Home Mangalorean News Kannada News ಅಮಾಯಕ ಹಿಂದೂ ಕಾರ್ಯಕರ್ತರ ಬಂಧನ ನಿಲ್ಲಿಸಿ- ಯಶ್‌ಪಾಲ್ ಸುವರ್ಣ

ಅಮಾಯಕ ಹಿಂದೂ ಕಾರ್ಯಕರ್ತರ ಬಂಧನ ನಿಲ್ಲಿಸಿ- ಯಶ್‌ಪಾಲ್ ಸುವರ್ಣ

Spread the love

ಅಮಾಯಕ ಹಿಂದೂ ಕಾರ್ಯಕರ್ತರ ಬಂಧನ ನಿಲ್ಲಿಸಿ- ಯಶ್‌ಪಾಲ್ ಸುವರ್ಣ

ಉಡುಪಿ: ಪೆರ್ಡೂರಿನಲ್ಲಿ ಅಕ್ರಮ ದನಸಾಗಾಟಗಾರನೋರ್ವ ಅಸಹಜವಾಗಿ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿ ಪೊಲೀಸ್ ಇಲಾಖೆ ಹಿರಿಯಡ್ಕ ಮತ್ತು ಪೆರ್ಡೂರು ಪರಿಸರದ ಮನೆ ಮನೆಗಳಿಗೆ ನುಗ್ಗಿ ಹಿಂದೂ ಕಾರ್ಯಕರ್ತರ ಮೇಲೆ ದೌರ್ಜನ್ಯ ಎಸಗುತ್ತಿದೆ. ಈ ಗಾಗಲೇ ಸಾಕಷ್ಟು ಅಮಾಯಕ ಯುವಕರನ್ನು ಬಂಧಿಸಿರುವ ಪೊಲೀಸರು ಉದ್ಧೇಶಪೂರ್ವಕವಾಗಿ ಹಿಂದೂ ಕಾರ್ಯಕರ್ತರನ್ನು ಬಗ್ಗುಬಡಿಯಲು ಷಡ್ಯಂತ್ರ ಹೂಡಿದ್ದಾರೆ. ಈ ಅನ್ಯಾಯವನ್ನು ಪೊಲೀಸರು ಕೂಡಲೆ ನಿಲ್ಲಿಸದಿದ್ದರೆ ಜಿಲ್ಲೆಯಾದ್ಯಂತ ಉಗ್ರ ಪ್ರತಿಭಟನೆಗೆ ಮುಂದಾಗ ಬೇಕಾಗುತ್ತದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್ ಸುವರ್ಣ ಅವರು ಪೊಲೀಸ್ ಇಲಾಖೆಯನ್ನು ಎಚ್ಚರಿಸಿದ್ದಾರೆ.

