ಅಭಿವೃದ್ಧಿ ಕಾಣದ ಮಾಗಡಿಯ ಕೆಂಪೇಗೌಡರ ಸಮಾಧಿ!

Spread the love

ಅಭಿವೃದ್ಧಿ ಕಾಣದ ಮಾಗಡಿಯ ಕೆಂಪೇಗೌಡರ ಸಮಾಧಿ!

ಮೈಸೂರು: ಕೆಂಪೇಗೌಡರ ಜಯಂತಿಯನ್ನು ರಾಜ್ಯದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಸಂದರ್ಭ ಅವರು ಐಕ್ಯವಾದ ಸ್ಥಳ ಮತ್ತು ಅವರು ನಿರ್ಮಿಸಿದ ಕೆರೆಗಳನ್ನು ಸರ್ಕಾರ ಅಭಿವೃದ್ಧಿ ಪಡಿಸಿ ಅದನ್ನು ಸುಂದರ ಪ್ರವಾಸಿ ತಾಣವನ್ನಾಗಿ ಮಾಡಬೇಕೆಂಬ ಒತ್ತಾಯಗಳು ಕೇಳಿ ಬರುತ್ತಿವೆ.

ಕೆಂಪೇಗೌಡರು ಐಕ್ಯವಾಗಿರುವ ಮಾಗಡಿ ತಾಲೂಕಿನ ಕೆಂಪಾಪುರವು ಹಲವು ರೀತಿಯಲ್ಲಿ ಗಮನಾರ್ಹ ಸ್ಥಳವಾಗಿದ್ದು, ಇಲ್ಲಿ ಕೆಂಪೇಗೌಡರ ಸಮಾಧಿಯಿದೆ ಜತೆಗೆ ಅವರು ನಿರ್ಮಿಸಿದ ಕೆಂಪಸಾಗರ ಕೆರೆಯೂ ಇದೆ. ಒಂದು ವೇಳೆ ಸಮಾಧಿ ಹಾಗೂ ಪಕ್ಕದ ಕೆರೆಯನ್ನು ಅಭಿವೃದ್ಧಿಗೊಳಿಸಿದ್ದೇ ಅದು ಪ್ರವಾಸಿಗರನ್ನು ಸೆಳೆಯುವುದರಲ್ಲಿ ಎರಡು ಮಾತಿಲ್ಲ.

ಹಾಗೆನೋಡಿದರೆ ಮಾಗಡಿಯಲ್ಲಿರುವ ಅವರ ಸಮಾಧಿಯನ್ನು ಅಭಿವೃದ್ಧಿಗೊಳಿಸುವ ಮಾತುಗಳು ಕೆಂಪೇಗೌಡರ ಜನ್ಮದಿನದಂದು ಪ್ರತಿವರ್ಷವೂ ಕೇಳಿ ಬರುತ್ತಲೇ ಇರುತ್ತದೆ. ಈ ಸಂಬಂಧ ಹಿಂದೆ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಅವರು ಸಮಾಧಿ ಸ್ಥಳವನ್ನು 15 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸುವ ಭರವಸೆ ನೀಡಿದ್ದರು. ಆದರೆ ಕೊರೊನಾ ಕಾರಣದಿಂದಾಗಿ ಕಾರ್ಯಗತವಾಗಿಲ್ಲ.

ಇಂತಹ ಭರವಸೆಗಳ ಮಾತುಗಳು ಇವತ್ತು ನಿನ್ನೆಯದಲ್ಲ. ಪ್ರತಿ ಸರ್ಕಾರಗಳು ಅಧಿಕಾರಕ್ಕೆ ಬಂದಾಗಲೆಲ್ಲ ಇದನ್ನು ಹೇಳುತ್ತಲೇ ಇವೆ. ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವಿದ್ದಾಗ ಕೆಂಪೇಗೌಡ ಅಭಿವೃದ್ದಿ ಪ್ರಾಧಿಕಾರವನ್ನು ರಚನೆ ಮಾಡಿ, ಮೊದಲ ಹಂತವಾಗಿ 5 ಕೋಟಿ ಹಣವನ್ನು ಮೀಸಲಿಟ್ಟಿದ್ದರು. ಆದರೆ ಅದು ಕೇವಲ ಘೋಷಣೆಯಾಗಿಯೇ ಉಳಿದು ಹೋಯಿತು. ಕೆಂಪೇಗೌಡರ ಸಮಾಧಿ ಪತ್ತೆಯಾದ ಬಳಿಕ ಮೊದಲ ಬಾರಿಗೆ ಕೆಂಪಾಪುರಕ್ಕೆ ಭೇಟಿ ನೀಡಿ ಕೆಂಪೇಗೌಡ ಪ್ರಾಧಿಕಾರ ರಚನೆಯಾಗಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಆಗ್ರಹಿಸಿದ್ದರಲ್ಲದೆ, ಆ ಮೂಲಕ ಕೆಂಪಾಪುರ ಸಮಾಧಿ ಅಭಿವೃದ್ಧಿ ಹಾಗೂ ಕೆಂಪೇಗೌಡರು ಕಟ್ಟಿಸಿರುವ ಕೆರೆ ಐತಿಹಾಸಿಕ ದೇವಸ್ಥಾನಗಳು ಕೂಡ ಅಭಿವೃದ್ಧಿಯಾಗಬೇಕೆಂದು ಒತ್ತಾಯಿಸಿದ್ದರು.

