‘ಅಮವಾಸ್ಯೆ’ಬೈಲಿನ ಕುಗ್ರಾಮಕ್ಕೆ ಬೆಳಕು ಹರಿಸಿದ ಛಲವಂತ ಕೊಡ್ಗಿ: ಕಲ್ಲಡ್ಕ ಪ್ರಭಾಕರ ಭಟ್

Spread the love

‘ಅಮವಾಸ್ಯೆ’ಬೈಲಿನ ಕುಗ್ರಾಮಕ್ಕೆ ಬೆಳಕು ಹರಿಸಿದ ಛಲವಂತ ಕೊಡ್ಗಿ: ಕಲ್ಲಡ್ಕ ಪ್ರಭಾಕರ ಭಟ್

ಕುಂದಾಪುರ: ಸೂರ್ಯನನ್ನು ವರ್ಣಿಸುವುದು ಎಷ್ಟು ಕಷ್ಟವೋ ಎ.ಜಿ ಕೊಡ್ಗಿಯವರನ್ನು ವರ್ಣಿಸುವುದು ಅಷ್ಟೇ ಕಷ್ಟ. ಅವರು ಸೇವೆ ಸಲ್ಲಿಸದ ಕ್ಷೇತ್ರಗಳೇ ಇಲ್ಲ. ಎಷ್ಟೇ ಉನ್ನತ ಹುದ್ದೆಗೇರಿದರೂ ಕೂಡ ತನ್ನೂರ ಅಭಿವೃದ್ದಿ ಮರೆತವರಲ್ಲ. ಅಮಾಸೆಬೈಲಿನಂತಹ ಕತ್ತಲೆಯ ಕುಗ್ರಾಮಕ್ಕೆ ಸೂರ್ಯನ ಶಕ್ತಿಯಿಂದ ಬೆಳಕನ್ನು ಹರಿಸಿದ ಕೀರ್ತಿ ಎ.ಜಿ ಕೊಡ್ಗಿಯವರಿಗೆ ಸಲ್ಲುತ್ತದೆ. ತನ್ನೂರಿಗೆ ಅಮವಾಸ್ಯೆ ಎನ್ನುವ ಪದ‌ ಬದಲಿಸಿ ಅದಕ್ಕೆ ಹುಣ್ಣಿಮೆಯ‌ ಪೂರ್ಣ ಚಂದಿರನ‌ ರೂಪ ಕೊಟ್ಟ ಛಲವಂತ ಅವರು ಎಂದು ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ‌ ಪ್ರಭಾಕರ‌ ಭಟ್ ಹೇಳಿದರು.

ಅಮಾಸೆಬೈಲಿನ ಪ್ರೌಢ ಶಾಲಾ ವಠಾರದಲ್ಲಿ‌ ಭಾನುವಾರ ಹಿರಿಯ ಮುತ್ಸದ್ದಿ ಎ.ಜಿ ಕೊಡ್ಗಿಯವರ ವೈಕುಂಠ ಸಮಾರಾಧನೆಯ ಅಂಗವಾಗಿ ನಡೆದ ಶ್ರದ್ದಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

ಯಾರೇ ಆಗಿರಲಿ. ಸತ್ಯ, ನ್ಯಾಯ, ಧರ್ಮದ ಪ್ರಕಾರ‌ ಹೋಗಬೇಕಾದರೆ ಅನೇಕ ಬಾರಿ‌ ನಿಷ್ಠೂರವಾದಿಯಾಗಲೇಬೇಕು. ಕೊಡ್ಗಿಯವರು ಬದುಕಿನ ಕೊನೆ ತನಕವೂ ನೇರ-ನಿಷ್ಠೂರವಾದಿಯಾಗಿಯೇ ಜೀವನ ಸವೆಸಿದವರು. ಹೊಂದಾಣಿಕೆಯ ವ್ಯವಸ್ಥೆ ಅವರಲ್ಲಿರಲಿಲ್ಲ. ಅಧ್ಯಯನಶೀಲರಾದ ಅವರು ಅದರ ಆಧಾರದಲ್ಲೇ ಎಲ್ಲಾ‌ ಕೆಲಸಗಳನ್ನು‌ ಮಾಡುತ್ತಾ ಯಶ ಕಂಡವರು. ರಾಜಕೀಯ ವ್ಯವಸ್ಥೆಗಳು ಬದಲಾದರೂ ಕೊಡ್ಗಿಯವರ ವ್ಯಕ್ತಿತ್ವ ಬದಲಾಗಲಿಲ್ಲ. ಅವರೆಂದೂ ಭ್ರಷ್ಟಾಚಾರವನ್ನು ಒಪ್ಪಿಕೊಂಡವರಲ್ಲ. ತಾನು ಕೆಲಸ‌ ಮಾಡಿದ‌ ಕ್ಷೇತ್ರಗಳಲ್ಲೆಲ್ಲಾ ಪ್ರಾಮಾಣಿಕತೆಯನ್ನು ಉಳಿಸಿಕೊಂಡು ಬಂದವರು ಎಂದರು.