ಮಂಗಳೂರು ಜೋಕಟ್ಟೆ ಮೂಲದ ಕುಖ್ಯಾತ ಗೋಸಾಗಾಟಗಾರ ಹುಸೇನಬ್ಬ ಈ ಹಿಂದೆಯೂ ಹಲವಾರು ಬಾರಿ ಅಕ್ರಮ ಗೋಸಾಗಾಟಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿದ್ದ ವ್ಯಕ್ತಿ ಮೊನ್ನೆ ತನ್ನ ಸಹಚರರ ಜೊತೆ ಪೆರ್ಡೂರಿಗೆ ಬಂದು ಸುಮಾರು ಇಪ್ಪತ್ತಕ್ಕೂ ಅಧಿಕ ಗೋವುಗಳನ್ನು ಅಕ್ರಮವಾಗಿ ಅಮಾನುಷ ರೀತಿಯಲ್ಲಿ ವಾಹನವೊಂದಕ್ಕೆ ತುರುಕಿ ಸಾಗಿಸಲು ಮುಂದಾಗಿದ್ದಾನೆ. ಈ ಬಗ್ಗೆ ಮಾಹಿತಿ ಸಿಕ್ಕಿದ ಕೂಡಲೆ ಹಿರಿಯಡ್ಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿ ಹುಸೇನಬ್ಬನನ್ನು ಬಂಧಿಸಿದ್ದಾರೆ. ಉಳಿದ ಮೂವರು ಗೋಸಾಗಾಟಗಾರರು ಪರಾರಿಯಾಗಿದ್ದಾರೆ. ಪೊಲೀಸರು ಹುಸೇನಬ್ಬನನ್ನು ವಶಕ್ಕೆ ಪಡೆದು ಸ್ಥಳದಲ್ಲೇ ವಿಚಾರಿಸಿ ಬಳಿಕ ಠಾಣೆಗೆ ಕರೆ ತರುವ ವೇಳೆ ಆರೋಪಿ ಹುಸೇನಬ್ಬ ಹೃದಯಾಘಾತದಿಂದ ಸಾವನಪ್ಪಿರುತ್ತಾನೆ. ಈ ಸಾವಿಗೆ ಇದೀಗ ಸಂಘಟನೆಯ ಯುವಕರನ್ನು ಹೊಣೆಯಾಗಿಸಿ ಮೂವತ್ತಕ್ಕೂ ಅಧಿಕ ಪ್ರಮುಖ ಕಾರ್ಯಕರ್ತರನ್ನು ವಿನಾಕಾರಣ ಪ್ರಕರಣದಲ್ಲಿ ಸಿಲುಕಿಸುವ ಹುನ್ನಾರ ನಡೆದಿದೆ. ಕಳೆದ ಚುನಾವಣೆಯಲ್ಲಿ ಜನರಿಂದ ಸಂಪೂರ್ಣವಾಗಿ ತಿರಸ್ಕರಿಸಲ್ಪಟ್ಟ ಹಿಂದೂ ವಿರೋಧಿ ರಾಜಕೀಯ ಪುಡಾರಿಗಳು ಈಗ ಪೊಲೀಸ್ ಇಲಾಖೆಯನ್ನು ಬಳಸಿಕೊಂಡು ಹಿಂದೂ ಸಮಾಜವನ್ನು ದಮನಿಸಲು ಮುಂದಾಗಿದ್ದಾರೆ. ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿಯಿಂದಲೇ ಐಜಿ ಅವರಿಗೆ ಕರೆ ಬಂದಿದ್ದು ಅವರ ಸೂಚನೆಯ ಮೇರೆಗೆ ಹಿಂದೂ ಸಂಘಟನೆಗಳ ಮುಖಂಡರ ಬಂಧನಕ್ಕೆ ಭೂಮಿಕೆ ಸಿದ್ಧವಾಗಿದೆ ಎಂಬ ಮಾಹಿತಿ ಇದೆ.