ಇವತ್ತು ಕೆಂಪೇಗೌಡರ ಸಮಾಧಿ ಶಿಥಿಲಾವಸ್ಥೆಯನ್ನು ತಲುಪಿದೆ. ಜತೆಗೆ ಕೆಂಪೇಗೌಡರು ಕಟ್ಟಿಸಿದ ಮಾಗಡಿ ಪಟ್ಟಣದ ಸೋಮೇಶ್ವರ ದೇವಸ್ಥಾನದ ಬಸವೇಶ್ವರಗೋಪುರವೂ ನಿರ್ಲಕ್ಷ್ಯಕ್ಕೊಳಗಾಗಿದೆ. ಈ ಸೋಮೇಶ್ವರ ದೇವಸ್ಥಾನವು ಕೆಂಪೇಗೌಡರ ಕಾಲದ್ದಾಗಿದ್ದು, ಅಂದಿನಿಂದ ಇಂದಿನವರೆಗೂ ಪೂಜಾ ಕೈಂಕರ್ಯಗಳನ್ನು ಮಾಡುತ್ತಲೇ ಬರಲಾಗುತ್ತಿದೆ. ದೇವಾಲಯ ನಿರ್ಮಾಣಗೊಂಡಿರುವ ಸ್ಥಳವು ನಿಸರ್ಗ ಸುಂದರವಾಗಿದೆ. ಇದಲ್ಲದೆ ಕೆಂಪೇಗೌಡರು ನಿರ್ಮಿಸಿರುವ ಕೆಂಪಸಾಗರ ಕೆರೆಯೂ ತನ್ನದೇ ಇತಿಹಾಸವನ್ನು ಹೊಂದಿದೆ. 1674ರಲ್ಲಿ ಜನ ಜಾನುವಾರುಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಕೆರೆಯನ್ನು ನಿರ್ಮಿಸಲಾಗಿದೆ. ವಿಶಾಲ ಪ್ರದೇಶದಲ್ಲಿ ನಿರ್ಮಾಣವಾಗಿರುವ ಕೆರೆಗೆ ಹಿಂದಿನ ಕಾಲದಲ್ಲಿ ಮಹತ್ವದ ಸ್ಥಾನವನ್ನು ನೀಡಲಾಗಿತ್ತು.

ವಿಜಯದಶಮಿಯ ದಿನದಂದು ಈ ಕೆರೆಗೆ ಬಂದು ಕೆಂಪೇಗೌಡರು ಪೂಜೆ ಸಲ್ಲಿಸಿಕೊಂಡು ಹೋಗುತ್ತಿದ್ದರಂತೆ. ಕೆಂಪಸಾಗರ ಕೆರೆಯ ನೀರನ್ನು ಪವಿತ್ರ ಗಂಗೆ ಎಂದೇ ಭಾವಿಸಿರುವ ಜನತೆ ಹೊರಜಿಲ್ಲೆಗಳಿಂದಲೂ ಬಂದು ಪೂಜೆ ಸಲ್ಲಿಸುವುದನ್ನು ಕಾಣಬಹುದಾಗಿದೆ. ಹೀಗಿರುವಾಗ ಸರ್ಕಾರ ಇದನ್ನು ಅಭಿವೃದ್ಧಿ ಮಾಡಿದ್ದೇ ಆದರೆ ಕೆಂಪೇಗೌಡರ ಐಕ್ಯ ಸ್ಥಳವೂ ಸುಂದರ ತಾಣವಾಗುವುದಂತು ಖಚಿತ.


Spread the love