
ಅಮಾಯಕರ ಹತ್ಯೆ: ಜಿಲ್ಲೆಯ ಕಾನೂನು ಸುವ್ಯವಸ್ಥೆಗೆ ಹಿಡಿದ ಕೈಗನ್ನಡಿ – ಅಕ್ಷಿತ್ ಸುವರ್ಣ
ಮಂಗಳೂರು: ಕ್ಷುಲ್ಲಕ ಕಾರಣಗಳಿಗಾಗಿ ದಕ ಜಿಲ್ಲೆಯಲ್ಲಿ ಅಮಾಯಕರನ್ನು ಕೊಲೆಗೈಯ್ಯುತ್ತಿರುವುದು ಹದಗೆಟ್ಟಿರುವ ಶಾಂತಿ ಸುವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ದಕ ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ ಹೇಳಿದ್ದಾರೆ.
ಸುರತ್ಕಲ್ ನಲ್ಲಿ ಅಂಗಡಿ ನಡೆಸಿಕೊಂಡಿದ್ದ ಅಮಾಯಕ ಜಲೀಲ್ ಅವರನ್ನು ದುಷ್ಕರ್ಮಿಗಳು ಚೂರಿಯಿಂದ ಇರಿದು ಕೊಲೆಗೈದಿರುವುದು ಖಂಡನಾರ್ಹವಾಗಿದೆ. ಅಮಾಯಕರನ್ನು ಗುರಿಯಾಗಿಸಿ ಕೊಲೆ ಮಾಡುತ್ತಿರುವ ದುಷ್ಕರ್ಮಿಗಳನ್ನು ಪೊಲೀಸರು ಕೂಡಲೇ ಬಂಧಿಸಬೇಕು. ಆರೋಪಿಗಳು ಯಾವುದೇ ಧರ್ಮ ಜಾತಿ, ಪಕ್ಷಕ್ಕೆ ಸೇರಿದ್ದರೂ ಕೂಡ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮವನ್ನು ಕೈಗೊಳ್ಳಬೇಕು
ದಕ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ನೈತಿಕ ಪೊಲೀಸ್ ಗಿರಿ, ಕೊಲೆಗಳಿಂದ ಜಿಲ್ಲೆಗೆ ಕೆಟ್ಟ ಹೆಸರು ಬರುತ್ತಿದ್ದು ಆಳುವ ಪಕ್ಷ ಇದರ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಶಿಕ್ಷಣಕ್ಕೆ ಹೆಸರಾದ ಜಿಲ್ಲೆಗೆ ಬೇರೆ ರಾಜ್ಯ ದೇಶದಿಂದ ವಿದ್ಯಾರ್ಥಿಗಳು ಆಗಮಿಸುತ್ತಿದ್ದು ಇಂತಹ ಘಟನೆಗಳಿಂದ ಇಲ್ಲಿ ವಾಸ ಮಾಡಲು ಭಯಪಡುವಂತಹ ವಾತಾವರಣ ನಿರ್ಮಾಣವಾಗಿದೆ. ಪೊಲೀಸ್ ಇಲಾಖೆ ಜನರಲ್ಲಿ ಧ್ಯೇರ್ಯ ಮೂಡಿಸುವ ಕೆಲಸ ಮಾಡಬೇಕಾಗಿದೆ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪಶ್ಚಾತ್ತಾಪ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾದೀತು. ಈ ನಿಟ್ಟಿನಲ್ಲಿ ಪೊಲೀಸರು ಕೂಡಲೇ ಕಾರ್ಯ ಪ್ರವೃತ್ತರಾಗಿ ಶೀಘ್ರವೇ ಆರೋಪಿಗಳನ್ನು ಬಂಧಿಸುವಂತೆ ಅವರು ಆಗ್ರಹಿಸಿದ್ದಾರೆ.