
ಅಮಿತ್ ಶಾ ರೋಡ್ ಶೋ ಮಾಡುವ ಮೊದಲು ಜನರ ಸಮಸ್ಯೆ ನಿವಾರಿಸಲಿ: ಐವನ್ ಡಿಸೋಜ
ಮಂಗಳೂರು: ‘ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಗಳೂರಿಗೆ ಬಂದು ಇಲ್ಲಿ ರೋಡ್ ಶೋ ಮಾಡುವ ಮೊದಲು ಜನರ ಸಮಸ್ಯೆ ನಿವಾರಿಸಲು ಗಮನಹರಿಸಲಿ’ ಎಂದು ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜ ಆಗ್ರಹಿಸಿದರು.
ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಮಾಜದಲ್ಲಿ ಹಲವಾರು ಜ್ವಲಂತ ಸಮಸ್ಯೆಗಳು ಇವೆ.
ನಿರುದ್ಯೋಗ, ಬಡತನ, ಬೆಲೆ ಏರಿಕೆಯಿಂದ ಜನರು ತೊಂದರೆಗೆ ಒಳಗಾಗಿದ್ದಾರೆ. ಸಾಲದ ಮೇಲಿನ ಬಡ್ಡಿದರ ಹೆಚ್ಚಳ ಜನರಿಗೆ ಹೊರೆಯಾಗಿದೆ. ಬಿಜೆಪಿ ಆಡಳಿತದಿಂದ ಜನರು ಬೇಸತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸೂಚನೆ ದೊರೆತಿದೆ. ಹೀಗಾಗಿ, ಅಮಿತ್ ಶಾ ಇಲ್ಲಿ ಬಂದು ರೋಡ್ ಶೋ ಮಾಡುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿ ಸರ್ಕಾರಿ ವೆಚ್ಚದಲ್ಲಿ ಕಾರ್ಯಕ್ರಮ ಮಾಡಲಾಗುತ್ತಿದೆ’ ಎಂದು ಟೀಕಿಸಿದರು.
‘ಅಡಿಕೆ ಬೆಳೆಗಾರರಿಗೆ ತೊಂದರೆ ಆದಾಗ ಕೇಂದ್ರ ಸರ್ಕಾರ ಎಷ್ಟು ಅನುದಾನ ನೀಡಿದೆ, ಸಹಕಾರ ಸಂಸ್ಥೆಗಳಿಗೆ ಎಷ್ಟು ಸಹಾಯ ಮಾಡಿದೆ ಎಂಬುದನ್ನು ಅಮಿತ್ ಶಾ ತಿಳಿಸಲಿ. ಕೇವಲ ಬಂದು ಹೋಗುವುದರಲ್ಲಿ ಅರ್ಥವಿಲ್ಲ’ ಎಂದು ಒತ್ತಾಯಿಸಿದರು.
ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ನವೀನ್ ಡಿಸೋಜ, ಪಕ್ಷದ ಪ್ರಮುಖರಾದ ಶಶಿಧರ್ ಹೆಗ್ಡೆ, ಪ್ರಕಾಶ್ ಸಾಲಿಯಾನ್, ಭಾಸ್ಕರ್ ರಾವ್, ಅಪ್ಪಿ, ಸಬಿತಾ ಮಿಸ್ಕಿತ್, ಮೀನಾ ಟೆಲ್ಲಿಸ್, ರಮಾನಂದ ಪೂಜಾರಿ, ಫಯಾಜ್ ಅಮೆಯಾರ್ ಇದ್ದರು.