Home Mangalorean News Kannada News ಅಮಲ ಭಾರತ ಸ್ವಚ್ಛತಾ ಅಭಿಯಾನಕ್ಕೆ ಸಾಥ್ ನೀಡಿದ ವಿವಿಧ ಸಂಘ ಸಂಸ್ಥೆಗಳು

ಅಮಲ ಭಾರತ ಸ್ವಚ್ಛತಾ ಅಭಿಯಾನಕ್ಕೆ ಸಾಥ್ ನೀಡಿದ ವಿವಿಧ ಸಂಘ ಸಂಸ್ಥೆಗಳು

Spread the love

ಅಮಲ ಭಾರತ ಸ್ವಚ್ಛತಾ ಅಭಿಯಾನಕ್ಕೆ ಸಾಥ್ ನೀಡಿದ ವಿವಿಧ ಸಂಘ ಸಂಸ್ಥೆಗಳು

ಮಂಗಳೂರು: ಬೋಳೂರು ಅಮೃತಾನಂದಮಯಿ ಮಠ ಎಂಆರ್‌ಪಿಎಲ್ ಸಂಸ್ಥೆಯ ಸಹಯೋಗದೊಂದಿಗೆ ನಡೆಸುತ್ತಿರುವ ಮೂರನೇ ವಾರದ `ಅಮಲ ಭಾರತ’ ಸ್ವಚ್ಛತಾ ಕಾರ್ಯಕ್ರಮ ಭಾನುವಾರ ನಗರದ ಬೋಳೂರು, ಸುಲ್ತಾನ್ ಬತ್ತೇರಿ, ಕದ್ರಿ ಸಮೀಪದ ಪದುವಾ ಮತ್ತು ಬೆಂಗ್ರೆ ಪ್ರದೇಶದಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬೋಳೂರು ಅಮೃತಾನಂದಮಯಿ ಮಠದ ಮಠಾಧಿಪತಿಗಳಾದ ಮಂಗಳಾಮೃತ ಚೈತನ್ಯ ಅವರು, ಸ್ವಚ್ಛತೆಯ ಜಾಗೃತಿ ಮನೆ ಮನೆಯಿಂದ ಆಗಬೇಕು. ನಮ್ಮ ಮನೆ, ನಮ್ಮ ಪರಿಸರ ಸ್ವಚ್ಛವಾಗಿಡುವ ಮನಸ್ಥಿತಿ ಬರಬೇಕು ಎಂದರು.

ಬೋಳೂರು ಮಠ ನಡೆಸುತ್ತಿರುವ ಅಮಲಭಾರತ ಅಭಿಯಾನದಲ್ಲಿ ಅನೇಕ ಸಂಘ ಸಂಸ್ಥೆಗಳು ಕೈ ಜೋಡಿಸುತ್ತಿದ್ದು ಜನತೆಯಲ್ಲಿ ಸ್ವಚ್ಛತೆಯ ಅರಿವು ಮೂಡಿಸುತ್ತಿದೆ. ಯುವ ಸಮುದಾಯ ಈ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.

ಪ್ರತಿಯೊಬ್ಬರೂ ರಾಯಭಾರಿಗಳಾಗಿ
2011ರಿಂದ ಅಮಲ ಭಾರತ ಸ್ವಚ್ಛತಾ ಅಭಿಯಾನ ನಡೆಯುತ್ತಾ ಬಂದಿದೆ. ಜನತೆಯಲ್ಲಿ ಸ್ವಚ್ಛತಾ ಜಾಗೃತಿ ಮೂಡಿಸುವ ಕೆಲಸ ಮಠದ ವತಿಯಿಂದ ಆಗುತ್ತಿದೆ. ವಿದ್ಯಾರ್ಥಿ ಸಮುದಾಯ ಸೇರಿದಂತೆ ಯುವ ಜನಾಂಗ ಸ್ವಚ್ಛತಾ ಕಾರ್ಯಕ್ರಮಗಳ ರಾಯಭಾರಿಗಳಾಗಿ ಕೆಲಸ ಮಾಡಬೇಕು ಎಂದು ಅಮಲ ಭಾರತ ಸ್ವಚ್ಛತಾ ಅಭಿಯಾನದ ಅಧ್ಯಕ್ಷ ಡಾ.ಜೀವರಾಜ್ ಸೊರಕೆ ಕರೆ ನೀಡಿದರು.

ಅಮಲ ಭಾರತ ಅಭಿಯಾನದ ಮುಖ್ಯ ಸಂಘಟಕ ಮಾಧವ ಸುವರ್ಣ ಮಾತಾ ಅಮೃತಾನಂದಮಯಿ ಅಮ್ಮನವರ ಅಪೇಕ್ಷೆಯಂತೆ ಅಮಲ ಭಾರತ ಅಭಿಯಾನ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಸ್ಥಳೀಯ ಸಂಘ ಸಂಸ್ಥೆಗಳ ನೆರವಿನೊಂದಿಗೆ ಬೋಳೂರು ಮಠ ಮಂಗಳೂರಿನಲ್ಲಿ ಮಹತ್ವಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಹೇಳಿದರು.