ಪ್ರೌಢ ಶಾಲೆಯಲ್ಲಿದ್ದಾಗಲೇ ಕ್ವಿಟ್‌ ಇಂಡಿಯಾ ಚಳವಳಿಯಲ್ಲಿ ಪಾಲ್ಗೊಂಡ ಕೊಡ್ಗಿಯವರು ಒಂದು‌ ಗಂಟೆಯ ಜೈಲು ಶಿಕ್ಷೆಯನ್ನೂ ಅನುಭವಿಸಿ ಚಿಕ್ಕಂದಿನಿಂದಲೇ ರಾಷ್ಟ್ರೀಯ ಚಿಂತನೆಯನ್ನು ಮೈಗೂಡಿಸಿಕೊಂಡಿದ್ದ‌ವರು. ಕಾಂಗ್ರೆಸ್ ರಾಷ್ಟ್ರೀಯ‌ ಚಿಂತನೆಯ ವೇದಿಕೆ‌ ಎಂದು ಅನೇಕ‌ ವರ್ಷಗಳ‌ ಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದು, ಎರಡು ಅವಧಿಗೆ ಶಾಸಕರಾಗಿದ್ದರು. ಆದರೆ ಕಾಂಗ್ರೆಸ್ ನಿಧಾನವಾಗಿ ರಾಷ್ಟ್ರೀಯ ಚಿಂತನೆಯಿಂದ‌‌ ದೂರ ಸರಿಯುತ್ತಿದ್ದಂತೆ ನೈಜ ರಾಷ್ಟ್ರೀಯ ಚಿಂತನೆ‌ ಇರುವ ಪಕ್ಷವನ್ನು ಆಯ್ಕೆ ಮಾಡಿಕೊಂಡು ಬಿಜೆಪಿ ಪಕ್ಷಕ್ಕೆ‌ ಸೇರ್ಪಡೆಯಾದರು. ಭಾಜಪದೊಂದಿಗೆ ಭಾರೀ ದೊಡ್ಡ ಶಕ್ತಿಯಾಗಿ ಕೆಲಸ‌ ಮಾಡಿದ ಎ.ಜಿ ಕೊಡ್ಗಿಯವರು ಅನೇಕ ರಾಜಕೀಯ ನಾಯಕರನ್ನು ಬೆಳೆಸಿದ್ದಾರೆ. ಹಾಲಾಡಿ ಶ್ರೀನಿವಾಸ ಶೆಟ್ಟಿ, ಶೋಭಾ ಕರಂದ್ಲಾಜೆ ಸೇರಿದಂತೆ ಅನೇಕರಿಗೆ ಪ್ರೇರಣೆ ನೀಡಿದವರು. ಹೈನುಗಾರಿಕೆಯನ್ನೇ ಪ್ರಮುಖವಾಗಿಸಿಕೊಂಡು ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡವರು. ಮಳೆಯಿಂದ‌ ಇಳೆಗೆ ಅಲ್ಲಿಂದ‌ ಹೊಳೆಗೆ, ಬಳಿಕ ಬೆಳೆಗೆ, ಬೆಳೆಯುತ್ತಿರುವ ರೈತನ‌‌ ಕಣ್ಣೀರಿನ ಕೊಳೆಯನ್ನು ತೊಳೆದು ಅವರ ಮೊಗದಲ್ಲಿ ಮಂದಹಾಸದ ಕಳೆಯನ್ನು ಬೀರಿದ ಬಹುದೊಡ್ಡ ಪ್ರಯತ್ನ ಕೊಡ್ಗಿಯವರದು. ಕೊಡ್ಗಿಯವರು ರಾಜಕೀಯ ಕ್ಷೇತ್ರದಲ್ಲಿದ್ದರೂ ಕೃಷಿಯನ್ನು ಕೈಬಿಟ್ಟಿಲ್ಲ. ಭಾರತ ಇರುವುದು ಹಳ್ಳಿಯ ಆಧಾರ ಮೇಲೆ. ಹಳ್ಳಿ ಜನರ ಬದುಕು ಹಸನಾದರೆ ದೇಶದ ಬದುಕು ಹಸನಾದಂತೆ ಎಂದು ಹಳ್ಳಿಯ ಜನರು ಬದುಕು‌ ಕಟ್ಟಿಕೊಳ್ಳಲು ಕಾರ್ಖಾನೆಗಳನ್ನು ಸ್ಥಾಪಿಸಿ ಹಳ್ಳಿಗಳ ಅಭಿವೃದ್ದಿಯಲ್ಲೂ ವಿಶೇಷ ಪಾತ್ರ ವಹಿಸಿದವರು ಎಂದರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ‌ ಮಾತನಾಡಿ, ಕಾರಂತರ ಊರಲ್ಲಿ ಹುಟ್ಟಿ ಬೆಳೆದ ನಾನು ಅವರ ಜೀವನೋತ್ಸಾಹವನ್ನು ಬಹಳ ಹತ್ತಿರದಿಂದಲೇ ನೋಡಿ ದಿಗ್ಬ್ರಮೆಗೊಂಡವನು. ಕಾರಂತರ ನಂತರ ಈ ನಾಡಿನಲ್ಲಿ ನನ್ನ‌ ಬದುಕಿಗೆ ನಿಲುಕಿದ ಮತ್ತೊಬ್ಬ ಜೀವನೋತ್ಸಾಹದ ಚೇತೋಹಾರಿ ವ್ಯಕ್ತಿ ಇದ್ದರೆ ಅದು ಎ.ಜಿ ಕೊಡ್ಗಿಯವರು. ಕೊಡ್ಗಿಯವರ ವಿಚಾರಗಳು, ಬದ್ದತೆಗಳು, ಅವರೊಂದಿಗಿನ ಭಾವನಾತ್ಮಕ ಸಂಬಂಧಗಳು, ಕಲ್ಮಶವಿಲ್ಲದ‌ ಅವರ ಮನಸ್ಸು, ನೇರ-ನುಡಿಯ ಅವರ ದಿಟ್ಟತನ ಮತ್ತವರ ಗಟ್ಟಿತನ‌ ಇವೆಲ್ಲವೂ ನನಗೆ ಅತ್ಯಂತ ಅಚ್ಚರಿ ಹಾಗೂ ಕುತೂಹಲ‌ ಮೂಡಿಸಿತ್ತು. ಕೊಡ್ಗಿಯವರ ಬದುಕಿನಲ್ಲಿ ಅಸ್ಪೃಶ್ಯತೆಯ ಕಲ್ಪನೆಗಳಿರಲಿಲ್ಲ. ಸಮಪಾಲು- ಸಮಬಾಳ್ವೆಗೆ ಅವರಲ್ಲಿರುವಂತಹ ಬದ್ದತೆಯನ್ನು ಬೇರ್ಯಾವ ವ್ಯಕ್ತಿಯಲ್ಲೂ ನಾನು ಕಂಡಿಲ್ಲ‌. ಈ ಎಲ್ಲಾ ಹಿನ್ನೆಯಲ್ಲಿ‌ ಕೊಡ್ಗಿಯವರ ವ್ಯಕ್ತಿತ್ವಕ್ಕೆ ಸರಿಗಟ್ಟುವ ವ್ಯಕ್ತಿಯನ್ನು ಕಾಣುವುದು ಅತ್ಯಂತ ಕಷ್ಟಸಾಧ್ಯ. ನಾನು ಮ್ಮೆಯಾದರೂ ವಿಧಾನಸಭೆಯಲ್ಲಿ ಮಾತನಾಡುವ‌ ಕನಸು ಅವರಲ್ಲಿತ್ತು. ನಾಲ್ಕು ಭಾರಿ ಶಾಸಕನಾಗಲು ಹಾಗೂ ಮೂರು ಬಾರಿ ಸಚಿವನಾಗಲು, ಒಮ್ಮೆ ವಿರೋಧಪಕ್ಷದ ನಾಯಕನಾಗಲು ಅವಕಾಶ ಸಿಕ್ಕಿತು. ಈ ಎಲ್ಲಾ ಅವಕಾಶಗಳ ಹಿಂದೆ ಕೊಡ್ಗಿಯವರ ಶ್ರಮ, ಪ್ರೀತಿ, ಕಾಳಜಿ ಇತ್ತು. ವೈಯಕ್ತಿಕ ದ್ವೇಶದಿಂದ‌ ರಾಜಕಾರಣದಲ್ಲಿ‌ ಏನೂ ಸಾಧ್ಯವಿಲ್ಲ. ಬದ್ದತೆ, ಸ್ಪಷ್ಟತೆ ನೇರತನ ಇರಬೇಕು ಎನ್ನುತ್ತಾ ನಮಗೆ ಮಾರ್ಗದರ್ಶನ ನೀಡುತ್ತಾ ಬಂದ ಕೊಡ್ಗಿಯವರು ಇಲ್ಲ ಎನ್ನುವುದು ನಮಗೆಲ್ಲಾ ಅತ್ಯಂತ ನೋವಿನ‌ ಸಂಗತಿ ಎಂದರು.

