ಅಭಿವೃದ್ಧಿ ವಿಚಾರದಲ್ಲಿ ಹಾಸನ ಜಿಲ್ಲೆಯ ಕಡೆಗಣನೆ-ಮಾಜಿ ಸಚಿವ ಹೆಚ್.ಡಿ. ರೇವಣ್ಣ

Spread the love

ಅಭಿವೃದ್ಧಿ ವಿಚಾರದಲ್ಲಿ ಹಾಸನ ಜಿಲ್ಲೆಯ ಕಡೆಗಣನೆ-ಮಾಜಿ ಸಚಿವ ಹೆಚ್.ಡಿ. ರೇವಣ್ಣ

ಹಾಸನ: ಅಭಿವೃದ್ಧಿ ವಿಚಾರದಲ್ಲಿ ಹಾಸನ ಜಿಲ್ಲೆಯನ್ನು ಕಡೆಗಣಿಸುವ ಮೂಲಕ ದ್ವೇಷದ ರಾಜಕೀಯ ಮಾಡುತ್ತಿರುವ ಬಿಜೆಪಿ ಸರಕಾರದ ವಿರುದ್ಧ ಹೋರಾಟ ಮಾಡುವ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಯೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಎಚ್ಚರಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಧಿಕಾರವಧಿಯಲ್ಲಿ ಜಿಲ್ಲೆಯ ಅಭಿವೃದ್ಧಿಯಂತಹ ಯಾವ ಕೆಲಸಗಳು ಸಮರ್ಪಕವಾಗಿ ಆಗಿರುವುದಿಲ್ಲ. ಪ್ರಸ್ತುತದಲ್ಲಿರುವ ಬಸವರಾಜ್ ಬೊಮ್ಮಾಯಿ ಅವರಿಗೂ ಕೂಡ ಅಭಿವೃದ್ಧಿ ವಿಚಾರದಲ್ಲಿ ಮನವಿ ಮಾಡಲಾಗಿದ್ದರೂ ಯಾವ ಪ್ರಯೋಜನವಾಗಿರುವುದಿಲ್ಲ. ಇನ್ನು ಅಧಿವೇಶನದಲ್ಲೂ ಮನವಿ ಮಾಡಿದರೂ ಗಮನ ನೀಡಿರುವುದಿಲ್ಲ ಎಂದು ಬೇಸರವ್ಯಕ್ತಪಡಿಸಿದರು. ಹಾಸನ, ಸಿಂದಗಿಯಲ್ಲಿ ತೋಟಗಾರಿಕೆ ಪದವಿ ಶಿಕ್ಷಣ ಕಾಲೇಜು ತೆರೆಯಲು ಎಲ್ಲ ರೀತಿಯ ನೆರವನ್ನು ಎಚ್.ಡಿ. ಕುಮಾರಸ್ವಾಮಿ ಅಧಿಕಾರವಧಿಯಲ್ಲಿ ನೀಡಲಾಗಿತ್ತು. ಈಗ ಯಡಿಯೂರಪ್ಪ ಅವರ ಅಧಿಕಾರಾವಧಿಯಲ್ಲಿ ತಡೆಹಿಡಯಲಾಗಿದೆ. ಇಂತಹ ಸರ್ಕಾರದ ಧೋರಣೆ ವಿರುದ್ಧ ಹೋರಾಟ ಮಾಡುವ ಬಗ್ಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿ ಪಕ್ಷದ ಎಲ್ಲಾ ಶಾಸಕರೊಂದಿಗೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಪೂರೈಸಿದರು ರಾಜ್ಯದ ಪದವಿ ಕಾಲೇಜುಗಳಿಗೆ ಉಪನ್ಯಾಸಕರನ್ನು ನೇಮಕ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ನನ್ನ ಕ್ಷೇತ್ರದ ಕಾಲೇಜಿನಲ್ಲಿಯೇ 18 ಮಂದಿ ಉಪನ್ಯಾಸಕರ ಕೊರತೆ ಇದೆ. ಕಾಂಗ್ರೆಸ್ ನಲ್ಲಿ ರಾಜ್ಯದಲ್ಲಿ ಹೀನಾಯ ಪರಿಸ್ಥಿತಿ ಎದುರಿಸುತ್ತಿದೆ. ಕೋಮುವಾದಿ ಪಕ್ಷದ ನಾಯಕರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯುವ ಕೆಲಸ ಮಾಡುತ್ತಿದೆ. ಇದಕ್ಕೆ ಕಾರಣ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂದು ಸಾಭೀತಾಗಿದೆ ಎಂದರು. ದೇಶದಲ್ಲಿ ಕಾಂಗ್ರೆಸ್ ಬಂದು 60 ವರ್ಷ ಆಳಿದರು ಯಾವ ಸಮಾಜವನ್ನು, ಜಾತಿಯನ್ನು ಗುರುತಿಸಿ ಅವರ ಉದ್ದಾರಕ್ಕೆ ಯಾವ ಜನಪರ ಕಾರ್ಯಕ್ರಮ ಮಾಡಿದ್ದೀರಿ ಎಂದು ಸವಾಲು ಹಾಕಿದರು. ಕೇವಲ ಮತ ಬ್ಯಾಂಕ್ ಗೆ ಜಾತಿಗಳ ನಡುವೆ ವೈಷಮ್ಯದ ವಿಷಬೀಜ ಬಿತ್ತುವ ಕೆಲಸ ಕಾಂಗ್ರೆಸ್ ಪಕ್ಷ ಮಾಡಬಾರದು ಎಂದು ಸಲಹೆ ನೀಡಿದರು,

ಮುಂದೆ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಟಿಕೆಟ್ ನೀಡುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹಾಸನಾಂಬೆ, ಲಕ್ಷ್ಮಿ ನರಸಿಂಹ ಸೇರಿದಂತೆ ನಮ್ಮ ಮನೆ ದೇವರು ಯಾರಿಗೆ ಟಿಕೆಟ್ ನೀಡಬೇಕು ಎಂದು ಅವರಿಂದ ಆಶೀರ್ವಾದ ಸಿಗಲಿದೆ. ಅವರಿಗೆ ಮುಂದಿನ ವಿಧಾನಸಭೆ ಚುನಾವಣೆ ಟಿಕೆಟ್ ಕೊಡಲಾಗುವುದು ಎಂದು ಅಭ್ಯರ್ಥಿ ಹೆಸರು ಹೇಳಲು ನಿರಾಕರಿಸಿದರು.


Spread the love