ಸ್ವಚ್ಛವಾಯಿತು ಬೆಂಗ್ರೆ
ಮಹಾಜನ ಸಭಾ ಬೆಂಗ್ರೆ ಅಮಲ ಭಾರತ ಸ್ವಚ್ಛತಾ ಅಭಿಯಾನದಲ್ಲಿ ಕೈ ಜೋಡಿಸುವ ಮೂಲಕ ಬೆಂಗ್ರೆಯ ಪರಿಸರದ ಸ್ವಚ್ಛತಾಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಸ್ಥಳೀಯ ಕಾರ್ಪೋರೇಟರ್ ಮೀರಾ ಕರ್ಕೇರಾ, ಸಭಾದ ಅಧ್ಯಕ್ಷ ಚೇತನ್ ಬೆಂಗ್ರೆ, ಕಾರ್ಯದರ್ಶಿ ಸಂಜಯ್ ಸುವರ್ಣ, ರೋಟರಿ ಮಂಗಳೂರು ಕಾರ್ಯದರ್ಶಿ ಪ್ರಸನ್ನ ಶೆಣೈ, ನಾಗರಾಜ್ ಸೇರಿದಂತೆ ಊರಿನ ಹಲವು ಮಂದಿ ಯುವಕರು ಬೆಂಗ್ರೆ ಪರಿಸರದಲ್ಲಿ ರಾಶಿ ಬಿದ್ದಿದ್ದ ಕಸ ಕಡ್ಡಿಗಳನ್ನು ತೆಗೆದು ಶುಚಿಗೊಳಿಸಿದರು, ಇಲ್ಲಿನ ಸ್ಮಶಾನ ಪರಿಸರದಲ್ಲಿಯೂ ಯುವಕರ ತಂಡ ಲವಲವಿಕೆಯಿಂದ ಸ್ವತ್ಛತಾ ಕಾರ್ಯದಲ್ಲಿ ಭಾಗಿಯಾಯಿತು.

ಬೋಳೂರಿನಲ್ಲಿ ಡಾರ್ಕ್ ಈಗಲ್ಸ್ ಭಾಗಿ
ಡಾರ್ಕ್ ಈಗಲ್ಸ್ ಬೋಳೂರು, ಬತ್ತೇರಿ ಫ್ರೆಂಡ್ಸ್ ಹಾಗೂ ಭಗವಾನ್ ಶ್ರೀ ಮಹಾವಿಷ್ಣು ಶೇಷ ಶಯನ ಭಜನಾ ಮಂದಿರ ಇದರ ನೇತೃತ್ವದಲ್ಲಿ ಬೋಳೂರು ಮತ್ತು ಸುಲ್ತಾನ್ ಬತ್ತೇರಿ ಪ್ರದೇಶದಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಶುಚಿತ್ವ ಕಾರ್ಯ ನಡೆಯಿತು. ಯುವಕರ ತಂಡ ಉತ್ಸುಕತೆಯಿಂದ ಸ್ವಚ್ಛತಾಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿತು. ಪ್ರಕಾಶ್ ಕರ್ಕೇರ ಅವರ ನೇತೃತ್ವದಲ್ಲಿ ಡಾರ್ಕ್ ಈಗಲ್ಸ್‌ನ ರತನ್ ನಾಯಕ್, ರಾಹುಲ್ ಶೆಟ್ಟಿ, ನವನೀತ್ ಸೇರಿದಂತೆ ಹಲವು ಮಂದಿ ಯುವಕರು ಪಾಲ್ಗೊಂಡರು. ಶ್ರೀ ಮಹಾವಿಷ್ಣು ಶೇಷ ಶಯನ ಭಜನಾ ಮಂದಿರ ನೇತೃತ್ವದಲ್ಲಿ ನಡೆದ ಅಭಿಯಾನದಲ್ಲಿ ದೀಪಕ್, ಗಣೇಶ್ ಶ್ರೇಯಾಂಕ್, ಶ್ರವಣ್, ಪ್ರವೀಣ್, ಗಗನ್, ವಿಶ್ವಾಸ್, ಪುನಿತ್, ಉಮೇಶ್ ಮತ್ತಿತರರು ಪಾಲ್ಗೊಂಡರು.

ಎನ್‌ಎಸ್‌ಎಸ್ ವಿದ್ಯಾರ್ಥಿಗಳ ಸಾಥ್
ಪದುವಾದಲ್ಲಿ ನಡೆದ ಸ್ವಚ್ಛತಾ ಅಭಿಯಾನದ ನೇತೃತ್ವವನ್ನು ರಾಜೇಶ್ ವಹಿಸಿದ್ದರು. ಈ ಭಾಗದಲ್ಲಿ ಪದುವಾ ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಪಾಲ್ಗೊಂಡರು. ಸಂಘಟಕರಾದ ಶ್ರೀನಿವಾಸ ಶೆಟ್ಟಿಗಾರ್, ಕೆ.ರವೀಂದ್ರನಾಥ್, ಪ್ರೇಮರಾಜ್,ದೇವರಾವ್ ಬೆಳ್ಳೆ , ಸುಧಾಕರ ಭಟ್ ಮತ್ತಿತರರು ಭಾಗವಹಿಸಿದ್ದರು.


Spread the love

Exit mobile version