ಮಾಜಿ ಶಾಸಕ ಬಿ.ಅಪ್ಪಣ್ಣ ಹೆಗ್ಡೆ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ, ಶಾಸಕ ಬಿ.ಎಮ್ .ಸುಕುಮಾರ್ ಶೆಟ್ಟಿ, ಕರ್ನಾಟಕ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್.ಮಹಾಬಲೇಶ್ವರ ಭಟ್ ನುಡಿ-ನಮನ ಅರ್ಪಿಸಿದರು.

ಶಾಸಕ‌ರಾದ ಹಾಲಾಡಿ‌ ಶ್ರೀನಿವಾಸ ಶೆಟ್ಟಿ, ಲಾಲಾಜಿ ಆರ್ ಮೆಂಡನ್, ವೇದವ್ಯಾಸ ಕಾಮತ್, ದ.ಕ ಜಿಲ್ಲಾ‌ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಮ್.ಎನ್.ರಾಜೇಂದ್ರ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ, ಎ.ರಾಮಕೃಷ್ಣ ಕೊಡ್ಗಿ, ಎ.ಅನಂತಕೃಷ್ಣ ಕೊಡ್ಗಿ, ಡಾ.ರಾಧಾಕೃಷ್ಣ ಕೊಡ್ಗಿ, ಅಶೋಕ್ ಕುಮಾರ್ ಕೊಡ್ಗಿ, ಕಿಶೋರ್ ಕುಮಾರ್ ಕೊಡ್ಗಿ, ಆನಂದ್ ಕುಮಾರ್ ಕೊಡ್ಗಿ, ಕೃಷ್ಣ ಕುಮಾರ್ ಕೊಡ್ಗಿ, ಕಿರಣ್ ಕುಮಾರ್ ಕೊಡ್ಗಿ ಹಾಗೂ ಎ.ಜಿ.ಕೊಡ್ಗಿ ಅವರ ಪುತ್ರಿ ಶಶಿ ಇದ್ದರು.

ಪತ್ರಕರ್ತ ರಾಜೇಶ್ ಕೆ.ಸಿ ನಿರೂಪಿಸಿದರು.


Spread the love