ್, ಮಧು, ಸಂಜಯ್, ಅಜಯ್ ಬಂಧಿತರು. ಇವರಲ್ಲಿ ತುಮಕೂರಿನವರು ಇಬ್ಬರು, ಮಂಡ್ಯದವರು 2, ಬನ್ನೂರಿನವರು 4, ಕೆ.ಆರ್.ನಗರದವರು ಇಬ್ಬರಿದ್ದಾರೆ. 11ನೇ ಆರೋಪಿ ರವಿ ಎಂಬಾತ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಮುಂದುವರಿದಿದೆ. ಬಂಧಿತರಿಂದ 21.10 ಲಕ್ಷ ರೂ. ನಗದು, ಕೃತ್ಯಕ್ಕೆ ಬಳಸಿದ್ದ ಒಂದು ಕಾರು, ಮೂರು ಬೈಕ್ ಹಾಗೂ 5 ಡ್ರಾಗರ್, 3 ಲಾಂಗ್, 11 ಮೊಬೈಲ್ ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.
ಬಂಧಿತರಲ್ಲಿ ಮೊದಲನೇ ಆರೋಪಿ ವಿರುದ್ಧ ಈ ಹಿಂದೆ ಮಂಡ್ಯ ಜಿಲ್ಲೆಯ ಪೂರ್ವ, ಪಶ್ಚಿಮ, ಶಿವಳ್ಳಿ, ಕೆ.ಆರ್.ಪೇಟೆ, ಮೈಸೂರಿನ ಮೇಟಗಳ್ಳಿ, ಮಂಡಿ ಪೊಲೀಸ್ ಠಾಣೆಗಳಲ್ಲಿ ಕೊಲೆ, ಆರ್ಮ್ಸ್ ಆಕ್ಟ್, ಎನ್‌ಡಿಪಿಎಸ್ ಸೇರಿದಂತೆ 9 ಪ್ರಕರಣಗಳು ದಾಖಲಾಗಿವೆ. 21 ವಯಸ್ಸಿನಲ್ಲಿ ಅಪರಾಧ ಕೃತ್ಯ ಎಸಗಿ 11 ವರ್ಷ ಜೈಲು ಶಿಕ್ಷೆ ಅನುಭÀವಿಸಿ ಜಾಮೀನು ಮೇಲೆ ಹೊರ ಬಂದ ಬಳಿಕ ಕೃತ್ಯ ಎಸಗಿದ್ದಾನೆ ಎಂದು ಹೇಳಿದರು.
2ನೇ ಆರೋಪಿ ವಿರುದ್ಧವೂ ಹಿಂದೆ ಮಂಡ್ಯ ಜಿಲ್ಲೆಯ ಶಿವಳ್ಳಿ ಪೊಲೀಸ್ ಠಾಣೆಯಲ್ಲಿ ಆರ್ಮ್ಸ್ ಆಕ್ಟ್ ರೀತ್ಯಾ ಒಂದು ಪ್ರಕರಣ ದಾಖಲಾಗಿದೆ. 3ನೇ ಆರೋಪಿ ವಿರುದ್ಧ ಮಂಡ್ಯ ಜಿಲ್ಲೆಯ ಶಿವಳ್ಳಿ, ಪಾಂಡವಪುರ, ಪಶ್ಚಿಮ ಠಾಣೆ, ರಾಮನಗರ ಜಿಲ್ಲೆಯ ಕಗ್ಗಲಿಪುರ ಪೊಲೀಸ್ ಠಾಣೆಗಳಲ್ಲಿ 5 ಕಳ್ಳತನ ಪ್ರಕರಣಗಳಿವೆ. 4ನೇ ಆರೋಪಿ ವಿರುದ್ಧ ಮಂಡ್ಯ ಜಿಲ್ಲೆಯ ಗ್ರಾಮಾಂತರ, ಶಿವಳ್ಳಿ, ಪಾಂಡವಪುರ, ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿವೆ. 5ನೇ, 6ನೇ ಆರೋಪಿಗಳ ವಿರುದ್ಧ ಬನ್ನೂರು ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿದೆ. ಎಲ್ಲ ಆರೋಪಿಗಳು ಒಂದಲ್ಲವೊAದ ಅಪರಾಧÀ ಕೃತ್ಯ ಎಸಗಿದ್ದಾರೆ. ಇವರ ಕುರಿತು ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದರು.
ಪತ್ತೆ ಕಾರ್ಯದಲ್ಲಿ ನಂಜನಗೂಡಿನ ಡಿವೈಎಸ್‌ಪಿ ಗೋವಿಂದರಾಜು, ಇನ್ಸ್ಪೆಕ್ಟರ್ ಶಿವನಂಜಶೆಟ್ಟಿ, ಪಿಎಸ್‌ಐಗಳಾದ ಚೇತನ, ರಮೇಶ್ ಕರಕಿಕಟ್ಟಿ, ಕೃಷ್ಣಕಾಂತಕೋಳಿ, ಕಮಲಾಕ್ಷಿ, ಸಿ.ಕೆ.ಮಹೇಶ್, ಪ್ರೊಬೆಷನರಿ ಪಿಎಸ್‌ಐ ಚರಣ್‌ಗೌಡ, ಎಎಸ್‌ಐಗಳಾದ ಶಿವಕುಮಾರ್, ವಸಂತಕುಮಾರ್, ಸಿಬ್ಬಂದಿಯಾದ ಸುರೇಶ್, ವಸಂತಕುಮಾರ್, ಸುನೀತಾ, ಕೃಷ್ಣ, ಭಾಸ್ಕರ್, ಅಬ್ದುಲ್ ಲತೀಪ್, ನಿಂಗರಾಜು, ಸುರೇಶ್, ಸುಶೀಲ್‌ಕುಮಾರ್, ರಾಜು, ಚೇತನ್, ವಿಜಯ್‌ಕುಮಾರ್, ಮಂಜು, ಚೆಲುವರಾಜು ಇದ್ದರು. ಈ ತಂಡಕ್ಕೆ ಐಜಿಪಿ ಪ್ರವೀಣ್ ಮಧುಕರ್ ಪವಾರ್ 25 ಸಾವಿರ ರೂ. ಬಹುಮಾನ ಘೋಷಿಸಿದ್ದಾರೆ ಎಂದು ಹೇಳಿದರು.