ಈ ಅಸಹಜ ಸಾವು ಕೊಲೆಯಾಗಿದ್ದೇ ಹೌದಾದರೆ ಅದರ ನಿಸ್ಪಕ್ಷಪಾತ ತನಿಖೆ ನಡೆಯಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಅದರ ಬದಲಾಗಿ ಸಂಘಟನೆಯ ವಿರುದ್ಧ ರಾಜಕೀಯ ದ್ವೇಷ ಸಾಧನೆಗೆ ಇಳಿದರೆ ಇದರ ಪರಿಣಾಮ ಅತ್ಯಂತ ಗಂಭಿರವಾಗುತ್ತದೆ. ಒಂದು ವೇಳೆ ಅಮಾಯಕ ಹಿಂದೂ ಕಾರ್ಯಕರ್ತರನ್ನು ಹಿಂಸಿಸುವ ಪ್ರವೃತ್ತಿಯನ್ನು ಪೊಲೀಸರು ನಿಲ್ಲಿಸದೇ ಹೋದರೆ ಈ ಅನ್ಯಾಯದ ವಿರುದ್ಧ ವ್ಯಾಪಕ ಜನಾಂದೋಲನ ನಡೆಸಿ ಇಡೀ ಕರಾವಳಿಯಾದ್ಯಂತ ಸರಕಾರದ ವಿರುದ್ಧ ಉಗ್ರ ಹೋರಾಟ ಕೈಗೊಳ್ಳಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಪೊಲೀಸರನ್ನು ಕಂಡ ತಕ್ಷಣ ಹುಸೇನಬ್ಬನ ತಂಡ ಪರಾರಿಯಾಗಿರುವುದನ್ನು ಗಮನಿಸಿದಾಗ ಇದೊಂದು ಅಕ್ರಮ ದಂಧೆ ಎನ್ನುವುದು ಸ್ಪಷ್ಟವಾಗುತ್ತದೆ. ಕತ್ತಲಲ್ಲಿ ಪರಾರಿಯಾದ ಗೋಕಳ್ಳರ ಕೈಯಿಂದಲೇ ದೂರು ಬರೆಸಿ ಅವರನ್ನೇ ಸಾಕ್ಷಿಗಳಾಗಿ ಪರಿಗಣಿಸಿ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ರಾಜ್ಯದ ಕುಮಾರಸ್ವಾಮಿ ಸರಕಾರ ಮತ್ತು ಅದರ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಪೊಲೀಸ್ ಇಲಾಖೆ ಸಂಪೂರ್ಣವಾಗಿ ಗೋಗಳ್ಳರ ಬೆನ್ನಿಗೆ ನಿಂತಿದೆ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಹಿರಿಯಡ್ಕ ಠಾಣೆಯ ಪೊಲೀಸ್ ಅಧಿಕಾರಿಯನ್ನು ಮತ್ತು ಇಬ್ಬರು ಸಿಬ್ಬಂದಿಗಳನ್ನು ಬಂಧಿಸಿ ಜೈಲಿಗಟ್ಟಿರುವ ಹಿಂದೆ ಪೊಲೀಸರ ಮನೋಬಲವನ್ನು ಕಸಿಯುವ ಸಂಚು ಅಡಗಿದೆ. ಕರಾವಳಿಯಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಗೋಕಳ್ಳತನದ ವಿರುದ್ಧ ಬೆರಳೆಣಿಕೆಯಷ್ಟು ದಕ್ಷ ಪೊಲೀಸ್ ಅಧಿಕಾರಿಗಳು ಯಾವ ಪ್ರಭಾವವನ್ನೂ ಲೆಕ್ಕಿಸದೆ ಕಠಿಣ ಕ್ರಮ ಕೈಗೊಳ್ಳುತ್ತಿದ್ದರು. ಇಂತಹ ಅಧಿಕಾರಿಗಳಿಗೆ ರಾಜ್ಯದ ಕುಮಾರಸ್ವಾಮಿ ಸರಕಾರ ನೇರವಾಗಿ ಎಚ್ಚರಿಕೆಯ ಸಂದೇಶ ನೀಡಿದೆ. ಗೋಗಳ್ಳರ ವಿರುದ್ಧ ಕ್ರಮಕ್ಕೆ ಮುಂದಾದರೆ ನಿಮಗೂ ಇದೇ ಗತಿ ಎಂಬ ಎಚ್ಚರಿಕೆಯನ್ನು ಸರಕಾರ ನೀಡಿದೆ. ಹಿಂದೆ ತನಿಗೋಡು ಎನ್‌ಕೌಂಟರ್ ಪ್ರಕರಣದಲ್ಲೂ ಪೊಲೀಸ್ ಸಿಬ್ಬಂದಿಯ ಮೇಲೆ ಕೊಲೆ ಕೇಸು ದಾಖಲಿಸಿ ಆತನ ಭವಿಷ್ಯವನ್ನೇ ನಾಶ ಮಾಡಲಾಗಿತ್ತು. ಗೋಹಂತಕರ ಪರವಾಗಿ ಈ ಹಿಂದೂ ವಿರೋಧಿ ರಾಜಕಾರಣಿಗಳು ಹೆಣೆದಿರುವ ಬಲೆಗೆ ಪೊಲೀಸ್ ಅಧಿಕಾರಿಗಳೂ ಬಲಿಯಾಗುತ್ತಿರುವುದು ವಿಪರ್ಯಾಸ.

ಹಿರಿಯ ಅಧಿಕಾರಿಗಳು ಕೂಡಲೆ ಅಮಾಯಕ ಹಿಂದೂ ಕಾರ್ಯಕರ್ತರನ್ನು ಬಿಡುಗಡೆಗೊಳಿಸಬೇಕು. ಹಿಂದೂ ಕಾರ್ಯಕರ್ತರನ್ನು ಹುಡುಕುತ್ತಾ ಮನೆಮನೆಗೆ ನುಗ್ಗಿ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿರುವ ಪೊಲೀಸ್ ಸಿಬ್ಬಂದಿಗಳನ್ನು ಎಚ್ಚರಿಸಬೇಕು. ವಿನಾಕಾರಣ ಕಾರ್ಯಕರ್ತರನ್ನು ಬಂಧಿಸಿ ದೈಹಿಕ ಹಲ್ಲೆ ನಡೆಸಿದ ಎಂಟಕ್ಕೂ ಅಧಿಕ ಪ್ರಕರಣಗಳಿವೆ. ಈ ದೌರ್ಜನ್ಯವನ್ನು ನಿಲ್ಲಿಸದಿದ್ದರೆ ಮುಂದೆ ಆಗುವ ಅನಾಹುತಗಳಿಗೆ ಪೊಲೀಸರು ಹೊಣೆಯಾಗುತ್ತಾರೆ ಎಂದು ಯಶ್‌ಪಾಲ್ ಸುವರ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version