ಅಯೋಧ್ಯೆ ಕಾಣಿಕೆ ಹಣ ಕಳವು ಪ್ರಕರಣ: ಪಾರದರ್ಶಕ ತನಿಖೆಗೆ ವಿಎಚ್‌ಪಿ ಬದ್ಧ – ಅಲೋಕ್ ಕುಮಾರ್
ಮಂಗಳೂರು: ಅಯೋಧ್ಯೆ ಶ್ರೀರಾಮ ಮಂದಿರದ ಕಾಣಿಕೆ ಹಣ ಕಳವು ಪ್ರಕರಣ ದೇಶಕ್ಕೆ ತೀವ್ರ ಆಘಾತ ಉಂಟುಮಾಡಿದ್ದು, ಪ್ರಕರಣದ ತಪ್ಪಿತಸ್ಥರ ವಿರುದ್ಧ ಯಾವುದೇ ರೀತಿಯ ರಾಜಿ ಇಲ್ಲದೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಅಂತರರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣ ಬೆಳಕಿಗೆ ಬಂದ ತಕ್ಷಣವೇ ಉನ್ನತ ಮಟ್ಟದ ತನಿಖೆಗೆ ವಿಎಚ್‌ಪಿ ಒತ್ತಾಯಿಸಿದ್ದು, ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ತನಿಖೆ ನಡೆಸುವಂತೆ ಆಗ್ರಹಿಸಲಾಗಿದೆ ಎಂದರು.
ತನಿಖೆಗೆ ಸಂಪೂರ್ಣ ಸಹಕಾರ ನೀಡುವ ಉದ್ದೇಶದಿಂದ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪಾರದರ್ಶಕವಾಗಿ ನಡೆದುಕೊಂಡಿದ್ದು, ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹಾಗೂ ಅನಿಲ್ ಮಿಶ್ರಾ ಅವರು ನೈತಿಕ ಹೊಣೆ ಹೊತ್ತು ಸ್ವಯಂಪ್ರೇರಿತವಾಗಿ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿಸಿದರು.
ಈ ಪ್ರಕರಣದಲ್ಲಿ ವಿಎಚ್‌ಪಿ ಸ್ವತಃ ಎಫ್‌ಐಆರ್ ದಾಖಲಿಸಿದ್ದು, ಸುಪ್ರೀಂ ಕೋರ್ಟ್ ಕೂಡ ಪ್ರಕರಣದ ಮೇಲ್ವಿಚಾರಣೆ ನಡೆಸುತ್ತಿದೆ. ಯಾವುದೇ ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. 2026ರ ಅಂತ್ಯದೊಳಗೆ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯದ ಮೂಲಕ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವ ವಿಶ್ವಾಸವಿದೆ ಎಂದು ಹೇಳಿದರು.
ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ವೃತ್ತಿಪರ ದೇವಸ್ಥಾನ ಆಡಳಿತ ಅನುಭವ ಹೊಂದಿರುವ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ)ಯನ್ನು ನೇಮಕ ಮಾಡಲಾಗುವುದು. ಆಧುನಿಕ ತಂತ್ರಜ್ಞಾನ ಹಾಗೂ ಪಾರದರ್ಶಕ ಲೆಕ್ಕಪತ್ರ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದ್ದು, ಸಿಇಒ ಹುದ್ದೆಗೆ ದೇಶದ ವಿವಿಧ ಭಾಗಗಳಿಂದ ಸುಮಾರು 5,000 ಅರ್ಜಿಗಳು ಬಂದಿದ್ದು, ಅವುಗಳ ಪರಿಶೀಲನೆ ನಡೆಯುತ್ತಿದೆ ಎಂದರು.
ಸಂಸತ್ ಭವನದ ಎದುರು ಸಾಧು-ಸಂತರ ವೇಷಧರಿಸಿ ನಡೆದ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಅಲೋಕ್ ಕುಮಾರ್, ರಾಜಕೀಯ ಪಕ್ಷಗಳು ಸಾಧು-ಸಂತರನ್ನು ಅವಮಾನಿಸುವುದನ್ನು ನಿಲ್ಲಿಸಬೇಕು ಎಂದು ಎಚ್ಚರಿಕೆ ನೀಡಿದರು.
ವಿಪಕ್ಷ ನಾಯಕರು ಹಾಗೂ ಪ್ರಮುಖ ರಾಜಕಾರಣಿಗಳು ಸಾಧು-ಸಂತರ ವೇಷಧರಿಸಿ ಭಗವಾ ವಸ್ತ್ರ ಮತ್ತು ಸಂತ ಸಮುದಾಯವನ್ನು ಅವಮಾನಿಸಿದ್ದಾರೆ. ಶ್ರೀರಾಮ ಮಂದಿರ ಚಳವಳಿಯನ್ನು ಆರಂಭದಿಂದಲೂ ವಿರೋಧಿಸುತ್ತಾ ಬಂದ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷಗಳು ಈಗ ಸಂತ ಸಮುದಾಯವನ್ನು “ಚೋರ್” ಎಂದು ಬಿಂಬಿಸಲು ಯತ್ನಿಸುತ್ತಿವೆ. ಸನಾತನ ಧರ್ಮ ಮತ್ತು ಸಂತ ಸಮುದಾಯದ ವಿರುದ್ಧದ ಈ ರೀತಿಯ ನಡೆಗೆ ದೇಶದ ಜನರು ತಕ್ಕ ಉತ್ತರವನ್ನು ಮುಂಬರುವ ಚುನಾವಣೆಗಳಲ್ಲಿ ನೀಡಲಿದ್ದಾರೆ ಎಂದು ಹೇಳಿದರು.
