Home Mangalorean News Kannada News ಅಮೋನಿಯಂ ಅನಿಲ ಸೋರಿಕೆ : ನಾಲ್ವರು ಕಾರ್ಮಿಕರು ಅಸ್ವಸ್ಥ

ಅಮೋನಿಯಂ ಅನಿಲ ಸೋರಿಕೆ : ನಾಲ್ವರು ಕಾರ್ಮಿಕರು ಅಸ್ವಸ್ಥ

Spread the love

ಅಮೋನಿಯಂ ಅನಿಲ ಸೋರಿಕೆ : ನಾಲ್ವರು ಕಾರ್ಮಿಕರು ಅಸ್ವಸ್ಥ

ಬೈಕಂಪಾಡಿ ಕೈಗಾರಿಕಾ ಪ್ರದೇಶದ ಮೀನು ಸಂಸ್ಕರಣಾ ಘಟಕದಲ್ಲಿ ಅಮೋನಿಯಾ ಅನಿಲ ಸೋರಿಕೆಯಾಗಿದ್ದು ನಾಲ್ವರು ಕಾರ್ಮಿಕರು ತೀವ್ರ ಅಸ್ವಸ್ಥಗೊಂಡು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸುಮಾರು 25 ಮಂದಿ ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಇವರಲ್ಲಿ ಉತ್ತರ ಭಾರತ ಮೂಲದ ನಾಲ್ವರು ಕಾರ್ಮಿಕರ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಕಂಪೆನಿಯಲ್ಲಿ 200ಕ್ಕೂ ಅಧಿಕ ಕಾರ್ಮಿಕರಿದ್ದು, ಪಾಳಿಯಲ್ಲಿ ಕೆಲಸ ನಡೆಯುತ್ತಿತ್ತು. ಗುರುವಾರ ಸಂಜೆ 4.30ರ ಸುಮಾರಿಗೆ ಸ್ಥಾವರದ ಒಳಗಿರುವ ಅಮೋನಿಯಾ ಸಾಗಾಟ ಪೈಪ್ ಒಂದರಲ್ಲಿ ಸೋರಿಕೆ ಕಂಡುಬಂತು. ಘಟಕದ ಸಮೀಪ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಸೋರಿಕೆಯಿಂದ ಉಸಿರುಗಟ್ಟಿದಂತಾಗಿ ಬೊಬ್ಬೆ ಹಾಕಿದ್ದಾರೆ. ತತ್‌ಕ್ಷಣ ಸೈರನ್ ಮೊಳಗಿಸಿ ಕಾರ್ಮಿಕರನ್ನು ಹೊರಗಡೆ ಕರೆದುಕೊಂಡು ಬಂದು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಯಿತು.
ಅಸ್ವಸ್ಥರಾದವರನ್ನು ಕಂಪೆನಿಯ ಆಡಳಿತವು ತುರ್ತಾಗಿ ಚಿಕಿತ್ಸೆಗೆ ದಾಖಲಿಸಲು ಕ್ರಮ ಕೈಗೊಂಡಿತು. ಅಮೋನಿಯಾ ಸೋರಿಕೆ ನಿಯಂತ್ರಣಕ್ಕೆ ಸ್ಥಳೀಯ ಎಂಸಿಎಫ್ ಸಹಿತ ಅಗ್ನಿಶಾಮಕ ಪಡೆಯು ಧಾವಿಸಿ ಕಾರ್ಯಾಚರಣೆ ನಡೆಸಿತು. ಮಾಹಿತಿ ತಿಳಿಯುತ್ತಿದ್ದಂತೆ ಮಂಗಳೂರು ತಹಶೀಲ್ದಾರ್, ಉಪತಹಶೀಲ್ದಾರ್, ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ತುರ್ತು ಮಾಹಿತಿ ಪಡೆದುಕೊಂಡರು. ಅಮೋನಿಯ ಸೋರಿಕೆ ನಿಯಂತ್ರಣಕ್ಕೆ ಕೈಗೊಂಡ ಕ್ರಮವನ್ನು ಪರಿಶೀಲಿಸಿದರು. ಪಣಂಬೂರು ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಕಾನೂನು ಕ್ರಮ ಜರಗಿಸಿದ್ದಾರೆ.


Spread the love

Exit mobile version