ಕರ್ನಾಟಕ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ಕುರಿತು ನೀಡುತ್ತಿರುವ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಅಲೋಕ್ ಕುಮಾರ್, ದೇಶದಲ್ಲಿ ವಾಕ್‌ಸ್ವಾತಂತ್ರ್ಯ ಇರುವುದರಿಂದ ಯಾರಾದರೂ ಮಾತನಾಡಬಹುದು. ಆದರೆ ಅಲ್ಪಸಂಖ್ಯಾತರನ್ನು ಮೆಚ್ಚಿಸಲು ಇಂತಹ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದರು.
ಆರ್‌ಎಸ್‌ಎಸ್‌ನ ಗುರುದಕ್ಷಿಣೆ ಸ್ವಯಂಸೇವಕರು ಸ್ವಯಂಪ್ರೇರಿತವಾಗಿ ನೀಡುವ ಪವಿತ್ರ ಸಂಭಾವನೆಯಾಗಿದ್ದು, ಅದು ಸಾರ್ವಜನಿಕ ದೇಣಿಗೆಯಲ್ಲ. ಬಿಹಾರ ಹೈಕೋರ್ಟ್ ಹಾಗೂ ಆದಾಯ ತೆರಿಗೆ ಇಲಾಖೆಯ ತೀರ್ಪುಗಳ ಪ್ರಕಾರ ಅದು ತೆರಿಗೆ ವ್ಯಾಪ್ತಿಗೆ ಬರುವುದಿಲ್ಲ. ಎಲ್ಲ ವಿಚಾರಗಳು ಸ್ಪಷ್ಟವಾಗಿದ್ದರೂ ಕರ್ನಾಟಕ ಗೃಹ ಸಚಿವರ ಹೇಳಿಕೆ ಹಾಸ್ಯಾಸ್ಪದವಾಗಿದೆ ಎಂದು ಹೇಳಿದರು.
ಜಂತರ್ ಮಂತರ್‌ನಲ್ಲಿ ನಡೆದ ಸಿಜೆಪಿ ವಿದ್ಯಾರ್ಥಿ ಪ್ರತಿಭಟನೆ ಕುರಿತು ಮಾತನಾಡಿದ ಅವರು, ವಿದ್ಯಾರ್ಥಿಗಳ ಪ್ರತಿಭಟನೆ ನ್ಯಾಯಸಮ್ಮತವಾಗಿದ್ದು, ಅದರಲ್ಲಿ ಯಾವುದೇ ತಪ್ಪಿಲ್ಲ ಎಂದರು.
NEET ಪರೀಕ್ಷೆ ರದ್ದಾದರೆ ವಿದ್ಯಾರ್ಥಿಗಳ ವರ್ಷಗಳ ಶ್ರಮ ಹಾಗೂ ಪೋಷಕರ ತ್ಯಾಗ ವ್ಯರ್ಥವಾಗುತ್ತದೆ. ಆದ್ದರಿಂದ ಸರ್ಕಾರಗಳು ಪ್ರಶ್ನೆಪತ್ರಿಕೆ ಸೋರಿಕೆಯಾಗದಂತಹ ವಿಶ್ವಾಸಾರ್ಹ ಪರೀಕ್ಷಾ ವ್ಯವಸ್ಥೆ ರೂಪಿಸಬೇಕು ಎಂದು ಒತ್ತಾಯಿಸಿದರು.
ದೆಹಲಿ ವಿದ್ಯಾರ್ಥಿ ಪ್ರತಿಭಟನೆಯ ಹಿಂದೆ ಎಡಪಂಥೀಯ ಸಂಘಟನೆಗಳ ಕೈವಾಡವಿದ್ದು, ಪೊಲೀಸ್ ಕ್ಯಾಮೆರಾಗಳಲ್ಲಿ ಅದರ ಸ್ಪಷ್ಟ ಸಾಕ್ಷ್ಯಗಳಿವೆ ಎಂದು ಆರೋಪಿಸಿದ ಅವರು, ಪ್ರತಿಭಟನೆಯಲ್ಲಿ 2,900ಕ್ಕೂ ಹೆಚ್ಚು ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಗಳು ಭಾಗವಹಿಸಿದ್ದರು. ಬ್ಯಾನರ್‌ಗಳು ಹಾಗೂ ಭಾಷಣಗಳಲ್ಲಿ ಅಶ್ಲೀಲ ಮತ್ತು ಕೀಳುಮಟ್ಟದ ಭಾಷೆ ಬಳಸಲಾಗಿತ್ತು. ಪ್ರತಿಭಟನೆಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಅಶ್ಲೀಲ ಭಾಷೆ ಬಳಸಿದವರನ್ನು ಕ್ಷಮಿಸುವಂತೆ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಕರೆಗೆ ವಿಶ್ವ ಹಿಂದೂ ಪರಿಷತ್ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ ಎಂದು ಅಲೋಕ್ ಕುಮಾರ್ ಹೇಳಿದರು.
